ತೆಲಂಗಾಣದ ನೂತನ ರಾಜ್ಯಪಾಲರಾಗಿ ಸಿಪಿ ರಾಧಾಕೃಷ್ಣನ್ ನೇಮಕ

ತೆಲಂಗಾಣದ ನೂತನ ರಾಜ್ಯಪಾಲರಾಗಿ ಸಿಪಿ ರಾಧಾಕೃಷ್ಣನ್ ನೇಮಕ

ಹೈದರಾಬಾದ್, ಮಾ. 19: ತೆಲಂಗಾಣದ ನೂತನ ರಾಜ್ಯಪಾಲರಾಗಿ ಸಿಪಿ ರಾಧಾಕೃಷ್ಣನ್ ಅವರು ನೇಮಕಗೊಂಡಿದ್ದಾರೆ. ರಾಧಾಕೃಷ್ಣನ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ನೇಮಕ ಮಾಡಿದ್ದಾರೆ. ತಮಿಳ್ ಸಾಯಿ ಸೌಂದರರಾಜ್ ಅವರ ರಾಜೀನಾಮೆ ಪತ್ರವನ್ನು ಮುರ್ಮು ಅವರು ಅಂಗೀಕರಿಸಿದ ಬಳಿಕ ಈ ನೇಮಕ ಮಾಡಲಾಗಿದೆ. ಜಾರ್ಖಂಡ್ ರಾಜ್ಯಪಾಲ ರಾಧಾಕೃಷ್ಣನ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ತೆಲಂಗಾಣ ರಾಜ್ಯಪಾಲರಾಗಿದ್ದ ತಮಿಳ್ ಸಾಯಿ ಸೌಂದರ ರಾಜನ್ ಮುಂಬರುವ ಸಂಸತ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹಬ್ಬಿದ್ದು, ಇದೇ ಕಾರಣಕ್ಕೆ ಅವರು ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಿಳ್ಸಾಯಿ ಸೌಂದರರಾಜನ್ ಅವರು ತೂತುಕುಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಪಕ್ಷದ ನಾಯಕತ್ವ ತಮಗೆ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ ಎಂದು ತಮಿಳ್ಸಾಯಿ ಸೌಂದರರಾಜನ್ ಇತ್ತೀಚೆಗೆ ಘೋಷಿಸಿದ್ದರು. ಬಿಜೆಪಿ ಹೈಕಮಾಂಡ್ ತಮಿಳ್ಸಾಯಿ ಸೌಂದರರಾಜನ್ ಅವರಿಗೆ ಯಾವ ಸೀಟು ಹಂಚಿಕೆ ಮಾಡಲಿದೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.

ಈ ಹಿಂದೆ ಸಿಪಿ ರಾಧಾಕೃಷ್ಣನ್ ಬಿಜೆಪಿಯ ಸದಸ್ಯರಾಗಿದ್ದರು ಮತ್ತು ಕೊಯಮತ್ತೂರಿನಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ತೆಲಂಗಾಣ ರಾಜ್ಯಪಾಲ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಲು ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ರಾಧಾಕೃಷ್ಣನ್ ಬರೆದುಕೊಂಡಿದ್ದಾರೆ. 62ನೇ ವಯಸ್ಸಿನಲ್ಲಿ, ಸೌಂದರರಾಜನ್ ಅವರು ನವೆಂಬರ್ 2019ರಲ್ಲಿ ಹೊಸದಾಗಿ ರೂಪುಗೊಂಡ ತೆಲಂಗಾಣ ರಾಜ್ಯದ ಎರಡನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡರು. ನಂತರ, ಫೆಬ್ರವರಿ 2021ರಲ್ಲಿ, ಪುದುಚೇರಿಯ ಲೆಫ್ಟಿನೆಂಟ್-ಗವರ್ನರ್ ಆಗಿ ಸೇವೆ ಸಲ್ಲಿಸುವ ಹೆಚ್ಚುವರಿ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು.

Previous Post
ಬಿಜೆಪಿಯಿಂದ ಅನ್ಯಾಯ: ಎನ್‌ಡಿಎ ತೊರೆದು, ಸಂಪುಟಕ್ಕೆ ರಾಜೀನಾಮೆ ನೀಡಿದ ಪಾಸ್ವಾನ್
Next Post
ಸರ್ಕಾರಿ ಯೋಜನೆಗಳ ಪ್ರಚಾರ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಟಿಎಂಸಿ ದೂರು

Recent News