ಮುಂಬೈ : ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನೆಲಕ್ಕುರುಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದ ವಿರುದ್ಧ ಮಹಾ ವಿಕಾಸ್ ಅಘಾಡಿ (ಎಂವಿಎ) ಭಾನುವಾರ ಮುಂಬೈನಲ್ಲಿ ಪ್ರತಿಭಟನೆ ನಡೆಸಿತು. ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮತ್ತು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ವಿಪಕ್ಷಗಳ ಉನ್ನತ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ವಿರೋಧ ಪಕ್ಷದ ಕಾರ್ಯಕರ್ತರು ಹುತಾತ್ಮ ಚೌಕ್ನಿಂದ ಗೇಟ್ವೇ ಆಫ್ ಇಂಡಿಯಾದ ಶಿವಾಜಿ ಪ್ರತಿಮೆಯವರೆಗೆ ಮೆರವಣಿಗೆ ನಡೆಸಿದರು, ಪ್ರತಿಭಟನೆಯಲ್ಲಿ ಬೃಹತ್ ಚಪ್ಪಲಿಗಳನ್ನು ಹಿಡಿದು “ಚಪ್ಪಲ್ ಜೋಡೆ ಮಾರೋ ಯಾತ್ರಾ” (ಪಾದರಕ್ಷೆಗಳಿಂದ ಹೊಡೆದ) ಎಂದು ಘೋಷಣೆ ಕೂಗಿದರು.
ಪ್ರತಿಭಟನಾ ಮಾರ್ಗದಲ್ಲಿ ದಕ್ಷಿಣ ಮುಂಬೈನಾದ್ಯಂತ ಗಮನಾರ್ಹ ಪೊಲೀಸ್ ಉಪಸ್ಥಿತಿಯನ್ನು ನಿಯೋಜಿಸಲಾಗಿತ್ತು. ಗೇಟ್ವೇ ಆಫ್ ಇಂಡಿಯಾದ ಸುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿಯಲಾಗಿತ್ತು. ಮುಂಬೈ ಪೊಲೀಸರು ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ ಹೀಗಾಗೀ ಹುತಾತ್ಮ ಚೌಕ್ನಲ್ಲಿ ಸಭೆಗೆ ಮಾತ್ರ ಅವಕಾಶ ನೀಡಿದ್ದರು.
ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ದೇವೇಂದ್ರ ಫಡ್ನವಿಸ್, ಮಹಾ ವಿಕಾಸ್ ಅಘಾಡಿಯಾಗಿರಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ, ಅವರು ಛತ್ರಪತಿ ಶಿವಾಜಿ ಮಹಾರಾಜರನ್ನು ಎಂದಿಗೂ ಗೌರವಿಸಲಿಲ್ಲ. ನೆಹರೂ ಅವರು ‘ದಿ ಡಿಸ್ಕವರಿ ಆಫ್ ಇಂಡಿಯಾ’ದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್ ಮತ್ತು ಎಂವಿಎ ಇದಕ್ಕೆ ಕ್ಷಮೆಯಾಚಿಸುತ್ತವೆಯೇ? ಇದು ರಾಜಕೀಯ ಪ್ರತಿಭಟನೆ ಎಂದು ಟೀಕಿಸಿದರು.
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೋಟೆಯಲ್ಲಿ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದ ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ೩೫ ಅಡಿ ಪ್ರತಿಮೆ ಆಗಸ್ಟ್ ೨೬ ರಂದು ಕುಸಿದು ಬಿದ್ದಿದೆ. ಬಲವಾದ ಗಾಳಿಯಿಂದಾಗಿ ಪ್ರತಿಮೆ ಕುಸಿದಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಆರೋಪಿಸಿದ್ದಾರೆ.