ನವದೆಹಲಿ : ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೊದಲ ಹಂತದ ಚುನಾವಣೆ ಹಿನ್ನಲೆ 16 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇದಕ್ಕೂ ಮೊದಲು ಮೂರು ಹಂತದ ಚುನಾವಣೆಗೆ ಒಟ್ಟು 44 ಅಭ್ಯರ್ಥಿಗಳನ್ನು ಘೋಷಿಸಿತ್ತು. ಘೋಷಣೆಯಾದ ಕೆಲವೇ ಹೊತ್ತಲ್ಲಿ ಪಟ್ಟಿಯನ್ನು ತಡೆಹಿಡಿದು ಬಳಿಕ ಮೊದಲ ಹಂತಕ್ಕೆ ಮಾತ್ರ 16 ಅಭ್ಯರ್ಥಿಗಳನ್ನು ಘೋಷಿಸಿದೆ. ಅಭ್ಯರ್ಥಿಗಳ ಆಯ್ಕೆ ಹಿನ್ನಲೆ ಭಾನುವಾರ ಕೇಂದ್ರ ಚುನಾವಣಾ ಸಮಿತಿ ನಡೆಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿ ಎಲ್ಲ ಸದಸ್ಯರು ಭಾಗಿಯಾಗಿದ್ದರು. ಸಭೆ ಬೆನ್ನಲೆ ಇಂದು ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಕಾಶ್ಮೀರದ ಅನಂತನಾಗ್ ಪೂರ್ವ-ಶಾಂಗುಸ್‌ನಿಂದ ಕಾಶ್ಮೀರಿ ಪಂಡಿತ ಸಮುದಾಯದ ವೀರ್ ಸರಾಫ್ ಟಿಕೆಟ್ ನೀಡಿದೆ. ಇದು ಪಂಡಿತ್ ಸಮುದಾಯಕ್ಕೆ ಗಮನಾರ್ಹವಾದ ಆದ್ಯತೆ ಎನ್ನಲಾಗಿದೆ. ಮೊದಲ ಪಟ್ಟಿಯಲ್ಲಿ ಶಗುನ್ ಪರಿಹಾರ್ ಹೆಸರಿನ ಓರ್ವ ಮಹಿಳೆಗೆ ಟಿಕೆಟ್ ನೀಡಿದ್ದು ಅವರು ಕಿಶ್ತ್ವಾರ್‌ನಿಂದ ಸ್ಪರ್ಧಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ, ಮತ್ತು ಮಾಜಿ ಉಪ ಮುಖ್ಯಮಂತ್ರಿಗಳಾದ ನಿರ್ಮಲ್ ಸಿಂಗ್ ಮತ್ತು ಕವಿಂದರ್ ಗುಪ್ತಾನಂತದ ಪ್ರಮುಖ ಹೆಸರುಗಳು ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯು ಮೂರು ಹಂತಗಳಲ್ಲಿ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 1 ರವರೆಗೆ ನಡೆಯಲಿದೆ. ಫಲಿತಾಂಶವು ಅಕ್ಟೋಬರ್ 4 ರಂದು ಪ್ರಕಟವಾಗಲಿದೆ. ಮೊದಲ ಪಟ್ಟಿಯನ್ನು ರದ್ದು ಮಾಡುವ ಮೊದಲು, ಪಕ್ಷವು ಮೊದಲ ಹಂತಕ್ಕೆ (ಸೆಪ್ಟೆಂಬರ್ 18) 15 ಅಭ್ಯರ್ಥಿಗಳನ್ನು, ಎರಡನೇ ಹಂತಕ್ಕೆ (ಸೆಪ್ಟೆಂಬರ್ 25) 10 ಅಭ್ಯರ್ಥಿಗಳನ್ನು ಮತ್ತು ಮೂರನೇ ಹಂತಕ್ಕೆ (ಅಕ್ಟೋಬರ್ 1) 19 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅಗಸ್ಟ್ 27 ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ.