ಚುನಾವಣಾ ಬಾಂಡ್ ಮಾಹಿತಿ ಒದಗಿಸಲು ವಿಫಲ: ಎಸ್‌ಬಿಐಗೆ ಛೀಮಾರಿ

ಚುನಾವಣಾ ಬಾಂಡ್ ಮಾಹಿತಿ ಒದಗಿಸಲು ವಿಫಲ: ಎಸ್‌ಬಿಐಗೆ ಛೀಮಾರಿ

ನವದೆಹಲಿ, ಮಾ. 11: ಚುನಾವಣಾ ಬಾಂಡ್‌ ಕುರಿತ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲು ಸಮಯ ಕೋರಿದ್ದ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ (ಎಸ್‌ಬಿಐ) ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ನಾಳೆಯೊಳಗೆ (ಮಾ.12) ಮಾಹಿತಿ ನೀಡದಿದ್ದರೆ ನ್ಯಾಯಾಂಗ ನಿಂದನೆ ಎಂದು ಪರಿಗಣಿಸುವುದಾಗಿ ಸೋಮವಾರ ಎಚ್ಚರಿಕೆ ನೀಡಿದೆ. ವಿಚಾರಣೆ ವೇಳೆ, ಮಾರ್ಚ್ 6ರಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುವಂತೆ ನಾವು ಸೂಚಿಸಿದ್ದೆವು. ಈ ನಿಟ್ಟಿನಲ್ಲಿ ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಸುಪ್ರೀಂ ಕೋರ್ಟ್ ಖಾರವಾಗಿ ಪ್ರಶ್ನಿಸಿದೆ. ನಾವು ಆದೇಶ ನೀಡಿ 26 ದಿನಗಳು ಕಳೆದಿವೆ. ನೀವು ಮೌನ ತಾಳಿದ್ದು ಯಾಕೆ? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಾವು ಪ್ರಾಮಾಣಿಕತೆಯನ್ನು ನಿರೀಕ್ಷಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಹೇಳಿದ್ದಾರೆ.

ಯಾವ ರಾಜಕೀಯ ಪಕ್ಷಕ್ಕೆ ಯಾರು ಕೊಡುಗೆ ನೀಡಿದ್ದಾರೆ ಎಂಬುವುದನ್ನು ನಿರ್ಧರಿಸಲು ಮಾಹಿತಿಯನ್ನು ಹೊಂದಾಣಿಕೆ ಮಾಡಬೇಕಿದೆ. ದೇಣಿಗೆ ಕೊಟ್ಟವರು ಮತ್ತು ಅದನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಮಾಹಿತಿ ಬೇರೆ ಬೇರೆ ವಿಭಾಗಗಳಾಗಿ ದಾಖಲಿಸಿರುವುದರಿಂದ, ಅದನ್ನು ಒಟ್ಟಿಗೆ ಮಾಡಿ ತಾಳೆ ಹಾಕಲು ತುಂಬಾ ಸಮಯ ಬೇಕಿದೆ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲು ನಾವು ಬಯಸುವುದಿಲ್ಲ. ಹಾಗಾಗಿ, ಜೂನ್ 30ರವರೆಗೆ ಸಮಯ ವಿಸ್ತರಿಸಿ ಎಂದು ಎಸ್‌ಬಿಐ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ಕೋರದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, ನಿಮ್ಮ ಬಳಿ ಕೆವೈಸಿ ಇರುವಾಗ ಇಲ್ಲಿ ಯಾವುದೇ ತಪ್ಪು ಸಂಭವಿಸುವ ಪ್ರಶ್ನೆಯೇ ಬರುವುದಿಲ್ಲ. ನೀವು ದೇಶದ ನಂ.1 ಬ್ಯಾಂಕ್ ಆಗಿ ಇವನ್ನೆಲ್ಲಾ ನಿಭಾಯಿಸಲು ಅರ್ಹರಿದ್ದೀರಿ ಎಂದು ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಪ್ರತಿಕ್ರಿಯಿಸಿ, ನೀವು ಮಾಹಿತಿಗಳನ್ನು ಹೊಂದಾಣಿಕೆ ಮಾಡಿಕೊಡುವುದೆಲ್ಲ ಬೇಡ. ನಿಮ್ಮಲ್ಲಿರುವ ಮಾಹಿತಿಗಳನ್ನು ಸರಳವಾಗಿ ಬಹಿರಂಗಡಿಸಿ ಸಾಕು ಎಂದಿದ್ದಾರೆ. ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ತೀರ್ಪನ್ನು ಮಾರ್ಪಡಿಸುವಂತೆ ಕೋರಿ ಎಸ್‌ಬಿಐನ ಸಹಾಯಕ ಪ್ರಧಾನ ವ್ಯವಸ್ಥಾಪಕರು ಅಫಿಡವಿಟ್ ಸಲ್ಲಿಸಿದ್ದಕ್ಕಾಗಿ ಸಿಜೆಐ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯದ ಆದೇಶವನ್ನು ಪಾಲಿಸದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಸಮಯ ವಿಸ್ತರಣೆ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಚುನಾವಣಾ ಆಯೋಗಕ್ಕೆ ಒದಗಿಸಲು ಅಗತ್ಯವಿರುವ ಮಾಹಿತಿ ನಿಮ್ಮಲ್ಲಿ ಲಭ್ಯವಿದೆ ಎಂದು ನಮಗೆ ತಿಳಿದಿದೆ. ನಾಳೆ (ಮಾ.12) ಬ್ಯಾಂಕ್ ವ್ಯವಹಾರ ಅವಧಿ ಮುಕ್ತಾಯದೊಳಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡದವರು ಮತ್ತು ಅದನ್ನು ಸ್ವೀಕರಿಸಿದವರ ಮಾಹಿತಿ ನಮ್ಮಲ್ಲಿ ಈಗಾಗಲೇ ಲಭ್ಯವಿದೆ. ಹಾಗಿರುವಾಗ ಅದನ್ನು ತಾಳೆ ಹಾಕುವ ಅಗತ್ಯ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿಂದಿನ ಗಡುವಿನೊಳಗೆ ಮಾಹಿತಿ ಒದಗಿಸದ್ದಕ್ಕೆ ನಿಮ್ಮ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಿಲ್ಲ. ಆದರೆ, ಈ ಬಾರಿ ಮಾಹಿತಿ ನೀಡಲು ವಿಫಲವಾದರೆ ಖಂಡಿತವಾಗಿಯೂ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಎಸ್‌ಬಿಐಗೆ ಎಚ್ಚರಿಕೆ ನೀಡಿದೆ.

Previous Post
ಸುಪ್ರೀಂ ಕೋರ್ಟ್‌ ತಪರಾಕಿ ಬೆನ್ನಲ್ಲೇ ಕುಸಿದ SBI ಶೇರು ದರ
Next Post
ಸಂವಿಧಾನ ಬದಲಾವಣೆ- ಆರ್‌ಎಸ್‌ಎಸ್‌ ಪ್ರತಿಜ್ಞೆ: ಪ್ರಕಾಶ್ ಅಂಬೇಡ್ಕರ್

Recent News