ಜೂನ್‌ 8 ಅಲ್ಲ, ಜೂನ್‌ 7ರಂದು ಸಂಜೆ 5ಕ್ಕೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ

ಜೂನ್‌ 8 ಅಲ್ಲ, ಜೂನ್‌ 7ರಂದು ಸಂಜೆ 5ಕ್ಕೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ  292 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಎನ್‌ಡಿಎ  ಮೈತ್ರಿಕೂಟವು ಸರ್ಕಾರ ರಚಿಸಲು ಸಜ್ಜಾಗಿದೆ. ಎನ್‌ಡಿಎ ಮಿತ್ರಪಕ್ಷಗಳ ಜತೆ ನರೇಂದ್ರ ಮೋದಿ  ಅವರು ಸಭೆ ನಡೆಸಿದ್ದು, ನರೇಂದ್ರ ಮೋದಿ ಅವರಿಗೆ ನಿತೀಶ್‌ ಕುಮಾರ್‌, ಚಂದ್ರಬಾಬು ನಾಯ್ಡು ಸೇರಿ ಹಲವು ನಾಯಕರು ಬೆಂಬಲ ಪತ್ರ ನೀಡಿದ್ದಾರೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ಅವರು ಜೂನ್‌ 7ರಂದು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಎನ್‌ಡಿಎ ಸಭೆಯಲ್ಲಿ ಎಲ್ಲ ಮಿತ್ರಪಕ್ಷಗಳು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಜೂನ್‌ 7ರಂದು ಸಂಜೆ 5 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೋದಿ ಅವರ ಜತೆಗೆ ಸಚಿವರಾಗಿ 21 ಸಂಸದರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಜೂನ್‌ 8ರಂದು ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈಗ ಒಂದು ದಿನ ಮುಂಚಿತವಾಗಿ ಅಂದರೆ ಶುಕ್ರವಾರವೇ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಎನ್‌ಡಿಎ ಸಭೆಯಲ್ಲಿಯೇ ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

‌ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆಯಿತು. ತೆಲುಗುದೇಶಂ ಪಕ್ಷದ (TDP), ಸಂಯುಕ್ತ ಜನತಾದಳದ ನಿತೀಶ್‌ ಕುಮಾರ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌, ಆರ್‌ಎಲ್‌ಡಿಯ ಜಯಂತ್‌ ಚೌಧರಿ, ಜನಸೇನಾ ಪಕ್ಷದ ಪವನ್‌ ಕಲ್ಯಾಣ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಎಲ್ಲರೂ ಒಗ್ಗೂಡಿ ಸರ್ಕಾರ ರಚಿಸುವುದು, ಒಗ್ಗಟ್ಟಿನಿಂದ ಇರುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ನಿತೀಶ್‌ ಕುಮಾರ್‌ ಅವರ ಪಕ್ಷವು 16, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯು 12, ಏಕನಾಥ್‌ ಶಿಂಧೆ ಬಣದ ಶಿವಸೇನೆ 7 ಹಾಗೂ ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿಯು 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರಿಂದಾಗಿ, ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆಗೆ ಇವರ ಪಾತ್ರವು ನಿರ್ಣಾಯಕವಾಗಿದೆ. ಹಾಗಾಗಿ, ಮೋದಿ ಹಾಗೂ ಅಮಿತ್‌ ಶಾ ಅವರು ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸಭೆ ನಡೆಸಿ, ಸರ್ಕಾರ ರಚಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಎಲ್ಲ ಪಕ್ಷಗಳು ಬೆಂಬಲ ಪತ್ರಗಳನ್ನು ನೀಡಿದ್ದು, ಸರ್ಕಾರ ರಚಿಸಲು ಹಕ್ಕು ಮಂಡಿಸಲಾಗುತ್ತದೆ.

ಎನ್‌ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಜೆಡಿಯು, ಟಿಡಿಪಿ, ಶಿವಸೇನೆ ಹಾಗೂ ಎಲ್‌ಜೆಪಿ ಪಕ್ಷಗಳ ಪಾತ್ರ ನಿರ್ಣಾಯಕವಾಗಿರುವ ಕಾರಣ ಆಯಾ ಪಕ್ಷಗಳ ನಾಯಕರು ಮಹತ್ವದ ಖಾತೆ, ಹುದ್ದೆ ಸೇರಿ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಕೂಡ ಕೇಂದ್ರದಲ್ಲಿ ಒಂದು ಖಾತೆಗೆ ಬೇಡಿಕೆ ಇಟ್ಟಿದ್ದು, ಅವರು ಕೃಷಿ ಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Previous Post
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಮಹತ್ವ ಸಭೆ ನಡೆಸಿತು.
Next Post
ಎನ್‌ಡಿಎಗೇ ಬೆಂಬಲ: ಚಂದ್ರಬಾಬು ನಾಯ್ಡು

Recent News