ಜೈಲಿನಿಂದ ಹಿಂದಿರುಗಿದ ನಂತರ ಮಹಿಳೆಯರಿಗೆ ಪ್ರತಿ ತಿಂಗಳಿಗೆ 1 ಸಾವಿರ ರೂ

ಜೈಲಿನಿಂದ ಹಿಂದಿರುಗಿದ ನಂತರ ಮಹಿಳೆಯರಿಗೆ ಪ್ರತಿ ತಿಂಗಳಿಗೆ 1 ಸಾವಿರ ರೂ

ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ, ಜನರಲ್ಲಿ ಕೇಜ್ರಿವಾಲ್‌ ಭಾವನಾತ್ಮಕ ಮನವಿ

ನವದೆಹಲಿ: ಅಬಕಾರಿ ಹಗರಣದ ಪ್ರಕರಣದಲ್ಲಿ ಸದ್ಯ ಜಾಮೀನಿನ ಮೇಲೆ ಹೊರಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೂನ್ 2 ರಂದು ಮತ್ತೆ ಜೈಲಿಗೆ ಹೋಗಲಿದ್ದಾರೆ. ಈ ನಡುವೆ ಕೇಜ್ರಿವಾಲ್‌ ಅವರು ತಮ್ಮ ಜನರಲ್ಲಿ ಭಾವನಾತ್ಮಕ ಮನವಿವೊಂದನ್ನು ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಹೆತ್ತವರಿಗೆ ವಯಸ್ಸಾಗಿದೆ ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೈಲಿನಲ್ಲೂ ಆಕೆಯ ಬಗ್ಗೆ ನಾನು ತುಂಬಾ ಚಿಂತಿತನಾಗುತ್ತೇನೆ. ಹೀಗಾಗಿ ನನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿದರು.

ನನ್ನ ಪತ್ನಿ ಸುನೀತಾ ತುಂಬಾ ಧೈರ್ಯವಂತೆ. ಕಷ್ಟದ ಸಮಯದಲ್ಲಿ ಆಕೆ ನನಗೆ ಬೆಂಬಲವಾಗಿ ನಿಂತಿದ್ದಾಳೆ. ನನ್ನ ಜೀವನದಲ್ಲಿ ಕಷ್ಟದ ಸಮಯ ಬಂದಾಗ, ನೀವೆಲ್ಲರೂ ನನಗೆ ಬೆಂಬಲ ನೀಡಿದ್ದೀರಿ. ನನ್ನ ಪ್ರಾಣ ಹೋದ್ರೂ ಸರಿ ಸರ್ವಾಧಿಕಾರದ ವಿರುದ್ಧ ಹೋರಾಡುತ್ತೇನೆ. ದುಃಖಿಸಬೇಡಿ, ನಾನು ಇಂದು ಜೀವಂತವಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವು ನನ್ನನ್ನು ರಕ್ಷಿಸುತ್ತದೆ. ದೇವರು ಬಯಸಿದಲ್ಲಿ ಈ ನಿಮ್ಮ ಮಗ ಶೀಘ್ರದಲ್ಲೇ ಹಿಂದಿರುಗುತ್ತಾನೆ ಎಂದು ಕೇಜ್ರಿವಾಲ್‌ ಭಾವುಕರಾಗಿದ್ದಾರೆ.

ಸುಪ್ರೀಂಕೋರ್ಟ್ ನನಗೆ ಪ್ರಚಾರಕ್ಕೆ 21 ದಿನಗಳ ಕಾಲಾವಕಾಶ ನೀಡಿತ್ತು. ನಾಳೆಗೆ 21 ದಿನಗಳು ಪೂರ್ಣಗೊಳ್ಳುತ್ತಿವೆ. ಭಾನುವಾರ ನಾನು ಶರಣಾಗಬೇಕಾಗಿದ್ದು, ಮತ್ತೆ ತಿಹಾರ್ ಜೈಲಿಗೆ ಹೋಗುತ್ತೇನೆ. ಈ ಜನರು ನನ್ನನ್ನು ಎಷ್ಟು ದಿನ ಜೈಲಿನಲ್ಲಿ ಇಡುತ್ತಾರೋ ಗೊತ್ತಿಲ್ಲ. ಆದರೆ ನನ್ನ ಉತ್ಸಾಹ ಹೆಚ್ಚಾಗಿದೆ. ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ನಾನು ಜೈಲಿಗೆ ಹೋಗುತ್ತಿದ್ದೇನೆ ಎಂದು ನನಗೆ ಹೆಮ್ಮೆ ಇದೆ ಎಂದರು.

