ಜೈಲುಗಳಲ್ಲೂ ಜಾತಿ ತಾರತಮ್ಯ ವಿಷಾದಕರ: ಸುಪ್ರೀಂ

ಜೈಲುಗಳಲ್ಲೂ ಜಾತಿ ತಾರತಮ್ಯ ವಿಷಾದಕರ: ಸುಪ್ರೀಂ

ನವದೆಹಲಿ, ಜು. 11: ರಾಜ್ಯಗಳ ಜೈಲು ಕೈಪಿಡಿಗಳಲ್ಲಿ ಜಾತಿ ತಾರತಮ್ಯ ಉತ್ತೇಜಿಸುವ ನಿಬಂಧನೆಗಳಿರುವುದು ‘ತುಂಬಾ ವಿಷಾದಕರ’ ಸಂಗತಿ ಎಂದಿರುವ ಸುಪ್ರೀಂ ಕೋರ್ಟ್, ಜಾತಿ ಆಧಾರಿತ ತಾರತಮ್ಯ ಪದ್ಧತಿಗಳನ್ನು ತೊಡೆದು ಹಾಕಲು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶಿಸುವುದಾಗಿ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಪತ್ರಕರ್ತೆ ಸುಕನ್ಯಾ ಶಾಂತಾ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಕಾಯ್ದಿರಿಸುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಭಾರತದ ಜೈಲು ಕೈಪಿಡಿಗಳ ಮೂಲಕ ರಾಜ್ಯ ಪ್ರಾಯೋಜಿತ ಜಾತಿ ತಾರತಮ್ಯ ನಡೆಸಲಾಗ್ತಿದೆ’ ಎಂಬ ತನ್ನ ತನಿಖಾ ವರದಿ ಆಧರಿಸಿ ‘ದಿ ವೈರ್‌’ನ ಪತ್ರಕರ್ತೆ ಸುಕನ್ಯಾ ಶಾಂತಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ರಾಜ್ಯಗಳ ಜೈಲು ಕೈಪಿಡಿಗಳು ಕೆಲಸ ನೀಡುವಲ್ಲಿ ಮತ್ತು ಬ್ಯಾರಕ್‌ಗಳ ಹಂಚಿಕೆ ವೇಳೆ ಖೈದಿಗಳನ್ನು ಜಾತಿ ಆಧಾರದ ಮೇಲೆ ಪ್ರತ್ಯೇಕಿಸಲು ಉತ್ತೇಜನ ನೀಡುವಂತಿದೆ. ಅಲ್ಲದೆ, ದುರ್ಬಲ ಜಾತಿಯ ಖೈದಿಗಳಿಂದ ಬಲವಂತದ ದುಡಿಮೆ ಮಾಡಿಸಿಕೊಂಡು ದೌರ್ಜನ್ಯ ಎಸಗುತ್ತಿದೆ ಎಂದು ಸುಕನ್ಯಾ ತನ್ನ ಅರ್ಜಿಯಲ್ಲಿ ಹೇಳಿದ್ದರು. ಜೈಲುಗಳಲ್ಲಿ ಜಾತಿ ಆಧಾರಿತ ಖೈದಿ ಕಾರ್ಮಿಕರ ಪ್ರತ್ಯೇಕತೆಯು ವಸಾಹತುಶಾಹಿ ಭಾರತದ ಅವಶೇಷವಾಗಿದೆ. ಜಾತಿ ಆಧಾರಿತ ಖೈದಿ ಕಾರ್ಮಿಕರ ಹಂಚಿಕೆ ಅವಮಾನಕರ ಮತ್ತು ಅನಾರೋಗ್ಯಕರವಾಗಿದೆ. ಇದು ಘನತೆಯಿಂದ ಬದುಕುವ ಕೈದಿಗಳ ಹಕ್ಕಿನ ವಿರುದ್ಧವಾಗಿದೆ ಎಂದಿದ್ದರು.

ತಮಿಳುನಾಡಿನ ಪಾಲಯಂಕೊಟ್ಟೈ ಕೇಂದ್ರ ಕಾರಾಗೃಹದಲ್ಲಿ ತೇವರ್‌, ನಾಡಾರ್‌ ಮತ್ತು ಪಲ್ಲರ್‌ ಖೈದಿಗಳನ್ನು ಅವರ ಜಾತಿಯ ಆಧಾರದ ಮೇಲೆ ವಿವಿಧ ಬ್ಯಾರಕ್‌ಗಳಲ್ಲಿ ಪ್ರತ್ಯೇಕಿಸಿರುವುದು ಕಾರಾಗೃಹಗಳಲ್ಲಿ ಜಾತಿ ಆಧಾರಿತ ತಾರತಮ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಜೈಲಿನೊಳಗೆ ಕಾಲಿಟ್ಟ ಕೂಡಲೇ ಕೈದಿಗಳು ಇಂತಹ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದರು. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್, ಒಡಿಶಾ, ಜಾರ್ಖಂಡ್, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದ ಜೈಲು ಕೈಪಿಡಿಗಳಲ್ಲಿ ಕಂಡುಬರುವ ತಾರತಮ್ಯದ ನಿಬಂಧನೆಗಳನ್ನು ರದ್ದುಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದರು.

Previous Post
ರೈತರ ಹರಿಯಾಣ ಪ್ರವೇಶ ತಡೆ ಅಸಾಧ್ಯ: ಶಂಭು ಗಡಿ ತೆರೆವಿಗೆ ಹೈಕೋರ್ಟ್ ಆದೇಶ
Next Post
ನೋಟು ನಿಷೇಧ, ಜಿಎಸ್‌ಟಿ ಜಾರಿ, ಕೋವಿಡ್‌ನಿಂದ 11.3 ಲಕ್ಷ ಕೋಟಿ ನಷ್ಟ: ವರದಿ

Recent News