ಗುಜರಾತ್ ನಲ್ಲಿ ನಕಲಿ ಟೋಲ್‌ ಪ್ಲಾಝಾ ಬಳಿಕ ನಕಲಿ ಆಸ್ಪತ್ರೆ ಪತ್ತೆ

ಗುಜರಾತ್ ನಲ್ಲಿ ನಕಲಿ ಟೋಲ್‌ ಪ್ಲಾಝಾ ಬಳಿಕ ನಕಲಿ ಆಸ್ಪತ್ರೆ ಪತ್ತೆ

ಅಹಮದಾಬಾದ್, ಜು. 12: ಕೆಲ ತಿಂಗಳ ಹಿಂದೆ ಗುಜರಾತ್‌ನಲ್ಲಿ ನಕಲಿ ಟೋಲ್‌ ಪ್ಲಾಝಾ ಹಾಗೂ ನಕಲಿ ಸರ್ಕಾರಿ ಕಚೇರಿಗಳು ಪತ್ತೆಯಾಗಿದ್ದವು. ಇದೀಗ ಅಹಮದಾಬಾದ್‌ನಲ್ಲಿ ನಕಲಿ ಆಸ್ಪತ್ರೆಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಯೊಬ್ಬಳು ಮೃತಪಟ್ಟ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ತಂಡ ಅಹಮದಾಬಾದ್‌ ಜಿಲ್ಲೆಯ ಭವ್ಲಾ ತಾಲೂಕಿನ ಕೇರಳ ಎಂಬ ಗ್ರಾಮದಲ್ಲಿ ‘ಅನನ್ಯ ಮಲ್ಟಿ ಸ್ಪೆಷಾಲಿಟಿ’ಎಂಬ ಹೆಸರಿನ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ವಿಷಯ ಬಯಲಿಗೆಳೆದಿದ್ದಾರೆ.

ಅಧಿಕಾರಿಗಳ ಪ್ರಕಾರ, ಸಂಪೂರ್ಣ ಆಸ್ಪತ್ರೆ ನಕಲಿ ವೈದ್ಯರಿಂದ ನಡೆಯುತ್ತಿತ್ತು. ಬೇರೆ ವೈದ್ಯರ ಹೆಸರಿನಲ್ಲಿ ಆಸ್ಪತ್ರೆ ನೋಂದಣಿಯಾಗಿತ್ತು. ಸದ್ಯ, ಆಸ್ಪತ್ರೆಯನ್ನು ಮುಚ್ಚಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. “ವೈದ್ಯಕೀಯ ಅಧ್ಯಯನದ ಹಿನ್ನೆಲೆ ಇಲ್ಲದ ಮೆಹುಲ್ ಚಾವ್ಡಾ ಎಂಬ ವ್ಯಕ್ತಿ ನೇಪಾಳದ ನರ್ಸಿಂಗ್ ಸಿಬ್ಬಂದಿಯೊಬ್ಬಳ ಜೊತೆ ಆಸ್ಪತ್ರೆ ನಡೆಸುತ್ತಿದ್ದ. ಆಕೆಯೂ ತನ್ನ ನರ್ಸಿಂಗ್ ಅಧ್ಯಯನದ ಕುರಿತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆ ನಡೆಯುತ್ತಿತ್ತು. ಮತ್ತೊಬ್ಬರ ಹೆಸರಿನಲ್ಲಿ ಅದನ್ನು ನೋಂದಣಿ ಮಾಡಲಾಗಿತ್ತು. ಈ ಕುರಿತು ಶುಕ್ರವಾರ (ಜುಲೈ 12) ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶೈಲೇಶ್ ಪರ್ಮಾರ್ ಹೇಳಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ಇಎನ್‌ಟಿ, ಮೂತ್ರ ವಿಭಾಗ, ಚರ್ಮ ವಿಭಾಗ ಸೇರಿದಂತೆ ಹಲವು ವಿಭಾಗಗಳಿದ್ದು,ದಿನವಿಡಿ ಕಾರ್ಯನಿರ್ವಹಿಸಲಾಗುತ್ತಿತ್ತು. ಆಸ್ಪತ್ರೆಯಲ್ಲಿ ಬಾಲಕಿಯೊಬ್ಬಳು ಮೃತಪಟ್ಟ ನಂತರ, ಆಕೆಯ ಕುಟುಂಬಸ್ಥರು ವಿಡಿಯೋ ಚಿತ್ರೀಕರಿಸಿದ್ದರು. ಈ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.

ಸಾಮಾನ್ಯ ಆನಾರೋಗ್ಯದ ಸಮಸ್ಯೆಯಿಂದಾಗಿ ಕುಟುಂಬವು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿತ್ತು. ಕೆಲ ದಿನಗಳಲ್ಲಿ ಬಾಲಕಿಯ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿತು. ಅಲ್ಲಿನ ನಕಲಿ ವೈದ್ಯರು ಇಲ್ಲಿ ಸರಿಪಡಿಸಲು ಸಾಧ್ಯವಿಲ್ಲ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಎಂದು ಹೇಳಿದ್ದರು. ಬಾಲಕಿಗೆ 1.5 ಲಕ್ಷ ರೂ. ಶುಲ್ಕ ವಿಧಿಸಿದ್ದ ಆಸ್ಪತ್ರೆ ಸಿಬ್ಬಂದಿ, ಪೋಷಕರು ಪರಿಪರಿಯಾಗಿ ಕೇಳಿಕೊಂಡರೂ ವೈದ್ಯಕೀಯ ವರದಿಯನ್ನು ಮಾತ್ರ ನೀಡಿರಲಿಲ್ಲ. ಬೇರೆ ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಬಾಲಕಿ ಮೃತಪಟ್ಟಿದ್ದಳು. ಬಾಲಕಿಯ ಸಾವಿನ ನಂತರ ಆಸ್ಪತ್ರೆ ನಡೆಸುತ್ತಿರುವವರ ವಿರುದ್ಧ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಅಹಮದಾಬಾದ್‌ ಎಸ್‌ಪಿ ತಿಳಿಸಿದ್ದಾರೆ

Previous Post
ಜಮೀನು ಬಿಟ್ಟು ಕೊಡಲು ನಿರಾಕರಿಸಿದ ಆದಿವಾಸಿ ಮಹಿಳೆಗೆ ಲೈಂಗಿಕ ದೌರ್ಜನ್ಯ
Next Post
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುವ ಕನಸಿಗೆ ಬೆಂಗಳೂರು ಕೇಂದ್ರಬಿಂದುವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ 

Recent News