ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವೆಬ್‌ಸೈಟ್‌ನಿಂದ ಡಿಲಿಟ್ ಮಾಡಿದ ಎಸ್‌ಬಿಐ

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವೆಬ್‌ಸೈಟ್‌ನಿಂದ ಡಿಲಿಟ್ ಮಾಡಿದ ಎಸ್‌ಬಿಐ

ನವದೆಹಲಿ, ಮಾ.: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ವೆಬ್‌ಸೈಟ್‌ನಿಂದ ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ದಾಖಲೆಗಳನ್ನು ಡಿಲಿಟ್ ಮಾಡಿದೆ (ಅಳಿಸಿ ಹಾಕಿದೆ). ಚುನಾವಣಾ ಬಾಂಡ್ ಕುರಿತು ಮಾಹಿತಿ ಒದಗಿಸಲು ಜೂನ್ 30ರವರೆಗೆ ಸಮಯ ವಿಸ್ತರಿಸುವಂತೆ ಕೋರಿರುವ ನಡುವೆ ಈ ಬೆಳವಣಿಗೆ ನಡೆದಿದೆ.

ದಾನಿಗಳಿಗೆ ಕಾರ್ಯನಿರ್ವಹಣೆಯ ಮಾರ್ಗಸೂಚಿಗಳು ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು (ಎಫ್‌ಎಕ್ಯೂ) ಎಸ್‌ಬಿಐ ತನ್ನ ವೆಬ್‌ಸೈಟ್‌ನಿಂದ್ ಡಿಲಿಟ್ ಮಾಡಿದೆ. ‘ದಾನಿಗಳಿಗಾಗಿ ಕಾರ್ಯನಿರ್ವಹಣೆಯ ಮಾರ್ಗಸೂಚಿಗಳು’ ಎಂಬ ಶೀರ್ಷಿಕೆಯ ದಾಖಲೆ ಜನವರಿ 2, 2018ರಂದು ಬಿಡುಗಡೆಯಾದ ಗೆಜೆಟ್ ಅಧಿಸೂಚನೆಯಾಗಿದೆ. ಇದರಲ್ಲಿ ಚುನಾವಣಾ ಬಾಂಡ್ ಅನ್ನು ಯಾರು ಖರೀದಿಸಬಹುದು?, ಬಾಂಡ್‌ಗಳು ಯಾವ ಕೆಟಗರಿಯಲ್ಲಿ ಲಭ್ಯವಿವೆ?, ಬಾಂಡ್ ಖರೀದಿಗೆ ಅಗತ್ಯವಿರುವ ದಾಖಲೆಗಳು ಯಾವುವು? ಬಾಂಡ್‌ಗಳನ್ನು ಖರೀದಿಸುವುದು ಹೇಗೆ? (ನೆಫ್ಟ್, ಆನ್‌ಲೈನ್ ವಹಿವಾಟು ಇತ್ಯಾದಿ) ಮತ್ತು ಬಾಂಡ್‌ಗಳ ಖರೀದಿಗೆ ಅಧಿಕಾರ ಹೊಂದಿರುವ ಎಸ್‌ಬಿಐ ಶಾಖೆಗಳು ಯಾವುವು? ಈ ಮಾಹಿತಿಗಳು ಒಳಗೊಂಡಿತ್ತು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳ (ಎಫ್‌ಎಕ್ಯೂ) ದಾಖಲೆಯಲ್ಲಿ ಕೆವೈಸಿ ಅವಶ್ಯಕತೆಗಳು ಮತ್ತು ಬಾಂಡ್‌ಗಳ ಖರೀದಿಗೆ ಅಗತ್ಯವಿರುವ ಪೌರತ್ವ ಪುರಾವೆಗಳಂತಹ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಎಸ್‌ಬಿಐ ಒದಗಿಸಿತ್ತು. ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಫೆಬ್ರವರಿ 15,2024ರಂದು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿತ್ತು. ಈ ವೇಳೆ, ಏಪ್ರಿಲ್ 12,2019 ರಿಂದ ಫೆ.15ವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ಕೊಡುಗೆಗಳನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಮಾರ್ಚ್‌ 6ರೊಳಗೆ ಸಲ್ಲಿಸುವಂತೆ ಎಸ್‌ಬಿಐಗೆ ನಿರ್ದೇಶಿಸಿತ್ತು. ಅಲ್ಲದೆ, ಮಾರ್ಚ್‌ 13ರೊಳಗೆ ಎಸ್‌ಬಿಐ ನೀಡಿದ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

