ದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಮಹಾಪಂಚಾಯತ್

ದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಮಹಾಪಂಚಾಯತ್

ನವದೆಹಲಿ, ಮಾ. 14: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿ ರಾಮಲೀಲಾ ಮೈದಾನದಲ್ಲಿ ರೈತರು ಗುರುವಾರ ಮಹಾಪಂಚಾಯತ್ ನಡೆಸಿದ್ದಾರೆ. ದೆಹಲಿ ಚಲೋ ಹಮ್ಮಿಕೊಂಡಿರುವ ರೈತರನ್ನು ಪಂಜಾಬ್-ಹರಿಯಾಣದ ಖಾನೌರಿ ಮತ್ತು ಶಂಭು ಗಡಿಗಳಲ್ಲಿ ಹರಿಯಾಣದ ಬಿಜೆಪಿ ಸರ್ಕಾರದ ಪೊಲೀಸರು ತಡೆದಿದ್ದಾರೆ. ಫೆಬ್ರವರಿ 13ರಂದು ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿರುವ ರೈತರು, ಇನ್ನೂ ಕೂಡ ಗಡಿಗಳಲ್ಲೇ ಇದ್ದಾರೆ.
ಈ ನಡುವೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ‘ಕಿಸಾನ್ ಮಝ್ದೂರ್ ಮಹಾಪಂಚಾಯತ್’ ಎಂಬ ಹೆಸರಿನಲ್ಲಿ ದೆಹಲಿಯಲ್ಲಿ ಸಭೆ ಆಯೋಜಿಸಿದೆ. ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ 5,000 ಮಂದಿ ಮಾತ್ರ ಪಾಲ್ಗೊಳ್ಳಬೇಕು, ಕೋಲು, ಬಡಿಗೆಯ ಅಥವಾ ಯಾವುದೇ ಹರಿತವಾದ ಆಯುಧಗಳು, ಮತ್ತು ಟ್ರ್ಯಾಕ್ಟರ್‌ಗಳನ್ನು ತರಬಾರದು ಎಂದು ಮಹಾ ಪಂಚಾಯತ್‌ಗೆ ಅನುಮತಿ ನೀಡುವಾಗ ದೆಹಲಿ ಪೊಲೀಸರು ಸೂಚಿಸಿದ್ದಾರೆ. ಮತ್ತೊಂದೆಡೆ ರೈತರ ಮಹಾಪಂಚಾಯತ್ ಹಿನ್ನೆಲೆ ದೆಹಲಿ ಸಂಚಾರಿ ಪೊಲೀಸರು ಕೆಲವೆಡೆ ಸಂಚಾರ ಮಾರ್ಗ ಬದಲಾಯಿಸಿದ್ದಾರೆ.

ನಾವು 5000 ಜನರು ಮಾತ್ರ ಪಾಲ್ಗೊಳ್ಳುವಂತೆ ಸೂಚಿಸಿದ್ದೇವೆ. ಆದರೆ, 15 ಸಾವಿರ ಜನರು ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶದ ವಿವಿಧ ಭಾಗಗಳಿಂದ ಸುಮಾರು 30 ಸಾವಿರ ರೈತರು ಮಹಾಪಂಚಾಯತ್‌ನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಎಸ್‌ಕೆಎಂ ತಿಳಿಸಿದೆ. ಫೆಬ್ರವರಿ 22ರಂದು ಚಂಢೀಗಡದಲ್ಲಿ ಸಭೆ ನಡೆಸಿದ್ದ ಎಸ್‌ಕೆಎಂ, ಇಂದು ಮಹಾಪಂಚಾಯತ್ ನಡೆಸುವ ಬಗ್ಗೆ ಘೋಷಿಸಿತ್ತು. ಪೊಲೀಸರು ಮಾರ್ಚ್‌ 11ರಂದು ಅನುಮತಿ ನೀಡಿದ್ದರು. ಎಸ್‌ಕೆಎಂ 37 ರೈತ ಸಂಘಟನೆಗಳ ಮಹಾ ಒಕ್ಕೂಟವಾಗಿದೆ. ವರದಿಗಳ ಪ್ರಕಾರ, ಮೋದಿ ಸರ್ಕಾರದ ಕಾರ್ಪೊರೇಟ್ ಪರ, ಕೋಮುವಾದಿ, ಸರ್ವಾಧಿಕಾರಿ ನೀತಿಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು, ಕೃಷಿ, ಆಹಾರ ಭದ್ರತೆಯನ್ನು ಉಳಿಸಲು ಹೋರಾಡಲು, ಜೀವನೋಪಾಯ ಮತ್ತು ಕಾರ್ಪೊರೇಟ್ ಲೂಟಿಯಿಂದ ಜನರನ್ನು ರಕ್ಷಿಸಲು ಮಹಾಪಂಚಾಯತ್‌ನಲ್ಲಿ ರೈತರು ಸಂಕಲ್ಪ ಪತ್ರ ಮತ್ತು ನಿರ್ಣಯದ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.

Previous Post
ಲೋಕಸಭೆ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ, ಹಾಲಿ ಸಂಸದರಿಗೆ ಶಾಕ್
Next Post
ಇಂಟರ್ನೆಟ್‌ಗೆ ನಿರ್ಬಂಧ ವಿಧಿಸುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

Recent News