ಜಮ್ಮು: ಕಂದಕಕ್ಕೆ ಉರುಳಿ ಬಿದ್ದ ಬಸ್: 21 ಮಂದಿ ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ

ಉತ್ತರ ಪ್ರದೇಶದ ಹತ್ರಾಸ್ನಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಜಮ್ಮುವಿನ ಅಖ್ನೂರ್ ತಾಂಡಾ ಬಳಿ ಅಪಘಾತಕ್ಕೀಡಾಗಿದೆ ಎಂದು ಜಮ್ಮುವಿನ ಡೆಪ್ಯೂಟಿ ಕಮಿಷನರ್ ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪವನ್ನ ಸೂಚಿಸಿದ್ದಾರೆ. ಜಮ್ಮು ಬಳಿಯ ಅಖ್ನೂರ್ನಲ್ಲಿ ಬಸ್ ಅಪಘಾತದಲ್ಲಿ ಜೀವಹಾನಿಯ ಬಗ್ಗೆ ತಿಳಿದು ನೋವಾಗಿದೆ. ಅಗಲಿದ ಕುಟುಂಬಗಳಿಗೆ ನನ್ನ ಸಂತಾಪ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಗಾಯಾಳುಗಳನ್ನು ಜಮ್ಮುವಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ಕೆಲವು ಗಾಯಾಳುಗಳು ಚೌಕಿ ಚೌರಾ ಆಸ್ಪತ್ರೆ ಮತ್ತು ಅಖ್ನೂರ್ ಉಪಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಮತ್ತು ಸ್ಥಳೀಯರನ್ನು ಒಳಗೊಂಡ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಗಾಯಾಳುಗಳನ್ನು ಅಖ್ನೂರ್ ಆಸ್ಪತ್ರೆ ಮತ್ತು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.