ಜಾಮೀನು ಅವಧಿ ಅಂತ್ಯ, ತಿಹಾರ್‌ಗೆ ಮರಳಿದ ಕೇಜ್ರಿವಾಲ್

ಜಾಮೀನು ಅವಧಿ ಅಂತ್ಯ, ತಿಹಾರ್‌ಗೆ ಮರಳಿದ ಕೇಜ್ರಿವಾಲ್

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿಗೆ ಮರಳಿದ್ದಾರೆ. ಅವರ ಮಧ್ಯಂತರ ಜಾಮೀನು ಅವಧಿ ಅಂತ್ಯವಾದ ಹಿನ್ನಲೆ ಅವರು ಅಧಿಕಾರಿಗಳ ಮುಂದೆ ಶರಣಾದರು. ಲೋಕಸಭೆ ಚುನಾವಣೆ ಹಿನ್ನಲೆ ಪ್ರಚಾರಕ್ಕಾಗಿ ಅವರು ಸುಪ್ರೀಂಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು.

ಶರಣಾಗುವ ಮೊದಲು, ಕೇಜ್ರಿವಾಲ್ ಅವರು ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು, ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಪಕ್ಷದ ಕಚೇರಿಯಲ್ಲಿ ಆಪ್ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದರು, “ನಾನು ದೆಹಲಿಯ ಜನರಿಗೆ ಹೇಳಲು ಬಯಸುತ್ತೇನೆ ನಿಮ್ಮ ಮಗ ಇಂದು ಜೈಲಿಗೆ ಮರಳುತ್ತಿದ್ದಾನೆ. ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇನೆ ಎಂಬ ಕಾರಣಕ್ಕಾಗಿ ಅಲ್ಲ, ನಾನು ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ್ದೇನೆ. ಪ್ರಚಾರದ ಸಮಯದಲ್ಲಿ ಪ್ರಧಾನಿ ಅವರು ನನ್ನ ವಿರುದ್ಧ ಯಾವುದೇ ಪುರಾವೆ ಹೊಂದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅವರು 500 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ ಆದರೆ ಒಂದು ಪೈಸೆಯನ್ನೂ ವಸೂಲಿ ಮಾಡಿಲ್ಲ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಪ್ರಚಂಡ ಗೆಲುವು ಮತ್ತು ಪಿಎಂ ಮೋದಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುತ್ತಾರೆ ಎಂದು ಭವಿಷ್ಯ ನುಡಿದ ಚುನಾವಣೊತ್ತರ ಸಮೀಕ್ಷೆಗಳ ಫಲಿತಾಂಶಗಳನ್ನು ಅವರು ತಿರಸ್ಕರಿಸಿದರು. ಈ ಎಲ್ಲಾ ಎಕ್ಸಿಟ್ ಪೋಲ್‌ಗಳು ನಕಲಿ. ಒಂದು ಎಕ್ಸಿಟ್ ಪೋಲ್ ರಾಜಸ್ಥಾನದಲ್ಲಿ ಬಿಜೆಪಿಗೆ 33 ಸ್ಥಾನಗಳನ್ನು ನೀಡಿತು, ಆದರೆ ಅಲ್ಲಿ ಕೇವಲ 25 ಸ್ಥಾನಗಳಿವೆ ಎಂದು ಹೇಳಿದರು‌.

ಅರವಿಂದ್ ಕೇಜ್ರಿವಾಲ್ ಶರಣಾದ ಬಳಿಕ ಜೈಲು ಅಧಿಕಾರಿಗಳು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ತಪಾಸಣೆಯ ಸಮಯದಲ್ಲಿ ಅವರ ಸಕ್ಕರೆ ಮತ್ತು ರಕ್ತದೊತ್ತಡದ ಮಟ್ಟವನ್ನು ಸಹ ಜೈಲು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಅವರ ಅನಾರೋಗ್ಯದ ವಿಚಾರದಲ್ಲಿ ಆಪ್ ಸಾಕಷ್ಟು ಆರೋಪ ಮಾಡುತ್ತಿರುವ ಹಿನ್ನಲೆ ಈ ಎಚ್ಚರಿಕೆ ವಹಿಸಲಾಗುತ್ತಿದೆ.

Previous Post
ವಿಧಾನ ಪರಿಷತ್ ಚುನಾವಣೆ ಮೂವರು ಅಭ್ಯರ್ಥಿಗಳನ್ನ ಘೋಷಿಸಿದ ಬಿಜೆಪಿ
Next Post
ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ, ಮಂಡ್ಯದಲ್ಲಿ ಎಚ್‌ಡಿ ಕುಮಾರಸ್ವಾಮಿಗೆ ಮುನ್ನಡೆ

Recent News