ಜಮೀನು ಬಿಟ್ಟು ಕೊಡಲು ನಿರಾಕರಿಸಿದ ಆದಿವಾಸಿ ಮಹಿಳೆಗೆ ಲೈಂಗಿಕ ದೌರ್ಜನ್ಯ

ಜಮೀನು ಬಿಟ್ಟು ಕೊಡಲು ನಿರಾಕರಿಸಿದ ಆದಿವಾಸಿ ಮಹಿಳೆಗೆ ಲೈಂಗಿಕ ದೌರ್ಜನ್ಯ

ಹೈದರಾಬಾದ್, ಜು. 12: ತೆಲಂಗಾಣದ ನಾಗರ್‌ ಕರ್ನೂಲ್ ಜಿಲ್ಲೆಯಲ್ಲಿ 27 ವರ್ಷದ ಆದಿವಾಸಿ ಮಹಿಳೆಯೊಬ್ಬರು ತನ್ನ ಗ್ರಾಮದಲ್ಲಿ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ಭೂಮಾಲೀಕರ ಕುಟುಂಬದಿಂದ ಲೈಂಗಿಕ ದೌರ್ಜನ್ಯ ಮತ್ತು ಚಿತ್ರ ಹಿಂಸೆಗೆ ಒಳಗಾಗಿದ್ದು, 15 ದಿನಗಳ ನಂತರ ಆಕೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.
ನಿರ್ಮಲಮ್ಮ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆಗೆ ಥಳಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಆಕೆಯ ಗುಪ್ತಾಂಗವನ್ನು ಸುಟ್ಟು ಚಿತ್ರಹಿಂಸೆ ನೀಡಲಾಗಿದೆ. ಆಕೆಯ ಪತಿಯನ್ನು ಬಂಧಿತ ದುಡಿಮೆಗೆ ಒಳಪಡಿಸಲಾಗಿದೆ. ಮಹಿಳೆಯ ಸ್ವಂತ ಕುಟುಂಬದವರು ಕೂಡ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಬಲ ಕುಟುಂಬಕ್ಕೆ ಒಂದು ತುಂಡು ಭೂಮಿ ಬಿಟ್ಟು ಕೊಡಲು ನಿರಾಕರಿಸಿದ ಕಾರಣ ಮಹಿಳೆಯ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಪ್ರಕರಣದ ಪ್ರಮುಖ ಆರೋಪಿಗಳು ತೆಲಂಗಾಣದ ಕುರುಬ ಬಿ.ಸಿ ಜಾತಿಯ ಗೊಲ್ಲ ಸಮುದಾಯದ ವೆಂಕಟೇಶಲು ಮತ್ತು ಶಿವಮ್ಮ ದಂಪತಿಗಳು ಮತ್ತು ನಿರ್ಮಲಮ್ಮನ ಸ್ವಂತ ಸಹೋದರಿ ಮತ್ತು ಸೋದರ ಮಾವ ಎಂದು ತಿಳಿದು ಬಂದಿದೆ. ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ನಿರ್ಮಲಮ್ಮ ಮತ್ತು ಆಕೆಯ ಕುಟುಂಬ ಬೇಟೆಯಾಡುವುದು ಮತ್ತು ಜೀವನಾಧಾರಕ್ಕಾಗಿ ದೈನಂದಿನ ಕೂಲಿ ಕೆಲಸವನ್ನು ಅವಲಂಬಿಸಿರುವ ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಎಂದು ವರ್ಗೀಕರಿಸಿರುವ ಚೆಂಚು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ.

“ತುಂಡು ಭೂಮಿಯನ್ನು ಪ್ರಬಲ ಕುಟುಂಬಕ್ಕೆ ಬಿಟ್ಟು ಕೊಡಲು ನಿರಾಕರಿಸಿದ ಕಾರಣಕ್ಕೆ ನನಗೆ ಚಿತ್ರಹಿಂಸೆ ನೀಡಿದ್ದಾರೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೂ, ನನ್ನ ಸುರಕ್ಷತೆಯ ಬಗ್ಗೆ ನನಗೆ ಭಯವಿದೆ. ನನಗೆ ಬೆದರಿಕೆ ಇದ್ದರೂ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ನಿರ್ಮಲಮ್ಮ ಹೇಳಿರುವುದಾಗಿ ನ್ಯೂಸ್ ಮಿನಿಟ್ ತಿಳಿಸಿದೆ. ಸೆಕ್ಷನ್ 307 (ಕೊಲೆ ಯತ್ನ), 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ ), 376 (ಅತ್ಯಾಚಾರ) ಸೆಕ್ಷನ್ 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ಜನರು ಮಾಡಿದ ಕೃತ್ಯಗಳು) ಜೊತೆಗೆ ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳಡಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ನಿರ್ಮಲಮ್ಮ ಹೇಳುವ ಪ್ರಕಾರ, “ಆರೋಪಿ ವೆಂಕಟೇಶಲು ಆಕೆಯ ಮಾವನಿಂದ ನಾಲ್ಕು ಎಕರೆ ಜಮೀನು ಖರೀದಿಸಿದ್ದ. ಆದರೆ, ಆತ ಮೊದಲು ಒಪ್ಪಿದ ಬೆಲೆಯ ಅರ್ಧಕ್ಕಿಂತ ಕಡಿಮೆ ಹಣ ನೀಡಿದ್ದ. ಇತ್ತೀಚೆಗೆ, ನಿರ್ಮಲಮ್ಮ ಮತ್ತು ಆಕೆಯ ಪತಿಗೆ ಸೇರಿದ ಎರಡು ಎಕರೆ ಜಮೀನು ಕೂಡ ತನಗೆ ಬಿಟ್ಟು ಕೊಡುವಂತೆ ವೆಂಕಟೇಶಲು ಒತ್ತಾಯಿಸಿದ್ದ. ನಿರ್ಮಲಮ್ಮನ ಪತಿ ಯಾದಯ್ಯ (ಹೆಸರು ಬದಲಾಯಿಸಲಾಗಿದೆ) ಜಮೀನು ಪತ್ರಕ್ಕೆ ಸಹಿ ಹಾಕಲು ಮುಂದಾದಾಗ ನಿರ್ಮಲಮ್ಮ ತಡೆದಿದ್ದರು. ಈ ಕಾರಣಕ್ಕೆ ಆಕೆಗೆ ಚಿತ್ರಹಿಂಸೆ ನೀಡಲಾಗಿದೆ.

