ಟೆಕ್ ಸಿಟಿ ಬೆಂಗಳೂರು ಟ್ಯಾಂಕರ್ ಸಿಟಿಯಾಗಿ ಬದಲಾಗಿದೆ; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಬೆಂಗಳೂರು, ಏಪ್ರಿಲ್. 29: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿರುವುದಕ್ಕೆ ಕರ್ನಾಟಕದ ಜನತೆ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿಯಾಗಿ ಬದಲಾಯಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ. ಸಿಲಿಕಾನ್ ಸಿಟಿ ಎದುರಿಸುತ್ತಿರುವ ನೀರಿನ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲಿರುವ ಮುಖ್ಯಮಂತ್ರಿ ಕುರ್ಚಿ ಸಮಸ್ಯೆಯನ್ನು ಬಗೆಹರಿಸಲು ಇನ್ನೂ ಸಾಧ್ಯವಾಗಿಲ್ಲ. ಅಧಿಕಾರಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
“ಕರ್ನಾಟಕದ ಜನರು ಕಾಂಗ್ರೆಸ್ ಆರಿಸಿ ದೊಡ್ಡ ತಪ್ಪು ಮಾಡಿದ್ದೇವೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ನಮಗೆ ಬೆಂಬಲ ಕಡಿಮೆಯಾಗಿಲ್ಲ, ಇನ್ನು ಹೆಚ್ಚಿದೆ. ಈಗಲೂ ಮುಖ್ಯಮಂತ್ರಿ ವಿಚಾರವನ್ನು ಇತ್ಯರ್ಥಗೊಳಿಸಿಲ್ಲ. ಪ್ರಮಾಣವಚನ ಸಮಾರಂಭ ನಡೆಯಿದಿದೆ. ಆದರೆ ಸಿಎಂ ಸಮಸ್ಯೆ ಬಗೆಹರಿದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಆರ್ಥಿಕ ಸ್ಥಿತಿ ಸರಿಯಿಲ್ಲ, ಕಾಂಗ್ರೆಸ್ ಪಕ್ಷವು ಸಾರ್ವಜನಿಕರಿಗೆ ನೀಡಿದ ಭರವಸೆಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. “ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿ, ಅದು ಕುಸಿದಿದೆ. ರಾಜ್ಯದಲ್ಲಿ ಬಾಂಬ್ ಸ್ಫೋಟಗಳು ಮತ್ತು ಕೊಲೆಗಳು ನಡೆಯುತ್ತಿವೆ. ಆರ್ಥಿಕವಾಗಿ, ಅವು ದಿವಾಳಿಯ ಅಂಚಿನಲ್ಲಿವೆ. ಬೆಂಗಳೂರು ಭಾರತದ ಹಿರಿಮೆಯನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಇದನ್ನು ಟೆಕ್ ಹಬ್ ಎಂದು ಕರೆಯಲಾಗುತ್ತಿತ್ತು. ಕಾಂಗ್ರೆಸ್ ಅದನ್ನು ಟ್ಯಾಂಕರ್ ಹಬ್ ಆಗಿ ಪರಿವರ್ತಿಸಿದ್ದಾರೆ. ಟ್ಯಾಂಕರ್‌ನಲ್ಲಿಯೂ ಜನರು ನೀರಿಗಾಗಿ ಹಾತೊರೆಯುತ್ತಿದ್ದಾರೆ” ಎಂದು ಪ್ರಧಾನಿ ಕಿಡಿಕಾರಿದ್ದಾರೆ.
