ಗುಂಪು ಹತ್ಯೆ, ಗೋ ರಕ್ಷಣೆಯ ಹೆಸರಿನಲ್ಲಿ ನಡೆದ ಹಿಂಸಾಚಾರಗಳ ಮಾಹಿತಿ ಕೇಳಿದ ಸುಪ್ರೀಂ

ಗುಂಪು ಹತ್ಯೆ, ಗೋ ರಕ್ಷಣೆಯ ಹೆಸರಿನಲ್ಲಿ ನಡೆದ ಹಿಂಸಾಚಾರಗಳ ಮಾಹಿತಿ ಕೇಳಿದ ಸುಪ್ರೀಂ

ನವದೆಹಲಿ: ಗುಂಪು ಹತ್ಯೆ ಮತ್ತು ಗೋ ರಕ್ಷಣೆಯ ಹೆಸರಿನಲ್ಲಿ ನಡೆದ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವಿಮೆನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಆರ್‌ ಗವಾಯಿ, ಅರವಿಂದ್ ಕುಮಾರ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಮುಂದಿನ ವಿಚಾರಣೆಯನ್ನು ಆರು ವಾರಗಳ ನಂತರಕ್ಕೆ ನಿಗದಿಪಡಿಸಿದೆ.

ಅರ್ಜಿದಾರರು ದೇಶದ ಎಲ್ಲಾ ರಾಜ್ಯಗಳನ್ನು ತಮ್ಮ ಪ್ರತಿವಾದಿಗಳಾಗಿ ಹೆಸರಿಸಿದ್ದಾರೆ. ಈ ಪೈಕಿ ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಈಗಾಗಲೇ ತಮ್ಮ ಪ್ರತಿಕ್ರಿಯೆ ನೀಡಿವೆ. ಉಳಿದ ರಾಜ್ಯಗಳು ಅಫಿಡವಿಟ್ ಸಲ್ಲಿಸಿಲ್ಲ. ಹಾಗಾಗಿ, ಆ ರಾಜ್ಯಗಳು ವರದಿ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ.

ಎನ್‌ಎಫ್‌ಐಡಬ್ಲ್ಯು ಪರ ನ್ಯಾಯಾಲಯಕ್ಕೆ ಹಾಜರಾದ ವಕೀಲ ನಿಝಾಂ ಪಾಶಾ ಅವರು, ಮಧ್ಯಪ್ರದೇಶ ಮತ್ತು ಹರಿಯಾಣ ಸಲ್ಲಿಸಿರುವ ಅಫಿಡವಿಟ್‌ ಆಧಾರದಲ್ಲಿ ವಾದ ಮಂಡಿಸಿದ್ದಾರೆ. ಈ ಎರಡೂ ರಾಜ್ಯಗಳ ಪೊಲೀಸರು ತೆಹ್ಸೀನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರೂಪಿಸಿದ ಮಾರ್ಗಸೂಚಿಗಳನ್ನು ಕಡೆಗಣಿಸಿ ಗುಂಪು ಹತ್ಯೆ, ಹಿಂಸಾಚಾರದ ಘಟನೆಗಳಿಗೆ ಸಾಮಾನ್ಯ ಅಪಘಾತ ಅಥವಾ ಹೋರಾಟದ ಬಣ್ಣ ಬಳಿದಿದ್ದಾರೆ ಎಂದು ಆರೋಪಿಸಿದ್ದಾರೆ.

ತೆಹ್ಸೀನ್ ಪೂನವಾಲಾ ಅವರ ಪ್ರಕರಣದ ತೀರ್ಪಿನಲ್ಲಿ, ಹತ್ಯೆ ಮತ್ತು ಗುಂಪು ಹಿಂಸಾಚಾರವನ್ನು ತಡೆಗಟ್ಟುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸಮಗ್ರ ಮಾರ್ಗಸೂಚಿಗಳನ್ನು ನೀಡಿದೆ. ಗುಂಪು ಹತ್ಯೆಯನ್ನು ಸಾಮಾನ್ಯ ಪ್ರಕರಣದಂತೆ ಪೊಲೀಸರು ಹೇಗೆ ಬಿಂಬಿಸಿದ್ದಾರೆ ಎಂದು ನ್ಯಾಯಾಲದ ಗಮನಕ್ಕೆ ತರಲು ವಕೀಲ ನಿಝಾಂ ಪಾಶಾ ಅವರು ಮಧ್ಯಪ್ರದೇಶ ಸಲ್ಲಿಸಿರುವ ಅಫಿಡವಿಟ್‌ನ ಕೆಲ ಭಾಗಗಳನ್ನು ನ್ಯಾಯಪೀಠದ ಮುಂದೆ ಓದಿ ವಿವರಿಸಿದ್ದಾರೆ.

