ಚಿಕ್ಕಬಳ್ಳಾಪುರ ಜಿಲ್ಲೆಯ ಆರ್ಥಿಕ ಸುಧಾರಣೆಗೆ ಕೊಡುಗೆ ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಯೋಜನೆ ನೀಡಿದ ಕೇಂದ್ರ ಸರ್ಕಾರಕ್ಕೆ ಡಾ.ಸುಧಾಕರ್ ಧನ್ಯವಾದ

ಚಿಕ್ಕಬಳ್ಳಾಪುರ ಜಿಲ್ಲೆಯ ಆರ್ಥಿಕ ಸುಧಾರಣೆಗೆ ಕೊಡುಗೆ ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಯೋಜನೆ ನೀಡಿದ ಕೇಂದ್ರ ಸರ್ಕಾರಕ್ಕೆ ಡಾ.ಸುಧಾಕರ್ ಧನ್ಯವಾದ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜಕೀಯ ಬಜೆಟ್‌ ಮಂಡಿಸದೆ, ರಾಷ್ಟ್ರೀಯ ಬಜೆಟ್‌ ಮಂಡಿಸಿದೆ. ವೋಟ್‌ ಬ್ಯಾಂಕ್‌ ಬಜೆಟ್‌ ಮಂಡಿಸದೆ ವಿಕಸಿತ ಭಾರತದ ಬಜೆಟ್‌ ನೀಡಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಅಭಿವೃದ್ಧಿ ಮತ್ತು ಜನಕಲ್ಯಾಣದ ಸಮತೋಲನ ಸಾಧಿಸಿರುವ ಕೇಂದ್ರ ಬಜೆಟ್, ತನ್ನ ಆಡಳಿತದ ರಾಜ್ಯಗಳನ್ನ ಆರ್ಥಿಕವಾಗಿ ದಿವಾಳಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಗಳಿಗೆ ಒಂದು ಒಳ್ಳೆಯ ಪಾಠವಾಗಿದೆ ಎಂದರು‌.

ಕೇಂದ್ರ ಸರ್ಕಾರದ 2024 ನೇ ಸಾಲಿನ ಬಜೆಟ್‌ ಕುರಿತು ಪ್ರತಿಕ್ರಿಯಿಸಿದ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಅಭಿವೃದ್ಧಿ ಗುರಿಯ ಹಾಗೂ ತೆರಿಗೆ ಹೊರೆ ಇಲ್ಲದ, ಸಮತೋಲಿತ ಬಜೆಟ್‌ ನೀಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದಿದ್ದರಿಂದ ಬಜೆಟ್‌ನಲ್ಲೂ ತಾರತಮ್ಯ ಮಾಡಬಹುದು ಎಂಬ ವಿರೋಧ ಪಕ್ಷಗಳ ಸುಳ್ಳಿನ ಊಹೆಗಳಿಗೆ ಈ ಬಜೆಟ್‌ ತಣ್ಣೀರು ಎರಚಿದೆ. ಈ ಬಜೆಟ್‌ ಯುವಜನರು, ಮಹಿಳೆಯರು, ರೈತರು ಸೇರಿದಂತೆ ಎಲ್ಲ ವರ್ಗದ ಆಶೋತ್ತರಗಳಿಗೆ ಸ್ಪಂದಿಸಿದೆ. ಇದು ಚುನಾವಣಾ ದೃಷ್ಟಿಯ ಬಜೆಟ್‌ ಆಗಿರದೆ ದೂರದೃಷ್ಟಿಯಿಂದ ದೇಶದ ಭವಿಷ್ಯವನ್ನು ಊಹಿಸಿ ಮಾಡಿದ ಬಜೆಟ್‌ ಎಂದು ಅವರು ಹೇಳಿದ್ದಾರೆ.

ಕೃಷಿ ಕ್ಷೇತ್ರದ ಸಮಗ್ರ ಪ್ರಗತಿಯ ದೃಷ್ಟಿಯಿಂದ ಹಲವು ಯೋಜನೆಗಳನ್ನು ತರಲಾಗಿದೆ. ತರಕಾರಿ ಪೂರೈಕೆಗಾಗಿ ಸಪ್ಲೈ ಚೈನ್‌ ಬಲಗೊಳಿಸುವ ಕ್ರಮದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ರೈತರಿಗೆ ಹೆಚ್ಚು ಲಾಭ ಸಿಗಲಿದೆ. ಈ ಭಾಗದಲ್ಲಿ ತರಕಾರಿ ಬೆಳೆಗಾರರ ಸಂಖ್ಯೆ ಹೆಚ್ಚಿರುವುದರಿಂದ ಈ ಕ್ರಮ ಶ್ಲಾಘನೀಯ. ಟಾಪ್ 500 ಕಂಪನಿಗಳಲ್ಲಿ 1 ಕೋಟಿ ಯುವಜನರಿಗೆ 12 ತಿಂಗಳ ಇಂಟರ್ನ್‌ಶಿಪ್ ಅವಕಾಶ, ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ 1 ತಿಂಗಳ ವೇತನದಂತಹ ಕ್ರಮಗಳು ಯುವಜನರಿಗೆ ಹೊಸ ಆಶಾಕಿರಣವನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸಚಿವರಿಗೆ ಧನ್ಯವಾದ

ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಯೋಜನೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಭಾಗಗಳ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ. ಇದರಿಂದಾಗಿ ಈ ಭಾಗದ ಆರ್ಥಿಕ ಸ್ಥಿತಿಯಲ್ಲಿ ಅಗಾಧ ಸುಧಾರಣೆ ಕಂಡುಬರಲಿದೆ. ಈ ಯೋಜನೆ ಕುರಿತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಈ ಹಿಂದೆ ಮನವಿ ಮಾಡಿದ್ದೆ. ಈ ಮನವಿಗೆ ಸ್ಪಂದಿಸಿ ಯೋಜನೆಯನ್ನು ಬಜೆಟ್‌ನಲ್ಲಿ ತಂದಿರುವುದಕ್ಕೆ ಅವರಿಗೆ ಅನಂತ ಧನ್ಯವಾದ ಸಲ್ಲಿಸುತ್ತೇನೆ ಎಂದು ಡಾ.ಕೆ.ಸುಧಾಕರ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಮಹಿಳಾ ಉದ್ಯೋಗಿಗಳಿಗೆ ಸುಭದ್ರತೆ ಒದಗಿಸಲು ವಸತಿ ನಿಲಯಗಳನ್ನು ಆರಂಭಿಸುವುದಾಗಿ ಬಜೆಟ್‌ನಲ್ಲಿ ಹೇಳಿರುವುದು ಕೂಡ ಶ್ಲಾಘನೀಯ. ಈ ಕುರಿತು ನನಗೂ ಚಿಂತನೆಗಳಿತ್ತು. ಇದನ್ನು ಕೇಂದ್ರವೇ ಕೈಗೆತ್ತಿಕೊಂಡಿರುವುದರಿಂದ ಸ್ವಾವಲಂಬಿ ಮಹಿಳೆಯರಿಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಿದಂತಾಗಿದೆ ಎಂದು ಅವರು ಹೇಳಿದ್ದಾರೆ.

Previous Post
ಆರ್ಥಿಕ ಪ್ರಗತಿಯತ್ತ ಕೊಂಡಯ್ಯುವ ಬಜೆಟ್ – ಜೋಶಿ
Next Post
ಬಜೆಟ್ ಮುಗಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್​ ಸುರಿಮಳೆ

Recent News