ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರು ವಜಾ

ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರು ವಜಾ

ನವದೆಹಲಿ, ಮೇ. 2: ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಎಎಪಿಯ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಅವರು ನಿಯಮ ಮೀರಿ ಹೆಚ್ಚುವರಿ ನೌಕರರನ್ನು ನೇಮಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ಕಚೇರಿ ಹೊರಡಿಸಿದ ಆದೇಶದಲ್ಲಿ, ದೆಹಲಿ ಮಹಿಳಾ ಆಯೋಗದ ಕಾಯ್ದೆಯ ಪ್ರಕಾರ, ಆಯೋಗಕ್ಕೆ 40 ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲು ಮಾತ್ರ ಅವಕಾಶವಿದೆ. ಆದರೆ, ಲೆಫ್ಟಿನೆಂಟ್ ಗವರ್ನರ್ ಅವರ ಅನುಮೋದನೆಯಿಲ್ಲದೆ 223 ಹೊಸ ಹುದ್ದೆಗಳನ್ನು ರಚಿಸಲಾಗಿದೆ. ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ಅಧಿಕಾರ ಆಯೋಗಕ್ಕೆ ಇಲ್ಲ. 2017ರ ಫೆಬ್ರವರಿಯಲ್ಲಿ ಅಂದಿನ ಲೆಫ್ಟಿನೆಂಟ್ ಗವರ್ನರ್‌ಗೆ ಸಲ್ಲಿಸಿದ ತನಿಖಾ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಹೊರಡಿಸಿರುವ ಆದೇಶದಲ್ಲಿ, ನೇಮಕಾತಿಗೂ ಮುನ್ನ ಅಗತ್ಯ ಹುದ್ದೆಗಳ ಮೌಲ್ಯಮಾಪನ ನಡೆಸಿಲ್ಲ. ಹಣಕಾಸು ಇಲಾಖೆಯ ಅನುಮೋದನೆಯಿಲ್ಲದೆ ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆ ಉಂಟುಮಾಡುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಆಯೋಗಕ್ಕೆ ತಿಳಿಸಲಾಗಿದೆ ಎಂದು ಹೇಳಲಾಗಿದೆ. ನೇಮಕಾತಿಗಳನ್ನು ನಿಗದಿತ ಕಾರ್ಯವಿಧಾನಗಳ ಪ್ರಕಾರ ಮಾಡಿಲ್ಲ. ಆಯೋಗದ ಸಿಬ್ಬಂದಿಗೆ ವೇತನ ಮತ್ತು ಭತ್ಯೆ ನಿಗದಿಪಡಿಸುವಾಗಲೂ ಕಾರ್ಯವಿಧಾನಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ನೇಮಕಾತಿಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯ ಅನುಮೋದನೆ ಪಡೆಯುವಂತೆ ಸ್ವಾತಿ ಮಲಿವಾಲ್ ಅವರಿಗೆ ಪದೇ ಪದೇ ಸಲಹೆ ನೀಡಲಾಗಿತ್ತು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಎಎಪಿ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಪಾದಿತ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧಿತರಾಗಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಎಎಪಿಯಿಂದ ರಾಜ್ಯಸಭೆ ಸದಸ್ಯೆಯಾಗಿ ನಾಮ ನಿರ್ದೇಶನಗೊಳ್ಳುವ ಮುನ್ನ ಒಂಬತ್ತು ವರ್ಷಗಳ ಕಾಲ ಸ್ವಾತಿ ಮಲಿವಾಲ್ ಅವರು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥರಾಗಿದ್ದರು. ಸದ್ಯ ಸಮಿತಿಯ ಅಧ್ಯಕ್ಷರ ಹುದ್ದೆ ಖಾಲಿ ಇದೆ. ಗವರ್ನರ್ ಕಚೇರಿಯ ಆದೇಶದಲ್ಲಿ ಉಲ್ಲೇಖಿಸಲಾದ ಆರೋಪಗಳಿಗೆ ಸಂಬಂಧಿಸಿದಂತೆ ಎಎಪಿ ಮತ್ತು ಸ್ವಾತಿ ಮಲಿವಾಲ್ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಸಿಬ್ಬಂದಿಯನ್ನು ಹುದ್ದೆಯಿಂದ ವಜಾಗೊಳಿಸುವ ಆದೇಶ ಎಎಪಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಹೊಸ ತಿಕ್ಕಾಟಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳಿವೆ. ಲೆಫ್ಟಿನೆಂಟ್ ಗವರ್ನರ್ ಕಚೇರಿಯು ತನ್ನ ಆಡಳಿತದ ಕ್ರಮಗಳನ್ನು ತಡೆಯುತ್ತಿದೆ. ಗವರ್ನರ್ ಕೇಂದ್ರದ ನೇಮಕವಾಗಿದ್ದು, ನಮಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಎಎಪಿ ಆರೋಪಿಸಿದೆ.

Previous Post
ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ದಾಖಲೆಯ ಜಿಎಸ್‌ಟಿ ಸಂಗ್ರಹ
Next Post
ಮಣಿಪುರ ಸಂಘರ್ಷಕ್ಕೆ ವರ್ಷ: ಮೈತೈ, ಕುಕಿಗಳಿಂದ ಪ್ರತ್ಯೇಕ ಕಾರ್ಯಕ್ರಮ

Recent News