ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ದೇಶದ್ಯಾಂತ ಪ್ರತಿಭಟನೆ

ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ದೇಶದ್ಯಾಂತ ಪ್ರತಿಭಟನೆ

ನವದೆಹಲಿ : ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಮಹಿಳಾ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಸೋಮವಾರ ದೆಹಲಿ ಸೇರಿದಂತೆ ದೇಶದ್ಯಾಂತ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸಲಾಯಿತು‌.

ದೆಹಲಿಯ ಏಮ್ಸ್‌ನ ನಿವಾಸಿ ವೈದ್ಯರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಆರು ಬೇಡಿಕೆಗಳನ್ನು ಮುಂದಿಟ್ಟರು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಪ್ರಾಂಶುಪಾಲರ ವಜಾ ಆಗಬೇಕು ಮತ್ತು ಆಸ್ಪತ್ರೆಯ ಭದ್ರತಾ ಉಸ್ತುವಾರಿ, ವೈದ್ಯರಿಗೆ ಕೇಂದ್ರ ರಕ್ಷಣಾ ಕಾಯಿದೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ ನೀಡಬೇಕು ಜೊತೆಗೆ ಸಂಸ್ಥೆಯಲ್ಲಿ ಕಟ್ಟಡ ಅಥವಾ ಗ್ರಂಥಾಲಯಕ್ಕೆ ಸಂತ್ರಸ್ಥೆಯ ಹೆಸರಿಡಬೇಕು ಎಂದು ಒತ್ತಾಯಿಸಿದರು.

ಏಮ್ಸ್ ಮಾತ್ರವಲ್ಲದೇ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಸೇರಿದಂತೆ ದೆಹಲಿಯ ಹತ್ತು ಸರ್ಕಾರಿ ಆಸ್ಪತ್ರೆಗಳ ವೈದ್ಯರು ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಮುಷ್ಕರ ನಡೆಸಿದರು. ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು, ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು, ವಿಎಂಎಂಸಿ ಮತ್ತು ಸಫ್ದರ್‌ಜಂಗ್ ಆಸ್ಪತ್ರೆ, ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ, ಜಿಟಿಬಿ, ಐಎಚ್‌ಬಿಎಎಸ್, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ರಾಷ್ಟ್ರೀಯ ಟಿಬಿ ಮತ್ತು ಉಸಿರಾಟದ ಕಾಯಿಲೆಗಳ ಆಸ್ಪತ್ರೆಯ ವೈದ್ಯರು ಮುಷ್ಕರದಲ್ಲಿ ಭಾಗವಹಿದ್ದರು.

ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮುಖ್ಯಸ್ಥ ಡಾ ಘೋಷ್ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಘೋಷ್, ಘೋರ ಅಪರಾಧದ ಬಳಿಕ “ಸಾಮಾಜಿಕ ಮಾಧ್ಯಮದಲ್ಲಿ ನನ್ನ ಮಾನನಷ್ಟವಾಗುತ್ತಿದೆ” ಬಲಿಪಶು ಯುವತಿ “ನನ್ನ ಮಗಳಂತೆ” ಪೋಷಕನಾಗಿ, ನಾನು ರಾಜೀನಾಮೆ ನೀಡುತ್ತೇನೆ, ಭವಿಷ್ಯದಲ್ಲಿ ಇದು ಯಾರಿಗೂ ಸಂಭವಿಸಬಾರದು ಎಂದು ಅವರು ಹೇಳಿದರು.

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಬಳಿ ಕಳೆದ ಮೂರು ದಿನದಿಂದ ಪ್ರತಿಭಟನೆ ಮುಂದುವರಿದಿದ್ದು, ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಆರ್‌ಜಿ ಕಾರ್ ಕಾಲೇಜು ಮತ್ತು ಆಸ್ಪತ್ರೆಯ ಹೊರಾಂಗಣ ಕೇಂದ್ರಗಳು ಮುಚ್ಚಲ್ಪಟ್ಟಿವೆ ಇದರಿಂದ ರೋಗಿಗಳು ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಮೂರು ದಿನಗಳಿಂದ ಕಿರಿಯ ವೈದ್ಯರು ತುರ್ತು ಕರ್ತವ್ಯಗಳಿಗೆ ಹಾಜರಾಗುತ್ತಿದ್ದರು, ಆದರೆ ಸೋಮವಾರ ಬೆಳಿಗ್ಗೆ, ಅವರು ಆ ಕರ್ತವ್ಯಕ್ಕೆ ಬರುವುದು ನಿಲ್ಲಿಸಿದ್ದಾರೆ.

ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ವೈದ್ಯರು ಮತ್ತು ಒಬ್ಬ ಹೌಸ್‌ಕೀಪಿಂಗ್ ಸಿಬ್ಬಂದಿಯನ್ನು ಕೋಲ್ಕತ್ತಾ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಘಟನೆ ನಡೆದ ದಿನ ಈ ನಾಲ್ವರು ರಾತ್ರಿ ಕರ್ತವ್ಯದಲ್ಲಿದ್ದರು. ಘಟನೆಯು ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Previous Post
ಹಿಂಡೆನ್‌ಬರ್ಗ್‌ ವರದಿಯಲಿಂದ ಸೆಬಿ ಸಮಗ್ರತೆಗೆ ಧಕ್ಕೆಯಾಗಿದೆ – ರಾಹುಲ್‌ಗಾಂಧಿ
Next Post
ಪೂಜಾ ಖೇಡ್ಕರ್‌ಗೆ ದೆಹಲಿ ಹೈಕೋರ್ಟ್ ತಾತ್ಕಲಿಕ ರಿಲೀಫ್

Recent News