ಜೈಲಿನಲ್ಲಿ ನನ್ನನ್ನು ಹಲವು ರೀತಿಯಲ್ಲಿ ಬಗ್ಗಿಸಲು ಪ್ರಯತ್ನಿಸಿದರೂ, ಅವರು ಯಶಸ್ವಿಯಾಗಲಿಲ್ಲ. ನನ್ನನ್ನು ಹಲವು ರೀತಿಯಲ್ಲಿ ಹಿಂಸಿಸುತ್ತಿದ್ದರು. ನಾನು 20 ವರ್ಷಗಳಿಂದ ಮಧುಮೇಹ ರೋಗಿಯಾಗಿದ್ದೇನೆ. ಕಳೆದ 10 ವರ್ಷಗಳಿಂದ ನಾನು ಪ್ರತಿದಿನ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ. ಆದರೆ ಜೈಲಿನಲ್ಲಿ ಅವರು ಹಲವಾರು ದಿನಗಳವರೆಗೆ ಇನ್ಸುಲಿನ್ ಕೊಡುವುದನ್ನು ನಿಲ್ಲಿಸಿದರು. ಹೀಗಾಗಿ ನನ್ನ ಶಗರ್‌ ಲೆವೆಲ್ 300 ತಲುಪಿತು. ಈ ಜನರಿಗೆ ಏನು ಬೇಕು ಎಂದು ತಿಳಿದಿಲ್ಲ. ನಾನು 50 ದಿನಗಳ ಕಾಲ ಜೈಲಿನಲ್ಲಿದ್ದೆ. ಈ 50 ದಿನಗಳಲ್ಲಿ ನಾನು 6 ಕೆ.ಜಿ ತೂಕವನ್ನು ಕಳೆದುಕೊಂಡೆ. ಜೈಲಿಗೆ ಹೋದಾಗ 70 ಕೆಜಿ ಇದ್ದ ನನ್ನ ತೂಕ ಇಂದು 64 ಕೆ.ಜಿ ಆಗಿದೆ. ಜೈಲಿನಿಂದ ಹೊರಬಂದರೂ ತೂಕ ಹೆಚ್ಚಾಗುತ್ತಿಲ್ಲ. ಇದು ಕೆಲವು ಗಂಭೀರ ಕಾಯಿಲೆಯ ಲಕ್ಷಣಗಳೂ ಆಗಿರಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ನಾನು ಜೈಲಿನಲ್ಲಿದ್ದರೂ ದೆಹಲಿಯ ಜನರಿಗೋಸ್ಕರ ನನ್ನ ಸೇವೆ ನಿಲ್ಲಲ್ಲ ಎಂದು ಭರವಸೆ ನೀಡಲು ಬಯಸುತ್ತೇನೆ ಎಂದ ಅವರು, ಮತ್ತೆ ಶರಣಾಗಲು ನಾನು ಭಾನುವಾರ ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೊರಡುತ್ತೇನೆ. ಈ ಬಾರಿ ಅವರು ನನ್ನನ್ನು ಹೆಚ್ಚು ಹಿಂಸಿಸುವ ಸಾಧ್ಯತೆಯಿದೆ. ಆದರೆ ಇದಕ್ಕೆ ನಾನು ತಲೆಕೆಡಿಸಲ್ಲ. ನೀವು ತುಂಬಾ ಸಂತೋಷದಿಂದಿದ್ದರೆ, ನಿಮ್ಮ ಮುಖ್ಯಮಂತ್ರಿ ಕೇಜ್ರಿವಾಲ್ ಕೂಡ ಸಂತೋಷವಾಗಿರುತ್ತಾರೆ ಎಂದು ಹೇಳಿದರು.

ನಿಮ್ಮ ಸೇವೆ ಮಾಡುವುದನ್ನು ನಾನು ನಿಲ್ಲಿಸುವುದಿಲ್ಲ. ಮೊಹಲ್ಲಾ ಚಿಕಿತ್ಸಾಲಯಗಳು, ಉಚಿತ ಔಷಧಗಳು, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 24 ಗಂಟೆಗಳ ವಿದ್ಯುತ್ ಮುಂದುವರಿಯುತ್ತದೆ. ಅಲ್ಲದೇ ಜೈಲಿನಿಂದ ಹಿಂದಿರುಗಿದ ನಂತರ ನಾನು ಪ್ರತಿ ತಾಯಿ ಮತ್ತು ಸಹೋದರಿಗೆ ಪ್ರತಿ ತಿಂಗಳು 1,000 ರೂ. ನೀಡಲು ಪ್ರಾರಂಭಿಸುತ್ತೇನೆ ಎಂದು ಕೇಜ್ರಿವಾಲ್‌ ಭರವಸೆ ನೀಡಿದರು.

Previous Post
ಕಾಂಗ್ರೆಸ್ ಪ್ರಚಾರದಿಂದ ಇಂಡಿಯಾ ಬಣಕ್ಕೆ ನಿರ್ಣಾಯಕ ಜನಾದೇಶ: ರಮೇಶ್
Next Post
ರಾಜಧಾನಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟು, ಸುಪ್ರೀಂ ಮೆಟ್ಟಿಲೇರಿದ ಆಪ್ ಸರ್ಕಾರ

Recent News