ಜಾತಿ ವ್ಯವಸ್ಥೆ ಸಮರ್ಥಿಸಿಕೊಂಡ ಆರ್‌ಎಸ್‌ಎಸ್‌ ಮುಖವಾಣಿ: ವರದಿ

ಜಾತಿ ವ್ಯವಸ್ಥೆ ಸಮರ್ಥಿಸಿಕೊಂಡ ಆರ್‌ಎಸ್‌ಎಸ್‌ ಮುಖವಾಣಿ: ವರದಿ

ನವದೆಹಲಿ, ಆ. 12: ಆರ್‌ಎಸ್‌ಎಸ್‌ ಮುಖವಾಣಿ ‘ಪಾಂಚಜನ್ಯ’ ಸಾಪ್ತಾಹಿಕವು ತನ್ನ ಇತ್ತೀಚಿನ ಸಂಚಿಕೆಯಲ್ಲಿ ಜಾತಿ ವ್ಯವಸ್ಥೆಯನ್ನು ಬಲವಾಗಿ ಸಮರ್ಥಿಸಿದೆ. ಜಾತಿ ವ್ಯವಸ್ಥೆಯನ್ನು ಭಾರತೀಯ ಸಮಾಜದ “ಒಗ್ಗೂಡಿಸುವ ಅಂಶ” ಎಂದು ತನ್ನ ಸಂಪಾದಕೀಯದಲ್ಲಿ ಪ್ರತಿಪಾದಿಸಿರುವ ವಾರಪತ್ರಿಕೆ, “ಮೊಘಲರಿಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಬ್ರಿಟಿಷರು ಅದನ್ನು ತಮ್ಮ ಭಾರತವನ್ನು ಆಕ್ರಮಿಸುವ ಮಾರ್ಗದಲ್ಲಿನ ತಡೆ ಎಂಬುವುದಾಗಿ ಪರಿಗಣಿಸಿದ್ದರು” ಎಂದಿದೆ.
“ಜಾತಿ ವ್ಯವಸ್ಥೆಯು ಭಾರತದ ವಿವಿಧ ವರ್ಗಗಳನ್ನು ಅವರ ವೃತ್ತಿ ಮತ್ತು ಸಂಪ್ರದಾಯದ ಆಧಾರದಲ್ಲಿ ವರ್ಗೀಕರಿಸಿದ ಒಂದು ಸರಪಳಿಯಾಗಿತ್ತು. ಕೈಗಾರಿಕಾ ಕ್ರಾಂತಿಯ ನಂತರ, ಬಂಡವಾಳಶಾಹಿಗಳು ಜಾತಿ ವ್ಯವಸ್ಥೆಯನ್ನು ಭಾರತದ ಕಾವಲುಗಾರನಂತೆ ನೋಡಿದರು” ಎಂದು ವಾರಪತ್ರಿಕೆಯ ಸಂಪಾದಕ ಹಿತೇಶ್ ಶಂಕರ್ ಸಂಪಾದಕೀಯದಲ್ಲಿ ಹೇಳಿದ್ದಾರೆ” ಎನ್ನಲಾಗಿದೆ.
“ಜಾತಿ ವ್ಯವಸ್ಥೆಯು ಯಾವಾಗಲೂ ಆಕ್ರಮಣಕೋರರ ಗುರಿಯಾಗಿತ್ತು ಎಂದು ವಾದಿಸಿರುವ ಶಂಕರ್,‌ ಮೊಘಲರು ತಮ್ಮ ಖಡ್ಗದ ಬಲದಿಂದ ಅದನ್ನು ಗುರಿಯಾಗಿಸಿಕೊಂಡಿದ್ದರೆ, ಕ್ರೈಸ್ತ ಮಿಶನರಿಗಳು ಸೇವೆ ಮತ್ತು ಸುಧಾರಣೆಯ ಸೋಗಿನಲ್ಲಿ ಹಾಗೆ ಮಾಡಿದ್ದರು. ಜಾತಿಯ ರೂಪದಲ್ಲಿ ಭಾರತೀಯ ಸಮಾಜವು ಒಬ್ಬರ ಜಾತಿಗೆ ದ್ರೋಹವನ್ನು ಬಗೆಯುವುದು ದೇಶಕ್ಕೆ ದ್ರೋಹವಾಗಿದೆ ಎಂಬ ಸರಳವಾದ ವಿಷಯವನ್ನು ಅರ್ಥ ಮಾಡಿಕೊಂಡಿದೆ. ಮಿಶನರಿಗಳು ಭಾರತದ ಈ ಒಗ್ಗಟ್ಟಿನ ಸಮೀಕರಣವನ್ನು ಮೊಘಲರಿಗಿಂತ ಚೆನ್ನಾಗಿ ಅರಿತಿದ್ದರು. ಭಾರತ ಮತ್ತು ಅದರ ಸ್ವಾಭಿಮಾನವನ್ನು ಮುರಿಯಬೇಕಿದ್ದರೆ ಮೊದಲು ಜಾತಿ ವ್ಯವಸ್ಥೆಯನ್ನು ಬಂಧನ ಅಥವಾ ಶೃಂಖಲೆ ಎಂದು ಕರೆಯುವ ಮೂಲಕ ಜಾತಿಯ ಏಕೀಕರಣ ಸಮೀಕರಣವನ್ನು ಮುರಿಯಬೇಕು ಎನ್ನುವುದನ್ನು ಅವರು ಕಂಡುಕೊಂಡಿದ್ದರು. ಜಾತಿ ವ್ಯವಸ್ಥೆಯ ಕುರಿತು ಮಿಶನರಿಗಳ ಈ ತಿಳುವಳಿಕೆಯನ್ನು ಬ್ರಿಟಿಷರು ತಮ್ಮ ‘ಒಡೆದು ಆಳುವ’ ನೀತಿಗಾಗಿ ಅಳವಡಿಸಿಕೊಂಡಿದ್ದರು” ಎಂದು ಸಂಪಾದಕೀಯವು ವಾದಿಸಿದೆ.

