ತೇಜಸ್ವಿನಿ ಗೌಡ ಕಾಂಗ್ರೆಸ್ ಸೇರ್ಪಡೆ
ದೆಹಲಿ ಮಾರ್ಚ್ 30: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ ನೀಡಿದಾಗಲೇ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೀಗ ಅದು ನಿಜವಾಗಿದೆ. ಫೈರ್‌ಬ್ರ್ಯಾಂಡ್ ತೇಜಸ್ವಿನಿ ಗೌಡ ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೌದು.. ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಎಮ್‌ಎಲ್‌ಸಿ ತೇಜಸ್ವಿನಿ ಗೌಡ ಇಂದು ಬಿಜೆಪಿ ತೊರೆದು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಜಂಪಿಂಗ್ ಆಟ ಶುರುವಾಗಿದೆ. ಅಸಮಾಧಾನಿತರು ಅತೃಪ್ತರು ಸ್ವ ಪಕ್ಷ ತೊರೆದು ಮತ್ತೊಂದು ಪಕ್ಷಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಈ ಸಾಲಿನಲ್ಲಿ ತೇಜಸ್ವಿನಿ ಗೌಡ ಕೂಡ ಒಬ್ಬರು. ತೇಜಸ್ವಿನಿ ಅವರ ಪರಿಷತ್ ಸದಸ್ಯ ಸ್ಥಾನದ ಅವಧಿ ಜೂನ್ 24ರವರೆಗೆ ಇತ್ತು. ಆದರೆ ಅವರು ಅವಧಿಗೂ ಮುನ್ನವೇ ತಾವು ಸ್ವ ಇಚ್ಚೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದರು. ಆಗಲೇ ಅವರು ಪಕ್ಷ ತೊರೆಯುತ್ತಾರೆನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೀಗ ಅದು ನಿಜವಾಗಿದೆ. ಈ ಬಾರಿ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಇಂಗಿತ ಹೊಂದಿದ್ದರು. ಆದರೆ ಇವರಿಗೆ ಟಿಕೆಟ್ ನಿರಾಕರಿಸಿ ಬದಲಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದಾದ ಬಳಿಕ ತೇಜಸ್ವಿನಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಬಳಿಕ ಬಿಜೆಪಿಗೆ ಗುಡ್‌ಬೈ ಹೇಳಿ ಘರ್‌ವಾಪಸಿ ಆಗಿದ್ದಾರೆ. ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಜೈರಾಮ್ ರಮೇಶ್, ಪವನ್ ಖೇರಾ ಸಮ್ಮುಖದಲ್ಲಿ ಸೇರ್ಪಡೆಯಾದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತಣಾಡಿದ ಅವರು, ‘ಬಿಜೆಪಿ ಕೊಟ್ಟ ಕೆಲಸ ನಿಷ್ಠೆಯಿಂದ ನಾನು ಮಾಡಿದ್ದೇನೆ. ಬಿಜೆಪಿಗೆ ರಾಜಕೀಯ ಬರಗಾಲ ಇತ್ತು. ಆಗ ನಾನು ಬಿಜೆಪಿ ಸೇರಿದ್ದೆ. ನರೇಂದ್ರ ಮೋದಿಯವರು ಗುಜರಾತ್ ಸಿಎಂ ಆಗಿದ್ದರು, ಪ್ರಧಾನಿ ಆಗಿರಲಿಲ್ಲ. ಈಗ ಬಿಜೆಪಿ ಸಮೃದ್ಧವಾಗಿದೆ, ಬಿಜೆಪಿ ಬಿಟ್ಟು ಬಂದಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಲು ಬರಗಾಲ ಇದೆ. ಕಷ್ಟದ ಪರಿಸ್ಥಿತಿ ಇದೆ. ಡಿಕೆ ಶಿವಕುಮಾರ್ ಅವರು ಒಕ್ಕಲಿಗ ಸಮುದಾಯ ನಾಯಕ. ಬಿಜೆಪಿಯಲ್ಲಿರುವ ಒಕ್ಕಲಿಗ ಸಮುದಾಯದ ನಾಯಕರನ್ನು ತುಳಿಯಲಾಗಿದೆ. ಪ್ರತಾಪ್ ಸಿಂಹ, ಸಿಟಿ ರವಿ, ಸದಾನಂದಗೌರಡಿಗೆ ಟಿಕೆಟ್ ಕೊಟ್ಟಿಲ್ಲ. ಎಲ್ಲಾ ಮ್ಯಾಚ್ ಫಿಕ್ಸ್ ಮಾಡಿಕೊಂಡು ಪಕ್ಷ ಸಂಘಟನೆ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ನನಗೆ ಏನೇ ಜವಬ್ದಾರಿ ಕೊಟ್ಟರೂ ಮಾಡುತ್ತೇನೆ’ ಎಂದರು.
ಕಳೆದ ಇಪ್ಪತ್ತು ವರ್ಷದಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು 2004ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಕನಕಪುರ(ಈಗಿನ ಬೆಂಗಳೂರು ಗ್ರಾಮಾಂತರ) ಲೋಕಸಭಾ ಕ್ಷೇತ್ರದಲ್ಲಿ ಹೆಚ್ಡಿ ದೇವೇಗೌಡ ಅವರನ್ನೇ ಸೋಲಿಸಿದ್ದರು. ಬಳಿಕ ಇವರು ಬಿಜೆಪಿ ಸೇರಿದ್ದರು. ಆದರೀಗ ಮತ್ತೆ ತಮ್ಮ ಸ್ವಂತ ಪಕ್ಷದತ್ತ ಮುಖ ಮಾಡಿದ್ದಾರೆ. ತೇಜಸ್ವಿನಿ ಗೌಡ ರಾಜೀನಾಮೆ ನೀಡಿದ್ದರ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ಆರ್ ಅಶೋಕ್,’ ತೇಜಸ್ವಿನಿ ಗೌಡ ನಮ್ಮ ಪಕ್ಷಕ್ಕೆ ಬಂದು ಎಮ್‌ಎಲ್‌ಸಿ ಆಗಿದ್ದರು. ಅವರ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಇನ್ನೊಂದು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿತ್ತು. ಎಲ್ಲಾ ಸ್ಥಾನ ಕೊಟ್ಟರೆ ಬಿಜೆಪಿ ತುಂಬಾ ಒಳ್ಳಯ ಪಕ್ಷ. ಸ್ಥಾನಮಾನ ಕೊಡದಿದ್ದರೆ ಕೆಟ್ಟದ್ದು ಅನ್ನೋ ಮನಸ್ಥಿತಿ ಸರಿಯಲ್ಲ. ಇದಕ್ಕೆಲ್ಲ ಬಿಜೆಪಿ ಸೊಪ್ಪು ಹಾಕುವುದಿಲ್ಲ’ ಎಂದು ವಾಗ್ದಾಳಿ ಮಾಡಿದರು.