ಜಾತಿ ಗಣತಿ ಸೂಕ್ಷ್ಮ ವಿಚಾರ, ಚುನಾವಣಾ ಉದ್ದೇಶಕ್ಕೆ ಬಳಸಬಾರದು: ಆರ್‌ಎಸ್‌ಎಸ್
ನವದೆಹಲಿ : ಸರ್ಕಾರವು ದತ್ತಾಂಶದ ಕಾರಣಕ್ಕೆ ಜಾತಿ ಜನಗಣತಿಯನ್ನು ಮಾಡಬೇಕು ಅದನ್ನು ಜನಪರ ಕಲ್ಯಾಣ ಯೋಜನೆಗಳಿಗ ಬಳಸಬೇಕು ಆದರೆ ರಾಜಕೀಯಕ್ಕೆ, ಚುನಾವಣೆಗೆ ಬಳಸಿಕೊಳ್ಳಬಾರದು ಎಂದು ಆರ್‌ಎಸ್‌ಎಸ್ ಹೇಳಿದೆ. ಜಾತಿ ಜನಗಣತಿಗೆ ಸಂಬಂಧಿಸಂತೆ ತೀವ್ರ ಚರ್ಚೆ ನಡೆಯುತ್ತಿರುವ ಹೊತ್ತಲೇ ಈ ಮಹತ್ವದ ಹೇಳಿಕೆ ಹೊರ ಬಂದಿದೆ.
ಈ ಬಗ್ಗೆ ಮಾತನಾಡಿರುವ ಆರ್‌ಎಸ್‌ಎಸ್‌ನ ಮುಖ್ಯ ವಕ್ತಾರ ಸುನೀಲ್ ಅಂಬೇಕರ್, ಜಾತಿ ಪ್ರತಿಕ್ರಿಯೆಗಳು ನಮ್ಮ ಸಮಾಜದಲ್ಲಿ ಸೂಕ್ಷ್ಮ ವಿಷಯವಾಗಿದೆ ಮತ್ತು ಅವು ರಾಷ್ಟ್ರೀಯ ಏಕೀಕರಣಕ್ಕೆ ಮುಖ್ಯವಾಗಿದೆ. ಆದರೆ, ಜಾತಿ ಗಣತಿಯನ್ನು ಚುನಾವಣಾ ಪ್ರಚಾರ ಮತ್ತು ಚುನಾವಣಾ ಉದ್ದೇಶಗಳಿಗಾಗಿ ಬಳಸಬಾರದು ಎಂದು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿರುಸಿನ ಚರ್ಚೆ ನಡುವೆಯೇ ಆರ್‌ಎಸ್‌ಎಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿ, ಜಾತಿ ಗಣತಿಗೆ ತಾನು ವಿರೋಧವಿಲ್ಲ ಎಂದು ಪ್ರತಿಪಾದಿಸಿತ್ತು. ಈಗ ಮತ್ತೆ ಈ ಬಗ್ಗೆ ಚರ್ಚೆ ಶುರುವಾದ ಬೆನ್ನಲೆ ಹೇಳಿಕೆ ನೀಡಿದ್ದು ಜಾತಿ ಜನಗಣತಿ ಸಮಾಜದ ಸರ್ವತೋಮುಖ ಪ್ರಗತಿಗೆ ಬಳಸಬೇಕು, ಎಲ್ಲಾ ಕಡೆಯವರು ಸಾಮಾಜಿಕ ಸಾಮರಸ್ಯ ಮತ್ತು ಸಮಗ್ರತೆಗೆ ಭಂಗವಾಗದಂತೆ ನೋಡಿಕೊಳ್ಳಬೇಕು ಎಂದು ಅಂಬೇಕರ್ ಹೇಳಿದ್ದಾರೆ.
ಜಾತಿ ಗಣತಿಯನ್ನು “ನಿಷ್ಫಲ ವ್ಯಾಯಾಮ” ಎಂದು ಹೇಳುವ ಮೂಲಕ ವಿದರ್ಭ ಪ್ರದೇಶದ ಆರ್‌ಎಸ್‌ಎಸ್ ಕಾರ್ಯಾಧ್ಯಕ್ಷ ಶ್ರೀಧರ್ ಗಾಡ್ಗೆ ವಿವಾದ ಹುಟ್ಟು ಹಾಕಿದ್ದರು. ಜಾತಿ ಗಣತಿಯು ಜಾತಿವಾರು ಜನಸಂಖ್ಯೆಯನ್ನು ಅಳೆಯುತ್ತದೆ ಆದರೆ ಅದು ಸಮಾಜ ಅಥವಾ ರಾಷ್ಟ್ರದ ಹಿತಾಸಕ್ತಿಯಲ್ಲಿರುವುದಿಲ್ಲ ಎಂದು ಗಾಡ್ಗೆ ಹೇಳಿದ್ದರು.