‘ಯುವಕರ ಸ್ಕಾಲರ್‌ಶಿಪ್ ಸಂಖ್ಯೆ ಮತ್ತು ಮೊತ್ತ ಎರಡನ್ನೂ ಕಡಿತಗೊಳಿಸಿದ್ದಾರೆ. ಜನರ ಬಳಿ ಮತ ಕೇಳಲು ಕೆಲಸ ಮಾಡುತ್ತಿಲ್ಲ. ಉಪಮುಖ್ಯಮಂತ್ರಿ ತಮ್ಮ ಸಹೋದರನಿಗೆ ಮತ ಕೇಳುತ್ತಿದ್ದಾರೆ. ಮುಖ್ಯಮಂತ್ರಿಯಾಗಲು ಆಟವಾಡುತ್ತಿದ್ದಾರೆ’ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮ್ ಸಮುದಾಯಕ್ಕೆ ಮೀಸಲಾತಿ: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ಮುಸ್ಲಿಮ್ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 1990ರ ದಶಕದಲ್ಲಿನ ಮಂಡಲ್ ಆಯೋಗವನ್ನು ಅಳವಡಿಸಬೇಕೆಂಬ ಬೇಡಿಕೆಯನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ಈ ವಿಷಯವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದಾರೆ. “ಕಾಂಗ್ರೆಸ್ ಇತಿಹಾಸವನ್ನು ಗಮನಿಸಿ. 1990 ರ ದಶಕದಲ್ಲಿ ಬೇಡಿಕೆ ಹೆಚ್ಚುತ್ತಿದೆ, ಜನಸಂಖ್ಯೆಯ ಗಮನಾರ್ಹ ವರ್ಗವು ತಮಗಾಗಿ ಏನಾದರೂ ಬೇಕು ಬಯಸಿದ್ದರು. 1990 ರ ದಶಕದ ಮೊದಲು, ಇದನ್ನು ಹತ್ತಿಕ್ಕಲು ಮತ್ತು ವಿರೋಧಿಸಲು ಕಾಂಗ್ರೆಸ್ ಪ್ರಯತ್ನಿಸಿತು. ಹಲವಾರು ಆಯೋಗಗಳು, ವರದಿಗಳು ಒಬಿಸಿಗಳ ಪರವಾಗಿ ಮಾತನಾಡಲು ಪ್ರಾರಂಭಿಸಿದವು. ಆದರೆ ಇನ್ನೂ ಕಾಂಗ್ರೆಸ್ ಈ ವಿಷಯವನ್ನು ತಿರಸ್ಕರಿಸುತ್ತಲೇ ಇತ್ತು” ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
“ಕಾಂಗ್ರೆಸ್ ಪಕ್ಷವು ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ ಮೀಸಲಾತಿಗೆ ತಂದಿದೆ. 90 ರ ದಶಕದಲ್ಲಿ, ಅವರು ಧರ್ಮಾಧಾರಿತ ಮೀಸಲಾತಿಗಳನ್ನು ನೀಡಿದರು. ಎಲ್ಲಾ ಮುಸ್ಲಿಮರನ್ನು ಒಬಿಸಿಗಳಾಗಿ ವರ್ಗೀಕರಿಸಿದರು. ಆದ್ದರಿಂದ ಅವರು, ಒಬಿಸಿ ಸಮುದಾಯದ ಬೇಡಿಕೆಗಳನ್ನು ತಿರಸ್ಕರಿಸಿದರು. ಆದರೆ ರಾಜಕೀಯಕ್ಕಾಗಿ, ಮುಸ್ಲಿಮರಿಗೆ ಮೀಸಲಾತಿ ನೀಡಿದರು. 2004 ರಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದರು. ಅವರು ಸಂವಿಧಾನದ ಮೂಲಕ ಒಬಿಸಿ ಸಮುದಾಯಕ್ಕೆ ನೀಡಿರುವ 27% ಮೀಸಲಾತಿಯನ್ನು ಉಲ್ಲಂಘಿಸಲು ಪ್ರಯತ್ನಿಸಿದರು” ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ. 2006ರಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆ ನಡೆದಿತ್ತು. ಮನಮೋಹನ್ ಸಿಂಗ್ ಹೇಳಿಕೆಗೆ ಭಾರಿ ಕೋಲಾಹಲ ಉಂಟಾಗಿತ್ತು. ಎರಡು ವರ್ಷಗಳ ಕಾಲ ಮೌನ ವಹಿಸಿದ್ದ ಅವರು, 2009ರ ಪ್ರಣಾಳಿಕೆಯಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಿ, 2011ರಲ್ಲಿ ಮತ್ತೆ ಮುಸ್ಲಿಮರಿಗೆ ಒಬಿಸಿ ಮೀಸಲಾತಿ ನೀಡಲು ಯತ್ನಿಸಿದರು. 2012 ರ ಯುಪಿ ಚುನಾವಣೆಯಲ್ಲಿಯೂ ಈ ವಿಫಲ ಪ್ರಯತ್ನವನ್ನು ಮಾಡಿದರು ಎಂದು ಮೋದಿ ಹೇಳಿದ್ದಾರೆ. ಸಂವಿಧಾನದ ಪ್ರಕಾರ ದೇಶದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ. 2012ರಲ್ಲಿ ಆಂಧ್ರ ಹೈಕೋರ್ಟ್ ಅದನ್ನು ರದ್ದುಗೊಳಿಸಿತ್ತು. ಸುಪ್ರೀಂ ಕೋರ್ಟ್‌ಗೆ ಹೋದರೂ ಪರಿಹಾರ ಸಿಕ್ಕಿಲ್ಲ. 2014ರ ಪ್ರಣಾಳಿಕೆಯಲ್ಲಿಯೂ ಧರ್ಮಾಧಾರಿತ ಮೀಸಲಾತಿಯನ್ನು ಪ್ರಸ್ತಾಪಿಸಿದ್ದರು. ಆರ್‌ಎಸ್‌ಎಸ್-ಬಿಜೆಪಿ ಸಂವಿಧಾನ ಸಮಿತಿಯ ಭಾಗವಾಗಿರಲಿಲ್ಲ, ಆದರೆ ಭಾರತದಲ್ಲಿ ಧರ್ಮದ ಹೆಸರಿನಲ್ಲಿ ಮೀಸಲಾತಿ ನೀಡಲಾಗುವುದಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.