ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿದ ಕೋರ್ಟ್; ಬಂಧಿಸಲು ಸೂಚನೆ

ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿದ ಕೋರ್ಟ್; ಬಂಧಿಸಲು ಸೂಚನೆ

ಲಕ್ನೋ, ಫೆ. 28: ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಸದ್ಯ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಯಪ್ರದಾ ಅವರು ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಘೋಷಿಸಿದೆ. ಜೊತೆಗೆ ಅವರನ್ನು ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ. 2019ರ ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಮಪುರದಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸಮನ್ಸ್ ನೀಡಿದ ಹೊರತಾಗಿಯೂ ಜಯಪ್ರದಾ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಜಯಪ್ರದಾ ಅವರಿಗೆ ನ್ಯಾಯಾಲಯದಿಂದ ಹಲವು ಬಾರಿ ಸಮನ್ಸ್ ಜಾರಿಯಾಗಿತ್ತು. ಆದರೆ ಅವರು ಇದಕ್ಕೆ ಸಮನ್ಸ್ ಗೆ ಉತ್ತರಿಸಿಲ್ಲ. ಹೀಗಾಗಿ ಜಯಪ್ರದಾ ವಿರುದ್ಧ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ. ಮಾರ್ಚ್ 6ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ರಾಮಪುರ ಪೊಲೀಸರಿಗೆ ಕೋರ್ಟ್ ನಿರ್ದೇಶಿಸಿದೆ. ಮಂಗಳವಾರದ ವಿಚಾರಣೆಯಲ್ಲಿ ನ್ಯಾಯಾಲಯವು ನೇರವಾಗಿ ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿತು. ಒಂದು ತಂಡವನ್ನು ರಚಿಸಿ ಜಯಪ್ರದಾ ಅವರನ್ನು ಮಾರ್ಚ್ 6ರಂದು ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯವು ಸೂಚಿಸಿದೆ. ಈಗ ತಂಡವೊಂದು ಜಯಪ್ರದಾ ಅವರನ್ನು ಹುಡುಕಲು ಹೊರಟಿದೆ.
ಜಯಪ್ರದಾ ಅವರ ವಿರುದ್ಧ ಹಲವು ಬಾರಿ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. ಆದರೆ, ಅವರನ್ನು ಕೋರ್ಟ್ ಎದುರು ಹಾಜರುಪಡಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಹಿರಿಯ ಅಧಿಕಾರಿಗಳ ಪ್ರಕಾರ ಜಯಪ್ರದಾ ಅವರ ಎಲ್ಲಾ ಮೊಬೈಲ್ಗಳು ಸ್ವಿಚ್ಆಫ್ ಆಗಿವೆಯಂತೆ. ಹೀಗಾಗಿ, ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.
61 ವರ್ಷ ವಯಸಸಿನ ಜಯಪ್ರದಾ 1974ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇದರ ಜೊತೆಗೆ ಕನ್ನಡದ ‘ಸನಾದಿ ಅಪ್ಪಣ್ಣ’, ‘ಹುಲಿಯ ಹಾಲಿನ ಮೇವು’, ‘ಕವಿರತ್ನ ಕಾಳಿದಾಸ’, ‘ಏಕಲವ್ಯ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ಕನ್ನಡದ ಜೊತೆಗೆ ಹಿಂದಿ ಚಿತ್ರರಂಗದಲ್ಲೂ ಅವರು ಫೇಮಸ್ ಆಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಜಯಪ್ರದಾ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ರಾಜಕೀಯದ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. 1994ರಲ್ಲಿ ಟಿಡಿಪಿ ಪಕ್ಷವನ್ನು ಸೇರಿದರು. 2004ರಲ್ಲಿ ಈ ಪಕ್ಷ ತೊರೆದು ಸಮಾಜವಾದಿ ಪಾರ್ಟಿ ಸೇರಿದರು. ನಂತರ ಇದನ್ನು 2010ರಲ್ಲಿ ತೊರೆದರು. 2014ರಲ್ಲಿ ರಾಷ್ಟ್ರೀಯ ಲೋಕದಳ ಸೇರಿದರು. ಇದನ್ನು ಬಿಟ್ಟು 2019ರಲ್ಲಿ ಅವರು ಬಿಜೆಪಿ ಸೇರಿದರು.

Previous Post
ದೇಶದ್ರೋಹಿಗಳನ್ನು ಬಂಧಿಸುವವರೆಗೂ ಬಿಜೆಪಿಯಿಂದ ಹೋರಾಟ: ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ
Next Post
ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ ಅಂಗೀಕರಿಸುವ ಪ್ರಶ್ನೆಯೇ ಇಲ್ಲ: ಹಿಮಾಚಲ ಸಿಎಂ

Recent News