ಚುನಾವಣಾ ಬಾಂಡ್ ಕುರಿತ ಮಾಹಿತಿ ಬಿಡುಗಡೆಗೆ SBIಗೆ ನಿರ್ದೇಶಿಸಿ: ಆಯೋಗಕ್ಕೆ ಅಧಿಕಾರಿಗಳ ಪತ್ರ
ನವದೆಹಲಿ, ಮಾ. 9: ಚುನಾವಣಾ ಬಾಂಡ್ಗಳ ಕುರಿತ ವಿವರಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ಗೆ ನಿರ್ದೇಶಿಸುವಂತೆ ಸಾಂವಿಧಾನಿಕ ನಡವಳಿಕೆ ಗುಂಪಿನ (ಸಿಸಿಜಿ) 79 ಮಾಜಿ ನಾಗರಿಕ ಸೇವಾಧಿಕಾರಿಗಳು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಮಾರ್ಚ್ 4ರಂದು SBI ಚುನಾವಣಾ ಬಾಂಡ್ ಕುರಿತ ಡೇಟಾವನ್ನು ನೀಡಲು ಮಾರ್ಚ್ 6ರ ಗಡುವಿನ ಬದಲಿಗೆ ಜೂನ್ 30ರವರೆಗೆ ಕಾಲಾವಕಾಶವನ್ನು ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು.
ಪತ್ರದಲ್ಲೇನಿದೆ?
ನಮ್ಮದು ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡಿದ ಅಖಿಲ ಭಾರತೀಯ ಮಾಜಿ ನಾಗರಿಕ ಸೇವಾಧಿಕಾರಿಗಳ ಗುಂಪಾಗಿದೆ. ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಆದರೆ ನಿಷ್ಪಕ್ಷಪಾತ, ತಟಸ್ಥತೆ ಮತ್ತು ಭಾರತದ ಸಂವಿಧಾನಕ್ಕೆ ಬದ್ಧರಾಗಿದ್ದೇವೆ. ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಲ್ಲಿಸುವ ಸಮಯವನ್ನು ಜೂನ್ 30, 2024 ರವರೆಗೆ ವಿಸ್ತರಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಸುಪ್ರೀಂ ಕೋರ್ಟ್ಗೆ (SCI) ಮಾಡಿದ ಅಸಾಮಾನ್ಯ ವಿನಂತಿಯನ್ನು ಉಲ್ಲೇಖಿಸಿ ನಾವು ನಿಮಗೆ ಪತ್ರ ಬರೆಯುತ್ತಿದ್ದೇವೆ. ಮಾರ್ಚ್ 6ರೊಳಗೆ ಡೇಟಾವನ್ನು ಸಾರ್ವಜನಿಕಗೊಳಿಸುವ ಸ್ಥಿತಿಯಲ್ಲಿಲ್ಲ ಎಂದು ಮಾರ್ಚ್ 4ರಂದು ನ್ಯಾಯಾಲಯಕ್ಕೆ ತಿಳಿಸಲು ಎಸ್ಬಿಐ 17 ದಿನಗಳನ್ನು ತೆಗೆದುಕೊಂಡಿದೆ ಎಂಬುದನ್ನು ನಾವು ನಿರಾಶೆಯಿಂದ ಗಮನಿಸುತ್ತೇವೆ.
48 ಕೋಟಿ ಖಾತೆಗಳನ್ನು ಹೊಂದಿರುವ ಮತ್ತು ಉನ್ನತ ಮಟ್ಟದ ಡಿಜಿಟಲೀಕರಣ ವ್ಯವಸ್ಥೆ ಇರುವ ಭಾರತದ ಅತಿದೊಡ್ಡ ಬ್ಯಾಂಕ್ಗೆ, ದಾಖಲೆಗಳನ್ನು ಚುನಾವಣಾ ಬಾಂಡ್ ಕುರಿತ ಮಾಹಿತಿ ನೀಡಲು ಸಮಯಾವಕಾಶ ಕೋರಿರುವುದು ಕರುಣಾಜನಕ ಸ್ಥಿತಿಯಾಗಿದೆ. ಅಖಿಲ ಭಾರತ ಬ್ಯಾಂಕಿಂಗ್ ಅಧಿಕಾರಿಗಳ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಥಾಮಸ್ ಫ್ರಾಂಕೋ, ಚುನಾವಣಾ ಬಾಂಡ್ ಯೋಜನೆಗಾಗಿ ಐಟಿ ವ್ಯವಸ್ಥೆಗಳ ಅಭಿವೃದ್ಧಿಗಾಗಿ ಎಸ್ಬಿಐ 2018ರ ಜೂನ್ನಲ್ಲಿ ಪತ್ರದ ಮೂಲಕ ಭಾರತ ಸರ್ಕಾರಕ್ಕೆ 60 ಲಕ್ಷ ರೂ.ಬೇಡಿಕೆ ಇಟ್ಟಿದೆ ಎಂಬುವುದನ್ನು ಉಲ್ಲೇಖಿಸಿದ್ದಾರೆ.
ಇದಲ್ಲದೆ ಫ್ರಾಂಕೊ ಅವರು ಕೇವಲ ಆರು ದಿನಗಳ ಅವಧಿಯಲ್ಲಿ ಆರು ವರ್ಷಗಳಲ್ಲಿ ಮಾರಾಟವಾದ ಬಾಂಡ್ಗಳ ವಿವರಗಳನ್ನು ನೀಡುವ ಆರ್ಟಿಐ ಉತ್ತರವನ್ನು ಸಹ ಪ್ರಕಟಿಸಿದ್ದಾರೆ. ಯೋಜನೆಯ ಅಂತಿಮಗೊಳಿಸುವಿಕೆಯ ಸಮಯದಲ್ಲಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಅವರು ಸಂದರ್ಶನಗಳಲ್ಲಿ ಕೋರಿದ ಮಾಹಿತಿಯನ್ನು ಪಡೆಯಲು ಹತ್ತು ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ. ಎಸ್ಬಿಐಯ ಸಮಯದ ಬೇಡಿಕೆಯು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಚುನಾವಣಾ ಬಾಂಡ್ಗಳ ಯೋಜನೆಯನ್ನು ಅಸಂವಿಧಾನಿಕ ಎಂದು ಪತ್ರದಲ್ಲಿ ಹೇಳಲಾಗಿದ್ದು, ರಾಜಕೀಯ ಪಕ್ಷಗಳಿಗೆ ಧನಸಹಾಯ ಮಾಡುವ ಬಗ್ಗೆ ತಿಳಿದುಕೊಳ್ಳಲು ಭಾರತದ ನಾಗರಿಕರ ಮಾಹಿತಿಯ ಹಕ್ಕನ್ನು ಎಸ್ಸಿಐ ಉಲ್ಲೇಖಿಸಿದೆ. ಎಸ್ಬಿಐ ಈ ಮಾಹಿತಿಯನ್ನು ನಿರಾಕರಿಸುವುದು ಮತ್ತು ಸಾರ್ವತ್ರಿಕ ಚುನಾವಣೆಗೆ ಮೊದಲು ಸಾಧ್ಯವಿಲ್ಲ ಎಂದು ಸೂಚಿಸುವುದು, ಎಸ್ಬಿಐ ಅಧಿಕಾರದಲ್ಲಿರುವ ಸರ್ಕಾರವನ್ನು ರಕ್ಷಿಸುತ್ತಿದೆ ಎಂದು ಸೂಚಿಸುತ್ತದೆ. ನ್ಯೂಸ್ಲಾಂಡ್ರಿ ಮತ್ತು ನ್ಯೂಸ್ ಮಿನಿಟ್ ಎಂಬ ಮಾಧ್ಯಮ ಪೋರ್ಟಲ್ಗಳು ಈಗಾಗಲೇ ಮೂವತ್ತು ಕಾರ್ಪೊರೇಟ್ಗಳು ಹಿಂದಿನ ಐದು ವರ್ಷಗಳಲ್ಲಿ ಸುಮಾರು 335 ಕೋಟಿ ರೂಪಾಯಿ ಮೌಲ್ಯದ ಬಾಂಡ್ಗಳ ಖರೀದಿಯನ್ನು ಮಾಡಿರುವುದರ ಕುರಿತು ಸುದ್ದಿ ಪ್ರಕಟಿಸಿದೆ.
ECI ಮಾರ್ಚ್ 27ರೊಳಗೆ ಅಥವಾ ಅದಕ್ಕಿಂತ ಮುಂಚೆಯೇ ವೇಳಾಪಟ್ಟಿಯನ್ನು ಪ್ರಕಟಿಸಬಹುದು. ಚುನಾವಣೆಯ ಘೋಷಣೆಗೂ ಮುನ್ನವೇ ಎಸ್ಬಿಐ ಚುನಾವಣಾ ಬಾಂಡ್ಗಳ ಡೇಟಾವನ್ನು ನೀಡಬೇಕು. ಸಂವಿಧಾನದ 324ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡು ತನ್ನ ಖ್ಯಾತಿಯನ್ನು ಮತ್ತು ಅದರ ಸಮಗ್ರತೆಯನ್ನು ಮರಳಿ ಪಡೆಯಲು ಇಸಿಐಗೆ ಇದು ಒಂದು ಅವಕಾಶವಾಗಿದೆ. ತಕ್ಷಣವೇ ಮಾಹಿತಿಯನ್ನು ಬಿಡುಗಡೆ ಮಾಡಲು ಎಸ್ಬಿಐಗೆ ನಿರ್ದೇಶಿಸಬೇಕು. ಎಸ್ಬಿಐ ಈ ಮಾಹಿತಿಯನ್ನು ಒದಗಿಸುವವರೆಗೆ 2024ರ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು. ECI ಮೌನವಾಗಿದ್ದರೆ, ಭಾರತೀಯ ಮತದಾರರ ಮಾಹಿತಿಯ ಹಕ್ಕನ್ನು ಗೌರವಿಸುವ ಮತ್ತು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ತನ್ನ ಸಾಂವಿಧಾನಿಕ ಬದ್ಧತೆಗೆ ಅಡ್ಡಿಯಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.