ಜಡ್ಜ್‌ ನೇಮಕಾತಿಗೆ ಆಕ್ಷೇಪ: ಕೇಂದ್ರದ ದ್ವಿಮುಖ ನೀತಿ ಬಗ್ಗೆ ಸುಪ್ರೀಂ ಗರಂ

ಜಡ್ಜ್‌ ನೇಮಕಾತಿಗೆ ಆಕ್ಷೇಪ: ಕೇಂದ್ರದ ದ್ವಿಮುಖ ನೀತಿ ಬಗ್ಗೆ ಸುಪ್ರೀಂ ಗರಂ

ನವದೆಹಲಿ, ಮಾ. 14: ಕೇರಳ ಹೈಕೋರ್ಟ್ ನ್ಯಾಯಮೂರ್ತಿಯಾಗಿ, ನ್ಯಾಯವಾದಿ ಮನೋಜ್ ಪುಲಂಬಿ ಮಾಧವನ್ ಅವರ ಪದೋನ್ನತಿಯನ್ನು ಆಕ್ಷೇಪಿಸಿದ ಕೇಂದ್ರ ಸರಕಾರದ ಆಕ್ಷೇಪಣೆಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದ್ದು, ಬಿಜೆಪಿಯ ಮಹಿಳಾ ನಾಯಕಿ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ(ಹೆಸರನ್ನು ಉಲ್ಲೇಖಿಸದೆ ಪ್ರಸ್ತಾಪಿಸಿದ್ದ ಕೋರ್ಟ್‌) ಅವರನ್ನು ಜಡ್ಜ್‌ ಆಗಿ ನೇಮಿಸಿರುವುದನ್ನು ಕೋರ್ಟ್‌ ಉಲ್ಲೇಖಿಸಿದ್ದು, ಕೇಂದ್ರದ ದ್ವಿಮುಖ ನೀತಿಯನ್ನು ಗಮನಿಸಿದೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು ಈ ಕುರಿತ ಅರ್ಜಿಯನ್ನು ವಿಚಾರಣೆ ನಡೆಸಿ ಕೇಂದ್ರದ ಆಕ್ಷೇಪಣೆಯನ್ನು ತಿರಸ್ಕರಿಸಿದೆ. ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬಿ.ಆರ್.ಗವಾಯಿ ಅವರಿದ್ದರು. ಮಾಧವನ್ ಅವರು ಸಿಪಿಐ(ಎಂ) ಸಹಾನುಭೂತಿ ಹೊಂದಿರುವವರು ಮತ್ತು 2010 ಮತ್ತು 2016-2021ರಲ್ಲಿ ಎಲ್‌ಡಿಎಫ್ ಸರ್ಕಾರದಿಂದ ಸರ್ಕಾರಿ ವಕೀಲರಾಗಿ ನೇಮಕಗೊಂಡಿದ್ದರಿಂದ ಮಾಧವನ್ ನ್ಯಾಯಾಧೀಶರಾಗಲು ಯೋಗ್ಯರಲ್ಲ ಎಂದು ಸರ್ಕಾರ ಹೇಳಿಕೊಂಡಿತ್ತು.

ಡೆಕ್ಕನ್ ಹೆರಾಲ್ಡ್ ಪ್ರಕಾರ, ಸುಪ್ರೀಂಕೋರ್ಟ್‌ ಕೊಲಿಜಿಯಂ ಸರ್ಕಾರದ ಕಾರಣಗಳನ್ನು ಅಸ್ಪಷ್ಟ ಮತ್ತು ಆಧಾರ ರಹಿತ ಎಂದು ಕರೆದಿದೆ. ಅಭ್ಯರ್ಥಿಯು ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದಾನೆ ಎಂಬ ಅಂಶವು ಎಲ್ಲಾ ಸಂದರ್ಭಗಳಲ್ಲಿ ಸಾಕಷ್ಟು ಕಾರಣವಾಗಿರುವುದಿಲ್ಲ ಎಂದು ಕೊಲಿಜಿಯಂ ಹೇಳಿದೆ. 2023ರಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರ ವಿವಾದಾತ್ಮಕ ಉನ್ನತಿಯನ್ನು ಸಹ ಕೊಲಿಜಿಯಂ ಉಲ್ಲೇಖಿಸಿದೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ವಿವಾದಾತ್ಮಕ ಹೇಳಿಕೆಗಳು ಮತ್ತು ಭಾರತೀಯ ಜನತಾ ಪಕ್ಷದೊಂದಿಗೆ ಅವರ ಆಪಾದಿತ ಸಂಬಂಧಗಳಿಗಾಗಿ ಗೌರಿ ಟೀಕೆಗೆ ಗುರಿಯಾಗಿದ್ದರು. ಕೋರ್ಟ್‌ ವಿಚಾರಣೆಯ ವೇಳೆ, ಉದಾಹರಣೆಗೆ ಇತ್ತೀಚೆಗೆ ವಕೀಲರೋರ್ವರನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಅವರು ಪದೋನ್ನತಿಯ ಮೊದಲು ರಾಜಕೀಯ ಪಕ್ಷದ ಪದಾಧಿಕಾರಿಯಾಗಿದ್ದರು ಎಂಬುವುದನ್ನು ಸುಪ್ರೀಂಕೋರ್ಟ್‌ ಕೊಲಿಜಿಯಂ ಹೇಳಿದೆ.

