ಗುಜರಾತಿನಲ್ಲಿ ಗಣನೀಯವಾಗಿ ಮುಚ್ಚಲ್ಪಟ್ಟ ಸರಕಾರಿ ಶಾಲೆಗಳು

ಗುಜರಾತಿನಲ್ಲಿ ಗಣನೀಯವಾಗಿ ಮುಚ್ಚಲ್ಪಟ್ಟ ಸರಕಾರಿ ಶಾಲೆಗಳು

ಅಹಮದಾಬಾದ್, ಫೆ. 2: ಪ್ರಧಾನ ಮಂತ್ರಿ ನರೇಂದ್ರ ಮೋದಿಯ ತವರು ರಾಜ್ಯ ಗುಜರಾತ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ 170 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ ಎಂಬಂತಹ ಸ್ಪೋಟಕ ವರದಿ ಬಹಿರಂಗವಾಗಿದೆ. ಗುಜರಾತ್‌ನಲ್ಲಿನ ದೇವಭೂಮಿ ದ್ವಾರಕಾ, ಗಿರ್ ಸೋಮನಾಥ್ ಮತ್ತು ಕಚ್ ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳ ಕೊರತೆಯಿಂದ 329 ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.
ಫೆಬ್ರವರಿ 26ರಂದು ಗುಜರಾತ್ ವಿಧಾನಸಭೆಗೆ ಸರ್ಕಾರ ನೀಡಿದ ಅಂಕಿಅಂಶಗಳ ಪ್ರಕಾರ, 2020-21ಕ್ಕೆ ಹೋಲಿಸಿದರೆ 2021-22ರಲ್ಲಿ ಮುಚ್ಚಲಾದ ಶಾಲೆಗಳ ಸಂಖ್ಯೆ ಬಹುಪಟ್ಟು ಹೆಚ್ಚಾಗಿದೆ. 2020-21ರಲ್ಲಿ 20 ಶಾಲೆಗಳನ್ನು ಮುಚ್ಚಿದ್ದರೆ, 2021-22ರಲ್ಲಿ ಈ ಸಂಖ್ಯೆ 133ಕ್ಕೆ ಏರಿದೆ. ಆದರೆ 2022-23ರಲ್ಲಿ ಈ ಸಂಖ್ಯೆ 17ಕ್ಕೆ ಇಳಿದಿದೆ ಎಂದು ತಿಳಿಸಿದೆ.
ಸದನದಲ್ಲಿ ಈ ವಿಷಯದಲ್ಲಿ ಪ್ರಶ್ನೆಯನ್ನು ಕೇಳಿದ್ದ ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಮಾದ್ಯಮಗಳ ಜೊತೆ ಮಾತನಾಡಿದ್ದು, ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ ಮತ್ತು ಹೊಸ ಶಾಲೆಗಳನ್ನು ತೆರೆಯುತ್ತಿಲ್ಲ. ಒಂದು ಕಡೆ, ಸರ್ಕಾರವು ತನ್ನ ಶಾಲೆಗಳಲ್ಲಿ 100 ಪ್ರತಿಶತ ದಾಖಲಾತಿಯನ್ನು ಸಾಧಿಸುವುದಾಗಿ ಹೇಳಿಕೊಂಡಿದೆ. ಇದು ಶಾಲೆಗಳನ್ನು ಮುಚ್ಚುತ್ತಿದೆ, ವಿಶೇಷವಾಗಿ ಮಕ್ಕಳಿಗೆ ಬೇರೆ ಯಾವುದೇ ಆಯ್ಕೆಗಳಿಲ್ಲದ ಪ್ರದೇಶಗಳಲ್ಲಿಈ ಬೆಳವಣಿಗೆ ನಡೆದಿದೆ ಎಂದು ಆರೋಪಿಸಿದ್ದಾರೆ. ಮಾಹಿತಿಯ ಪ್ರಕಾರ, ಶಾಲೆಗಳಾದ್ಯಂತ I ಮತ್ತು VIII ನೇ ತರಗತಿಗಳ ನಡುವಿನ 329 ತರಗತಿಗಳನ್ನು ಈ ಮೂರು ವರ್ಷಗಳಲ್ಲಿ ಮುಚ್ಚಲಾಗಿದೆ. 2021-22ರಲ್ಲಿ 266 ತರಗತಿಗಳನ್ನು ಮುಚ್ಚಲಾಗಿದೆ. ನಂತರ 2021-22 ರಲ್ಲಿ 53 ಮತ್ತು 2022-23ರಲ್ಲಿ 10 ತರಗತಿಗಳನ್ನು ವಿದ್ಯಾರ್ಥಿಗಳಿಲ್ಲದೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ದೇವಭೂಮಿ ದ್ವಾರಕಾದಲ್ಲಿ 42 ಶಾಲೆಗಳನ್ನು ಮುಚ್ಚಲಾಗಿದ್ದು, 107 ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಗಿರ್ ಸೋಮನಾಥ್‌ನಲ್ಲಿ 8 ಶಾಲೆಗಳನ್ನು ಬಂದ್ ಮಾಡಲಾಗಿದ್ದು, 76 ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಕಚ್‌ನಲ್ಲಿ 9 ಶಾಲೆಗಳನ್ನು ಬಂದ್‌ ಮಾಡಲಾಗಿದ್ದು, 47 ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ನಿರ್ದಿಷ್ಟ ತರಗತಿಗಳಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳ ಕಾರಣದಿಂದಾಗಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಸರ್ಕಾರ ಉಲ್ಲೇಖಿಸಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನಗೊಳಿಸಲಾಗಿದೆ ಎಂದು ಕಚ್ ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಭೂಪೇಂದ್ರ ವಘೇಲಾ ಹೇಳಿದ್ದಾರೆ.
ದೇವಭೂಮಿ ದ್ವಾರಕಾ ಮತ್ತು ಕಚ್ ಜಿಲ್ಲೆಗಳಲ್ಲಿ 10%ಕ್ಕಿಂತ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಒಬ್ಬ ಶಿಕ್ಷಕರು ನಡೆಸುತ್ತಿದ್ದಾರೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, ದೇವಭೂಮಿ ದ್ವಾರಕಾದಲ್ಲಿ 17.72 ಪ್ರತಿಶತದಷ್ಟು ಇಂತಹ ಶಾಲೆಗಳಿವೆ, ಕಚ್‌ನ ಅಂಕಿ ಅಂಶವು 10.54 ಪ್ರತಿಶತದಷ್ಟಿದೆ. ರಾಜ್ಯದಲ್ಲಿ ಇರುವ 30,510 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1,595 ಶಾಲೆಗಳು (ಶೇ. 5.22) ಒಬ್ಬ ಶಿಕ್ಷಕರೊಂದಿಗೆ ನಡೆಯುತ್ತಿವೆ. ಗುಜರಾತ್‌ನಲ್ಲಿ ಕೇವಲ ಒಬ್ಬ ಶಿಕ್ಷಕರನ್ನು ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಸುಮಾರು 700 ರಿಂದ 1,606ಕ್ಕೆ ಏರಿಕೆಯಾಗಿದೆ ಎಂದು ವರದಿಯು ತಿಳಿಸಿದೆ.

Previous Post
ಅಂಬಾನಿ ಪುತ್ರನ ಮದುವೆಗಾಗಿ ಜಾಮ್‌ನಗರ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ
Next Post
ಬಿಜೆಪಿಯ ಚುನಾವಣಾ ಬಾಂಡ್‌ ವಂಚನೆ ಪ್ರಕರಣ: ದೂರು ಹಿಂಪಡೆದ ಜಡ್ಜ್‌

Recent News