ಜಾತಿ ಗಣತಿ: ಕಾಂಗ್ರೆಸ್‌ನ ಬದ್ಧತೆಯನ್ನು ಪುನರುಚ್ಛರಿಸಿದ ರಾಹುಲ್ ಗಾಂಧಿ
ನವದೆಹಲಿ, ಮಾ. 9: ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವ ತಮ್ಮ ಪಕ್ಷದ ಸಂಕಲ್ಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಒತ್ತಿಹೇಳಿದ್ದು, ಆರ್ಥಿಕ ಸಮೀಕ್ಷೆ ಜೊತೆಗೆ ಮೀಸಲಾತಿಯ ಮೇಲಿನ ಶೇಕಡಾ 50ರಷ್ಟು ಮಿತಿಯನ್ನು ತೆಗೆದು ಹಾಕಲಾಗುವುದು ಎಂದು ಪುನರುಚ್ಛರಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಕಾಂಗ್ರೆಸ್‌ನ ಘೋಷಣೆಯು ಸಾಮಾಜಿಕ ನ್ಯಾಯದ ಕಡೆಗೆ ಇರುವ ಮೊದಲ ಹೆಜ್ಜೆಯಾಗಿದೆ. ಯಾರು ಬಡವರು ಎಂದು ನಾವು ಎಂದಾದರೂ ಯೋಚಿಸಿದ್ದೇವೆಯೇ? ಎಷ್ಟು ಮಂದಿ ಮತ್ತು ಯಾವ ಸ್ಥಿತಿಯಲ್ಲಿದ್ದಾರೆ? ಇದೆಲ್ಲವನ್ನೂ ಲೆಕ್ಕ ಹಾಕುವ ಅಗತ್ಯವಿಲ್ಲವೇ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಬಿಹಾರದಲ್ಲಿ ನಡೆಸಿದ ಜಾತಿ ಸಮೀಕ್ಷೆಯು 88 ಪ್ರತಿಶತದಷ್ಟು ಬಡ ಜನಸಂಖ್ಯೆಯು ದಲಿತ, ಬುಡಕಟ್ಟು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೆಂದು ಬಹಿರಂಗಪಡಿಸಿದೆ. ಬಿಹಾರದ ಅಂಕಿಅಂಶಗಳು ದೇಶದ ನೈಜ ಚಿತ್ರದ ಒಂದು ಸಣ್ಣ ತುಣುಕಾಗಿದೆ. ದೇಶದ ಬಡ ಜನತೆಯು ಯಾವ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ ಎಂಬ ಬಗ್ಗೆ ಸಣ್ಣ ಕಲ್ಪನೆಯೂ ನಮಗೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ಎರಡು ಐತಿಹಾಸಿಕ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಜಾತಿ ಗಣತಿ, ಆರ್ಥಿಕ ಸಮೀಕ್ಷೆ ಆಧಾರದ ಮೇಲೆ ನಾವು ಶೇಕಡಾ 50ರ ಮೀಸಲಾತಿ ಮಿತಿಯನ್ನು ಕಿತ್ತುಹಾಕುತ್ತೇವೆ. ಈ ವಿಧಾನವು ಎಲ್ಲರಿಗೂ ಸರಿಯಾದ ಮೀಸಲಾತಿ, ಹಕ್ಕುಗಳನ್ನು ಎಲ್ಲರಿಗೂ ಒದಗಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದು ಬಡವರಿಗೆ ಸರಿಯಾದ ನೀತಿಗಳು ಮತ್ತು ಯೋಜನೆಗಳನ್ನು ಮಾಡಲು ಸಹಾಯ ಮಾಡುವುದರ ಜೊತೆಗೆ ಶಿಕ್ಷಣ, ಉದ್ಯೋಗ, ಔಷಧ ಮತ್ತು ಮುಖ್ಯವಾಹಿನಿಗೆ ಅವರನ್ನು ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಆದ್ದರಿಂದ ಎಚ್ಚೆತ್ತುಕೊಂಡು ಜಾತಿಗಣತಿ ಬಗ್ಗೆ ನಿಮ್ಮ ಧ್ವನಿಯನ್ನು ಎತ್ತಬೇಕು, ಜಾತಿ ಗಣತಿ ನಿಮ್ಮ ಹಕ್ಕು ಮತ್ತು ಅದು ನಿಮ್ಮನ್ನು ಕಷ್ಟಗಳ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ರಾಷ್ಟ್ರವ್ಯಾಪಿ ಜಾತಿಗಣತಿ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಮೊದಲು ಹೇಳಿದ್ದರು. ನಮಗೆ ಬೇಕಿರುವುದು ಸಾಮಾಜಿಕ ನ್ಯಾಯ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ರಾಷ್ಟ್ರವ್ಯಾಪಿ ಜಾತಿಗಣತಿ ನಡೆಸುತ್ತದೆ. ದಲಿತರು ಮತ್ತು ಇತರೆ ಹಿಂದುಳಿದ ಸಮುದಾಯಗಳ ಜನಸಂಖ್ಯೆಯನ್ನು ಕಂಡುಹಿಡಿಯಲು ಇದು ಸಹಕಾರಿಯಾಗಲಿದ ಎಂದು ಹೇಳಿದ್ದರು.