ಮಾಧವನ್ ಪರಿಶಿಷ್ಟ ಜಾತಿಗೆ ಸೇರಿದವರು. ಅವರ ನೇಮಕಾತಿಗೆ ಆಕ್ಷೇಪವನ್ನು ಸಲ್ಲಿಸಲು ಮಾನ್ಯವಾದ ಆಧಾರವಿಲ್ಲ ಎಂದು ಕೋರ್ಟ್‌ ಹೇಳಿದೆ. ಅಭ್ಯರ್ಥಿಯನ್ನು ಈ ಹಿಂದೆ ಸರ್ಕಾರಿ ವಕೀಲರಾಗಿ ನೇಮಕ ಮಾಡಿರುವುದಿಂದ ಕಾನೂನಿನ ವಿವಿಧ ವಿಭಾಗಗಳಲ್ಲಿನ ಪ್ರಕರಣ ನಿರ್ವಹಿಸುವಲ್ಲಿ ಅವರು ಸಾಕಷ್ಟು ಅನುಭವವನ್ನು ಪಡೆದಿರುವುದನ್ನು ಸೂಚಿಸುತ್ತದೆ. ಅಭ್ಯರ್ಥಿಯು ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಸಮರ್ಥರಾಗಿದ್ದಾರೆ ಎಂದು ಕೋರ್ಟ್‌ ಹೇಳಿದೆ. ಇದಲ್ಲದೆ ವಕೀಲರಾದ ಅಬ್ದುಲ್ ಹಕೀಮ್, ಮುಲ್ಲಪ್ಪಲ್ಲಿ ಅಬ್ದುಲ್ ಅಜೀಜ್, ಶ್ಯಾಮ್ ಕುಮಾರ್ ವಡಕ್ಕೆ ಮುದವಕ್ಕಟ್, ಹರಿಶಂಕರ್ ವಿಜಯನ್ ಮೆನನ್, ಮನು ಶ್ರೀಧರನ್ ನಾಯರ್ ಮತ್ತು ಈಶ್ವರನ್ ಸುಬ್ರಮಣಿ ಅವರಿಗೆ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲು ಕೊಲಿಜಿಯಂ ಶಿಫಾರಸು ಮಾಡಿದೆ.

ಬಿಜೆಪಿ ನಾಯಕಿ, ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಈ ಹಿಂದೆ ನೇಮಿಸಲಾಗಿತ್ತು. ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿರುವ ಅವರನ್ನು ನ್ಯಾಯಮೂರ್ತಿಯನ್ನಾಗಿ ನೇಮಿಸಿರುವುದು ಟೀಕೆಗೆ ಗುರಿಯಾಗಿತ್ತು. ಗೌರಿ ಅವರು ಭಾರತೀಯ ಜನತಾ ಪಕ್ಷದ ಸದಸ್ಯೆಯಾಗಿದ್ದಾರೆ. ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ಹಲವು ಬಾರಿ ನೀಡಿದ್ದರು. ಅವರ ಹೆಸರನ್ನು ಶಿಫಾರಸು ಮಾಡಿದ ಕೊಲಿಜಿಯಂ ಕ್ರಮವು ಸರಿಯಲ್ಲ ಎಂದು ವಕೀಲರು ಮತ್ತು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದರು. ಬಿಜೆಪಿಯ ಸೈದ್ಧಾಂತಿಕ ಪೋಷಕ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಅತ್ಯಾಪ್ತವಾಗಿದ್ದ ವಿಕ್ಟೋರಿಯಾ ಗೌರಿ, ಆರೆಸ್ಸೆಸ್‌ನ ಆಂಗ್ಲ ಭಾಷೆಯ ಮುಖವಾಣಿ ಆರ್ಗನೈಸರ್‌ನಲ್ಲಿ ಲೇಖನವನ್ನು ಬರೆಯುತ್ತಿದ್ದರು.

Previous Post
ಕೇಂದ್ರ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ ಕುಮಾರ್‌, ಸುಖಬೀರ್‌ ಸಂಧು ಆಯ್ಕೆ
Next Post
ಅಣ್ಣಾಮಲೈ, ಪಳನಿಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ

Recent News