ನಿರ್ಮಲಮ್ಮಗೆ ಚಿತ್ರಹಿಂಸೆ ನೀಡಿದ ಪ್ರಕರಣ ತನಿಖೆಯ ನಡುವೆ, ಇತ್ತೀಚೆಗೆ ಮರಣ ಹೊಂದಿದ ಆಕೆಯ ಮಾವನ ಸಮಾಧಿಯಿಂದ ಶವ ಮೇಲೆತ್ತಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಏಕೆಂದರೆ, ಜಮೀನು ಮಾರಾಟ ಮಾಡಿದ ಬಾಕಿ ಹಣ ಕೇಳಿದ್ದಕ್ಕೆ ವೆಂಕಟೇಶಲು ನಮ್ಮ ಕುಟುಂಬದೊಂದಿಗೆ ಜಗಳವಾಡಿ ತಂದೆಯನ್ನು ಹತ್ಯೆ ಮಾಡಿದ್ದಾನೆ ಎಂದು ನಿರ್ಮಲಮ್ಮನ ಪತಿಯ ಸಹೋದರ ಸತೀಶ್ (ಹೆಸರು ಬದಲಿಸಲಾಗಿದೆ) ಆರೋಪಿಸಿದ್ದಾರೆ. ಆ ಪ್ರಕರಣದಲ್ಲಿ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ.

ಜಮೀನು ಬಿಟ್ಟು ಕೊಡಲು ನಿರಾಕರಿಸಿದ ಬಳಿಕ ನಿರ್ಮಲಮ್ಮ ವಿವಿಧ ರೀತಿಯಲ್ಲಿ ಚಿತ್ರಹಿಂಸೆ ಅನುಭವಿಸಿದ್ದಾರೆ. ಮೊದಲು ಆಕೆ ಆಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ವೆಂಕಟೇಶಲು ಮತ್ತು ಶಿವಮ್ಮ ಜೊತೆಗೂಡಿ ನಿರ್ಮಲಮ್ಮಗೆ ಆಕೆಯ ಕುಟುಂಬದ ಹಲವರು ಗುಂಪು ಹಲ್ಲೆ ನಡೆಸಿ ಅವಮಾನಿಸಿದ್ದಾರೆ. ಇದಾದ ಬಳಿಕವೂ ನಿರ್ಮಲಮ್ಮ ಭೂಮಿ ಬಿಟ್ಟು ಕೊಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ವೆಂಕಟೇಶಲು, ನಿರ್ಮಲಮ್ಮನ ಪತಿ ಯಾದಯ್ಯಗೆ 10 ದಿನಗಳ ಕಾಲ ತನ್ನ ಮರಳು ಗಣಿಯಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿದ್ದ. ಈ ವೇಳೆ ಯಾದಯ್ಯಗೆ ಮದ್ಯಪಾನ ಮಾಡಿಸಿ ಆಸ್ತಿ ಪತ್ರಕ್ಕೆ ಸಹಿ ಹಾಕಿಸಲು ಪ್ರಯತ್ನಿಸಿದ್ದ.

ಜೂನ್ 8 ರಂದು, ನಿರ್ಮಲಮ್ಮ ಅವರನ್ನು ವೆಂಕಟೇಶಲು ತನ್ನ ಜಮೀನಿಗೆ ಕರೆದೊಯ್ದು, ಅಲ್ಲಿ ಆಕೆಗೆ ಥಳಿಸಿದ್ದ. ಅಲ್ಲದೆ, ಆಕೆಯ ಗುಪ್ತಾಂಗವನ್ನು ಬೆಂಕಿಯಿಂದ ಸುಟ್ಟಿದ್ದ. ವೈದ್ಯಕೀಯ ವರದಿಗಳ ಪ್ರಕಾರ, ನಿರ್ಮಲಮ್ಮನ ಗುಪ್ತಾಂಗದಲ್ಲಿ ಸುಟ್ಟ ಗಾಯಗಳು ಕಂಡು ಬಂದಿವೆ.

Previous Post
ದೆಹಲಿ ವಿವಿ ಕಾನೂನು ಕೋರ್ಸ್‌ನಲ್ಲಿ ಮನುಸ್ಮೃತಿ ಬೋಧನೆಗೆ ಶಿಕ್ಷಕರ ವಿರೋಧ
Next Post
ಗುಜರಾತ್ ನಲ್ಲಿ ನಕಲಿ ಟೋಲ್‌ ಪ್ಲಾಝಾ ಬಳಿಕ ನಕಲಿ ಆಸ್ಪತ್ರೆ ಪತ್ತೆ

Recent News