ಚೆನ್ನೈ-ಮುಂಬೈ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಲ್ಯಾಂಡಿಂಗ್

ಚೆನ್ನೈ-ಮುಂಬೈ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಲ್ಯಾಂಡಿಂಗ್

ಚೆನ್ನೈ, ಜೂ. 1: ಶನಿವಾರ ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ 6ಇ 5314 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಚೆನ್ನೈನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ 6ಇ 5314 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಮುಂಬೈನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಸಿಬ್ಬಂದಿ ಪ್ರೋಟೋಕಾಲ್ ಅನ್ನು ಅನುಸರಿಸಿದರು. ಭದ್ರತಾ ಏಜೆನ್ಸಿ ಮಾರ್ಗಸೂಚಿಗಳ ಪ್ರಕಾರ ವಿಮಾನವನ್ನು ಪ್ರತ್ಯೇಕ ಜಾಗಕ್ಕೆ ಕೊಂಡೊಯ್ಯಲಾಗಿದೆ ಎಂದು ವಿಮಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಸದ್ಯ ವಿಮಾನವು ತಪಾಸಣೆಗೆ ಒಳಪಟ್ಟಿದೆ. ಎಲ್ಲಾ ಭದ್ರತಾ ತಪಾಸಣೆಗಳನ್ನು ಪೂರ್ಣಗೊಳಿಸಿದ ನಂತರ, ವಿಮಾನವನ್ನು ಟರ್ಮಿನಲ್ಗೆ ತರಲಾಗುವುದು ಎಂದು ಇಂಡಿಗೋ ಹೇಳಿದೆ. ಶುಕ್ರವಾರ 177 ಪ್ರಯಾಣಿಕರಿದ್ದ ದೆಹಲಿ-ಶ್ರೀನಗರ ವಿಸ್ತಾರಾ ವಿಮಾನ ಹಾರಾಟದ ವೇಳೆ ಬಾಂಬ್ ಬೆದರಿಕೆ ಬಂದಿತ್ತು. ವಿಮಾನವು ಶ್ರೀನಗರದಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು.

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಕಾರ್ಯಾಚರಣೆಗಳು ಪುನರಾರಂಭಗೊಂಡ ನಂತರ, ಭದ್ರತಾ ಪರಿಶೀಲನೆಯ ನಂತರ ಅದು ಹುಸಿ ಬಾಂಬ್ ಬೆದರಿಕೆ ಎಂದು ಪರಿಗಣಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರದ ಏರ್ ಟ್ರಾಫಿಕ್ ಕಂಟ್ರೋಲ್ ಗೆ ‘ಬೆದರಿಕೆ ಕರೆ’ಯ ಮಾಹಿತಿ ಸಿಕ್ಕಿತ್ತು. ಮೇ 28 ರಂದು ದೆಹಲಿಯಿಂದ ವಾರಣಾಸಿಗೆ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಬಂದಿದ್ದರಿಂದ ಪ್ರಯಾಣಿಕರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಥಳಾಂತರಿಸಲಾಯಿತು.

ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6E2211 ದೆಹಲಿ ವಿಮಾನ ನಿಲ್ದಾಣದಲ್ಲಿ ನಿರ್ದಿಷ್ಟ ಬಾಂಬ್ ಬೆದರಿಕೆಯನ್ನು ಪಡೆದಿತ್ತು. ಎಲ್ಲಾ ಅಗತ್ಯ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆ. ವಿಮಾನ ನಿಲ್ದಾಣದ ಭದ್ರತಾ ಏಜೆನ್ಸಿಗಳ ಮಾರ್ಗಸೂಚಿಗಳ ಪ್ರಕಾರ ವಿಮಾನವನ್ನು ಪ್ರತ್ಯೇಕ ಜಾಗದಲ್ಲಿರಿಸಿದ್ದು, ಎಲ್ಲಾ ಪ್ರಯಾಣಿಕರನ್ನು ತುರ್ತು ನಿರ್ಗಮನದ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.

ಆದಾಗ್ಯೂ, ತಮ್ಮ ಬ್ಯಾಗ್‌ಗಳೊಂದಿಗೆ ತುರ್ತು ಸ್ಲೈಡ್‌ಗಳನ್ನು ಬಳಸಿಕೊಂಡು ಸ್ಥಳಾಂತರಿಸುವ ಸಮಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶಕರು (DGCA) ಆ ವಿಮಾನದಲ್ಲಿನ ಎಲ್ಲಾ ನಾಲ್ವರು ಕ್ಯಾಬಿನ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಸ್ಥಳಾಂತರ ವಿಡಿಯೊದಲ್ಲಿ, ಪೈಲಟ್ ಸಾಮಾನು ಸರಂಜಾಮುಗಳೊಂದಿಗೆ ತುರ್ತು ಸ್ಲೈಡ್ ಮೂಲಕ ವಿಮಾನದಿಂದ ಹೊರಬರುತ್ತಿರುವುದು ವಿಡಿಯೊದಲ್ಲಿದೆ. ಅಂತರಾಷ್ಟ್ರೀಯ ಮಾನದಂಡಗಳ ಅಡಿಯಲ್ಲಿ, ಸ್ಥಳಾಂತರಿಸುವ ಸಮಯದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ತಮ್ಮ ಸಾಮಾನುಗಳನ್ನು ತೆಗೆದುಕೊಳ್ಳಲು ಅನುಮತಿಸಲಾಗುವುದಿಲ್ಲ. ಯಾಕೆಂದರೆ ಅದು ಸ್ಥಳಾಂತರಿಸುವುದಕ್ಕೆ ಹೆಚ್ಚಿನ ಸಮಯ ಬೇಡುತ್ತದೆ.

Previous Post
ಹಲವೆಡೆ ಹಿಂಸಾಚಾರ; ಮತಯಂತ್ರಗಳನ್ನು ಹೊತ್ತೊಯ್ದು ನೀರಿಗೆ ಎಸೆದ ಗುಂಪು
Next Post
ನಾಳೆ ರಾಜ್ಯಕ್ಕೆ ಮಾನ್ಸೂನ್​: 4 ಜಿಲ್ಲೆಗಳಿಗೆ ಆರೆಂಜ್​ ಎಚ್ಚರಿಕೆ

Recent News