ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಹಿನ್ನಡೆ ಸಿಬಿಐ ಎಫ್‌ಐಆರ್ ರದ್ದು ಮಾಡಲು‌ ನಿರಾಕರಿಸಿದ ಸುಪ್ರೀಂಕೋರ್ಟ್

ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಹಿನ್ನಡೆ ಸಿಬಿಐ ಎಫ್‌ಐಆರ್ ರದ್ದು ಮಾಡಲು‌ ನಿರಾಕರಿಸಿದ ಸುಪ್ರೀಂಕೋರ್ಟ್

ನವದೆಹಲಿ : ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಅದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ರದ್ದುಗೊಳಿಸುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಬೇಲಾ ಎಂ ತ್ರಿವೇದಿ ನೇತೃತ್ವದ ದ್ವಿ ಸದಸ್ಯ ಪೀಠ ಅರ್ಜಿ ವಜಾ ಮಾಡಿದೆ.

ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿರುವ ಅನುಮತಿಯನ್ನು ಈಗಾಗಲೇ ಹಿಂಪಡೆಯಲಾಗಿದೆ. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳು ನಮ್ಮ ಕಕ್ಷಿದಾರರನ್ನು ತನಿಖೆ ನಡೆಸುತ್ತಿದ್ದಾರೆ. ಇಡಿ ಈಗಾಗಲೇ ಪ್ರಕರಣವನ್ನು ರದ್ದು ಮಾಡಿದೆ. ಒಂದೇ ಕೇಸ್ ಅನ್ನು ಎರಡು ಏಜೇನ್ಸಿ ತನಿಖೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು‌.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಬೇಲಾ ಎಂ ತ್ರಿವೇದಿ, ಸರ್ಕಾರದ ಮಂಜೂರಾತಿ ಆದೇಶಕ್ಕೆ ಹೈಕೋರ್ಟ್ ತಡೆ ನೀಡುವುದು ಹೇಗೆ? ಇದು ಕೇಳರಿಯದ ಸಂಗತಿ! ಹೈಕೋರ್ಟ್ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದೆ. ಆದರೆ ನಿಮ್ಮ ಮೇಲೆ ಪಿಸಿ ಆಕ್ಟ್ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪಿಸಿ ಆಕ್ಟ್ ಅಡಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಹೀಗಾಗಿ ಸಿಬಿಐ ತನಿಖೆ ಮಾಡಬಹುದು, ನಾವು ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ, ಕ್ಷಮಿಸಿ ಎಂದು ಅರ್ಜಿ ವಜಾಗೊಳಿಸಿದರು.

ಡಿಕೆ ಶಿವಕುಮಾರ್ ವಿರುದ್ಧ 2020 ರ ಅಕ್ಟೋಬರ್ 3 ರಂದು ಎಫ್‌ಐಆರ್ ದಾಖಲಾಗಿದೆ. ಅವರ ಆಸ್ತಿ 2013 ರಿಂದ 2018 ರವರೆಗೆ ತೀವ್ರ ಹೆಚ್ಚಾಗಿದೆ ಎಂದು ಅದು ಆರೋಪಿಸಿದೆ. ಏಪ್ರಿಲ್ 2013 ರಲ್ಲಿ ₹ 33.92 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿದ್ದ ಡಿ.ಕೆ ಶಿವಕುಮಾರ್ 2018 ರ ವೇಳೆಗೆ ಅವರು ₹ 128.6 ಕೋಟಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದಾರೆ, ಏಪ್ರಿಲ್ 30, 2018ರ ವೇಳೆಗೆ ಅವರ ಒಟ್ಟು ಆಸ್ತಿ ₹ 162.53 ಕೋಟಿಗೆ ತಲುಪಿದೆ.

ಕರ್ನಾಟಕ ಹೈಕೋರ್ಟ್‌ನ ಏಕ-ನ್ಯಾಯಾಧೀಶರು ಅಕ್ಟೋಬರ್ 2023 ರಲ್ಲಿ ಸಿಬಿಐ ತನಿಖೆಯನ್ನು ರದ್ದುಗೊಳಿಸುವಂತೆ ಶಿವಕುಮಾರ್ ಅವರ ಮನವಿಯನ್ನು ವಜಾಗೊಳಿಸಿದ್ದರು. ಇದೇ ವೇಳೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಡಿ.ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಸರ್ಕಾರ ನೀಡಿದ್ದ ಅನುಮತಿಯನ್ನು ಹಿಂಪಡೆದಿತ್ತು.

ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಶ್ನಿಸಿದ್ದಾರೆ, ಸಿಬಿಐ ಕೂಡಾ ಒಂದು ಅರ್ಜಿ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಅಂತ್ಯವಾಗಿದ್ದು ಆದೇಶ ಕಾಯ್ದಿರಿಸಿದೆ. ಒಂದು ವೇಳೆ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ ಡಿ.ಕೆ ಶಿವಕುಮಾರ್ ಸಿಬಿಐ ಸಂಕಷ್ಟ ಹೆಚ್ಚಾಗಲಿದೆ.

Previous Post
ವಿಧಾನ ಮಂಡಲ ಅಧಿವೇಶನ: ಚರ್ಚೆಗೆ ಸಮರ್ಪಕ ಉತ್ತರ ನೀಡಲು ಅಧಿಕಾರಿಗಳಿಗೆ ಸಿಎಂ ಸೂಚನೆ
Next Post
ಕಾವೇರಿ ನೀರು ಬಿಡುಗಡೆ ವಿಚಾರ ರಾಜ್ಯ ಸರ್ಕಾರದ ಬೆನ್ನಲೆ ಸರ್ವಪಕ್ಷಗಳ ಸಭೆ ಕರೆದ ತ.ನಾಡು ಸರ್ಕಾರ

Recent News