‘ಪಾಂಚಜನ್ಯ’ ದಿಂದ ಜಾತಿ ವ್ಯವಸ್ಥೆಯ ಈ ಸಮರ್ಥನೆಯು ಮಹತ್ವದ್ದಾಗಿದೆ, ಏಕೆಂದರೆ ವಂಚಿತ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಗೆ ತಾನು ವಿರುದ್ಧವಾಗಿಲ್ಲ ಎಂದು ವಿವರಿಸುವುದು ಆರೆಸ್ಸೆಸ್‌ಗೆ ಕಷ್ಟವಾಗಿರುವ ಸಮಯದಲ್ಲಿ ಈ ಸಮರ್ಥನೆ ಬಂದಿದೆ. ಜಾತಿ ತಾರತಮ್ಯವು ಭಾರತೀಯ ಸಮಾಜಕ್ಕೆ ಶಾಪವಾಗಿದೆ ಮತ್ತು ಅದನ್ನು ತೊಡೆದುಹಾಕಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಪದೇ ಪದೇ ಹೇಳುತ್ತಾರೆ. ತಮ್ಮ ಸಹೋದ್ಯೋಗಿಗಳ ಜಾತಿ ತಮಗೆ ತಿಳಿದಿಲ್ಲ ಎಂದು ಆರೆಸ್ಸೆಸ್ ಸದಸ್ಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಕಳೆದ 2,000 ವರ್ಷಗಳಿಂದ ಕೆಳಜಾತಿಗಳು ಅನುಭವಿಸಿರುವ ತಾರತಮ್ಯವನ್ನು ಸರಿದೂಗಿಸಲು ಮೀಸಲಾತಿಯನ್ನು ಇನ್ನೂ 200 ವರ್ಷಗಳ ಕಾಲ ಮುಂದುವರಿಸಿದರೂ ತಾನು ಅದನ್ನು ಬೆಂಬಲಿಸುತ್ತೇನೆ ಎಂದು ಭಾಗವತ್ ಕಳೆದ ವರ್ಷ ಹೇಳಿದ್ದರು. “ಒಂದು ಜಾತಿ ಗುಂಪಿನಲ್ಲಿ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಗೊಂಡ ಕೌಶಲ್ಯಗಳಿಂದಾಗಿ ಬಂಗಾಳದ ನೇಕಾರರಂತಹ ಕುಶಲಕರ್ಮಿಗಳು ಎಷ್ಟೊಂದು ನಿಪುಣರಾಗಿದ್ದರೆಂದರೆ ಅವರಂತೆ ಉತ್ಪನ್ನಗಳನ್ನು ಉತ್ಪಾದಿಸಲು ಮ್ಯಾಂಚೆಸ್ಟರ್‌ನ ಜವಳಿ ಗಿರಣಿಗಳಿಗೂ ಸಾಧ್ಯವಾಗಿರಲಿಲ್ಲ ಎಂದು ಪ್ರತಿಪಾದಿಸಿರುವ ಸಂಪಾದಕೀಯವು, ಆಕ್ರಮಣಕೋರರು ಭಾರತದ ಕೈಗಾರಿಕೆಗಳನ್ನು ನಾಶಗೊಳಿಸಿದ್ದು ಮಾತ್ರವಲ್ಲ, ಭಾರತದ ಅನನ್ಯತೆಯನ್ನು ಬದಲಿಸಲು ಮತಾಂತರದ ಮೇಲೂ ಕೇಂದ್ರೀಕರಿಸಿದ್ದರು. ಜಾತಿಗತ ಗುಂಪುಗಳು ಇದಕ್ಕೆ ಮಣಿಯದಿದ್ದಾಗ ಅವರನ್ನು ಅವಮಾನಿಸಲಾಗಿತ್ತು. ಸ್ವಾಭಿಮಾನಿ ಸಮುದಾಯವು ತನ್ನ ತಲೆಯ ಮೇಲೆ ಮಾನವ ಮಲ ಹೊರುವಂತೆ ಬಲವಂತಗೊಳಿಸಿದ್ದವರು ಇದೇ ಜನರಾಗಿದ್ದರು. ಅದಕ್ಕೂ ಮೊದಲು ಭಾರತದಲ್ಲಿ ಇಂತಹ ಸಂಪ್ರದಾಯವಿರಲಿಲ್ಲ”ಎಂದು ಹೇಳಿದೆ.