ಇತ್ತೀಚೆಗೆ ಮಾರಾಟ ಮಾಡಿರುವ ಬಾಂಡ್‌ಗಳು ಸೇರಿದಂತೆ ಒಟ್ಟು 16,518.11 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ಮಾರಾಟ ಮಾಡಿದೆ. ಬಾಂಡ್ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಲು ಜೂನ್ 30ರವರೆಗೆ ಸಮಯ ವಿಸ್ತರಣೆ ಮಾಡುವಂತೆ ಎಸ್‌ಬಿಐ ಸುಪ್ರೀಂ ಕೋರ್ಟ್‌ನ್ನು ಕೋರಿದೆ. ರಾಜಕೀಯ ಪಕ್ಷಗಳಿಗೆ ಗುಟ್ಟಾಗಿ ದೇಣಿಗೆ ನೀಡಿದವರ ಮಾಹಿತಿ ಒದಗಿಸುವುದು ಕಷ್ಟದ ಕೆಲಸ ಎಂದಿದೆ. ಆ ಕೆಲಸ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ ಎಂಬುವುದು ಈಗ ಎಸ್‌ಬಿಐ ನ್ಯಾಯಾಲಯ ನೀಡುತ್ತಿರುವ ಸಬೂಬು.

ಆದರೆ, ಸಾಮಾಜಿಕ ಹೋರಾಟಗಾರ ಕೊಮೋಡೋರ್ ಲೋಕೇಶ್ ಬಾತ್ರಾ ಅವರು ‘ರಿಪೋರ್ಟರ್ಸ್ ಕಲೆಕ್ಟಿವ್‌’ ಜೊತೆ ಹಂಚಿಕೊಂಡ ದಾಖಲೆಗಳ ಪ್ರಕಾರ, ಸರ್ಕಾರಕ್ಕೆ ಎಸ್‌ಬಿಐ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಅತಿ ಕಡಿಮೆ ಸಮಯದಲ್ಲಿ, ಅಂದರೆ ಕೆಲವೊಮ್ಮೆ ಬರೀ 48 ಗಂಟೆಗಳಲ್ಲಿ ಒದಗಿಸಿರುವುದನ್ನು ಸಾಬೀತುಪಡಿಸುವ ಹಲವು ಪ್ರಮುಖ ಪುರಾವೆಗಳಿವೆ. ಕೇಂದ್ರ ಹಣಕಾಸು ಸಚಿವಾಲಯದ ಸೂಚನೆಯ ಮೇರೆಗೆ ಎಸ್‌ಬಿಐ ಬಾಂಡ್‌ಗಳನ್ನು ನಗದುಗೊಳಿಸುವ ಗಡುವು ಮುಗಿದ 48 ಗಂಟೆಗಳ ಒಳಗೆ ದೇಶದಾದ್ಯಂತ ಚುನಾವಣಾ ಬಾಂಡ್‌ಗಳ ಡೇಟಾವನ್ನು ಒಟ್ಟುಗೂಡಿಸಿದ್ದಿದೆ ಎಂದು ದಾಖಲೆಗಳು ಬಹಿರಂಗಪಡಿಸುತ್ತವೆ.

Previous Post
ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರೆಡಿ
Next Post
ಮಹಿಳಾ ದಿನಾಚರಣೆಯಂದು ಪ್ರಧಾನಿ ಮೋದಿಗೆ ಕಾಂಗ್ರೆಸ್‌ನ 5 ಪ್ರಶ್ನೆಗಳು

Recent News