ಮಾಧ್ಯಮ ವರದಿಗಳು ಗುಂಪು ಹತ್ಯೆ ಎಂದ ಪ್ರಕರಣಗಳನ್ನು ಪೊಲೀಸರು ಸಾಮಾನ್ಯ ಗಲಾಟೆಯ ಪ್ರಕರಣಗಳು ಎಂದು ಉಲ್ಲೇಖಿಸಿದ್ದಾರೆ. ಪೊಲೀಸರ ವರದಿಗೂ ಮಾಧ್ಯಮಗಳ ವರದಿಗೂ ತಾಳೆಯಾಗುತ್ತಿಲ್ಲ. ಮಾಂಸ ಕೊಂಡೊಯ್ದ ಕಾರಣಕ್ಕೆ ಇಬ್ಬರು ವ್ಯಕ್ತಿಗಳ ಮೇಲೆ ನಡೆದ ಗುಂಪು ಹಲ್ಲೆಯ ಘಟನೆಯೊಂದಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್ ಕೂಡ ದಾಖಲಾಗಿಲ್ಲ ಎಂದು ವಕೀಲ ಪಾಶಾ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಮಧ್ಯಪ್ರದೇಶದಲ್ಲಿ ಗುಂಪಿನಿಂದ ಥಳಿಸಿ ಹತ್ಯೆ ಘಟನೆ ನಡೆದಿದ್ದರೂ, ಸಂತ್ರಸ್ತರ ವಿರುದ್ಧವೇ ಗೋವಧೆ ಪ್ರಕರಣವನ್ನು ದಾಖಲಿಸಲಾಗಿದೆ. ಸರ್ಕಾರ ಗುಂಪು ಹತ್ಯೆ ಘಟನೆಯನ್ನು ನಿರಾಕರಿಸಿದರೆ ತೆಹ್ಸೀನ್ ಪೂನಾವಾಲಾ ಪ್ರಕರಣದಲ್ಲಿಯ 2018ರ ತೀರ್ಪಿನ ಪಾಲನೆ ಹೇಗೆ ಸಾಧ್ಯ? ಎಂದು ವಕೀಲ ನಿಝಾಂ ಪಾಶಾ ಪ್ರಶ್ನಿಸಿದ್ದಾರೆ.

ಮಾಂಸದ ರಾಸಾಯನಿಕ ವಿಶ್ಲೇಷಣೆ ನಡೆಸದೆ ಎಫ್ಐಆರ್ ದಾಖಲಿಸಿದ್ದು ಹೇಗೆ? ಗಲಾಟೆ ನಡೆಸಿದ್ದವರ ವಿರುದ್ಧ ಏಕೆ ಎಫ್ಐಆರ್ ದಾಖಲಿಸಿಲ್ಲ? ನೀವು ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೀರಿ? ಎಂದು ಮಧ್ಯಪ್ರದೇಶ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಾಲಯ, ಘಟನೆಯ ವಿವರಗಳನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಿದೆ. ಇದುವರೆಗೆ ಪ್ರತಿಕ್ರಿಯೆ ನೀಡದ ರಾಜ್ಯಗಳೂ ವರದಿ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ.

Previous Post
ಸಿಎಎ ರದ್ದು, ಉಚಿತ ಎಲ್‌ಪಿಜಿ ಸಿಲಿಂಡರ್‌ ಟಿಎಂಸಿ ಪ್ರಣಾಳಿಕೆ ಘೋಷಣೆ
Next Post
ಪ್ರಧಾನಿ ಮೋದಿ ಭ್ರಷ್ಟಚಾರದ ಚಾಂಪಿಯನ್ – ರಾಹುಲ್ ಗಾಂಧಿ ಆರೋಪ

Recent News