“ಭಾರತೀಯ ಪೀಳಿಗೆಗಳ ಪ್ರತಿಭೆಗಳನ್ನು ಕಂಡು ಮತ್ಸರ ಪಡುತ್ತಿದ್ದ ಅವೇ ಕಣ್ಣುಗಳು ಹಿಂದೂ ಧರ್ಮದ ವೈವಿಧ್ಯತೆ, ಸಂಪ್ರದಾಯಗಳು ಮತ್ತು ಆಚರಣೆಗಳನ್ನು ನಾಶಗೊಳಿಸುವ ಕನಸು ಕಾಣುತ್ತಿವೆ” ಎಂದು ಶಂಕರ್ ಸಂಪಾದಕೀಯದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಸಂಪಾದಕೀಯ, “ಹಿಂದೂ ಜೀವನವು ಘನತೆ, ನೈತಿಕತೆ, ಜವಾಬ್ದಾರಿ ಮತ್ತು ಕೋಮು ಭ್ರಾತೃತ್ವವನ್ನು ಒಳಗೊಂಡಿದ್ದು, ಜಾತಿಯ ಸುತ್ತ ಸುತ್ತುತ್ತದೆ. ಇದು ವೈಯಕ್ತಿಕ ಕೇಂದ್ರಿತ ಮಿಷನರಿಗಳಿಗೆ ಅರ್ಥವಾಗದ ವಿಷಯ. ಮಿಷನರಿಗಳು ತಮ್ಮ ಮತಾಂತರ ಕಾರ್ಯಕ್ರಮಕ್ಕೆ ಜಾತಿಯನ್ನು ಅಡ್ಡಿಯಾಗಿ ಕಂಡರೆ, ಕಾಂಗ್ರೆಸ್ ಅದನ್ನು ಹಿಂದೂ ಐಕ್ಯತೆಗೆ ಒಂದು ತಡೆಯಾಗಿ ನೋಡುತ್ತದೆ. ಬ್ರಿಟಿಷರ ಮಾದರಿಯಲ್ಲಿ ಲೋಕಸಭೆ ಸ್ಥಾನಗಳನ್ನು ಜಾತಿ ಆಧಾರದ ಮೇಲೆ ವಿಭಜಿಸಿ ದೇಶದಲ್ಲಿ ವಿಭಜನೆಯನ್ನು ಹೆಚ್ಚಿಸಲು ಬಯಸುತ್ತಿದೆ. ಅದಕ್ಕಾಗಿಯೇ ಅದು ಜಾತಿ ಗಣತಿಯನ್ನು ಬಯಸುತ್ತದೆ ಎಂದು ಪಾಂಚಜನ್ಯ ಸಂಪಾದಕೀಯ ಹೇಳಿದೆ.

Previous Post
ಹಿಂಡೆನ್‌ಬರ್ಗ್‌ ವರದಿ ಪರಿಣಾಮ; ಕುಸಿತ ಕಂಡ ಅದಾನಿ ಸಮೂಹದ ಷೇರುಗಳು
Next Post
ಮಾನವ-ಆನೆ ಸಂಘರ್ಷ ತಡೆಗೆ ಸರ್ಕಾರ ಬದ್ಧವಾಗಿದೆ: ಸಿಎಂ ಸಿದ್ದರಾಮಯ್ಯ

Recent News