ದೇವದಾರಿ ಗಣಿ ಯೋಜನೆ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಸಂಚು – ಹೆಚ್‌ಡಿಕೆ

ದೇವದಾರಿ ಗಣಿ ಯೋಜನೆ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಸಂಚು – ಹೆಚ್‌ಡಿಕೆ

ನವದೆಹಲಿ: ದೇವದಾರಿ ಗಣಿ ಯೋಜನೆ ಬಗ್ಗೆ ಜನರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೆಟ್ಟ ಅಭಿಪ್ರಾಯ ಉಂಟು ಮಾಡಲು ಸಂಚು ಮಾಡಲಾಗುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು. ನವದೆಹಲಿಯಲ್ಲಿ ರಾಜ್ಯದ ಸಂಸದರ ಸಭೆಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೇಂದ್ರ ಸಚಿವರು, ರಾಜ್ಯಕ್ಕೆ ₹2,800 ಕೋಟಿಗೂ ಹೆಚ್ಚು ಆದಾಯ ತಂದುಕೊಡುವ ಹಾಗೂ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಈ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇವದಾರಿ ಗಣಿಗಾರಿಕೆಗೆ ನಾನು ಹೊಸದಾಗಿ ಒಪ್ಪಿಗೆ ನೀಡಿಲ್ಲ. ರಾಜ್ಯ ಸರ್ಕಾರವೇ ಇದಕ್ಕೆ ಅನುಮತಿ ಕೊಟ್ಟಿದೆ. ಹಣಕಾಸು ನೆರವು ಪಡೆಯುವ ವಿಚಾರದಲ್ಲಿ ಯೋಜನೆಯ ಕಡತವನ್ನು ಆರ್ಥಿಕ ಇಲಾಖೆಗೆ ಕಳಿಸಬೇಕಿತ್ತು. ಅದನ್ನು ಮಾಡಿದ್ದೇನೆ. ಕುದುರೆಮುಖ ಪ್ರದೇಶದಲ್ಲಿ ಕೆಐಒಸಿಎಲ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರೆ ಕ್ರಮ ಜರುಗಿಸಬಹುದು ಹಾಗೂ ದಂಡವನ್ನು ಹಾಕಬಹುದು. ಅದನ್ನು ಬಿಟ್ಟು ಸರಕಾರಿ ಸ್ವಾಮ್ಯದ ಕಂಪನಿಯೊಂದರ ಯೋಜನೆಗೆ ಅಡ್ಡಗಾಲು ಹಾಕಿದರೆ ಅದು ಮತ್ತಷ್ಟು ನಷ್ಟಕ್ಕೆ ತುತ್ತಾಗುತ್ತದೆ ಎಂದು ಕೇಂದ್ರ ಸಚಿವರು ಕಳವಳ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಸಂಸದರ ಸಭೆ ಕರೆಯಲಾಗಿತ್ತು. ನಾನು ಕೂಡ ಹಾಜರಾಗಿದ್ದೆ. ಕೇಂದ್ರದಿಂದ ಬಾಕಿ ಇರುವ 26 ಪ್ರಸ್ತಾವನೆಗಳನ್ನು ರಾಜ್ಯ ಸರಕಾರ ನಮಗೆ ಕೊಟ್ಟಿದೆ. ನೀರಾವರಿ, ತೆರಿಗೆ ಪಾಲು, ಅನುದಾನಗಳ ಬಗ್ಗೆ ಮುಖ್ಯಮಂತ್ರಿಗಳು ಪ್ರಸ್ತಾವನೆ ಮಾಡಿದ್ದಾರೆ. ಏಮ್ಸ್, ಐಐಟಿಗಳ ಪ್ರಸ್ತಾವನೆಯನ್ನು ಕೊಟ್ಟಿದ್ದಾರೆ. ರಾಜ್ಯ ಸರಕಾರದಲ್ಲಿರುವ ಮಾಹಿತಿ ಕೊರತೆ ಬಗ್ಗೆ ಮಾತನಾಡಿದ್ದೇವೆ. ಸರಿಯಾದ ಮಾಹಿತಿಯೊಂದಿಗೆ ಬಂದರೆ ನೆರವು ಕೊಡುತ್ತೇವೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.

15ನೇ ಹಣಕಾಸಿನ ಆಯೋಗದಲ್ಲಿ ಹಣದ ಕಡಿತದಲ್ಲಿ ಆಗಿರುವ ಬಗ್ಗೆ ಚರ್ಚೆಯಾಗಿದೆ. 16ನೇ ಹಣಕಾಸು ಆಯೋಗದಲ್ಲಿ ಸಮಸ್ಯೆ ಆಗಬಾರದು. ರಾಜ್ಯ ಸರಕಾರ ಆಯೋಗದ ಮುಂದೆ ಅಭಿಪ್ರಾಯ ಮಂಡಿಸಿ ಸರಿಪಡಿಸಬೇಕು. ಪದೇ ಪದೇ ಕೇಂದ್ರದ ವಿರುದ್ಧ ಹೇಳಿಕೆ ಕೊಡಬಾರದು ಎಂದರು ಸಚಿವರು.

ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ದಿನೇಶ್ ಗುಂಡೂರಾವ್ ಹೇಳಿಕೆ ಸರಿ ಇಲ್ಲ

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆ ತಪ್ಪು. ಕೇಂದ್ರ ಸಚಿವರು, ಅದರಲ್ಲಿಯೂ ಮಹಿಳೆಯರ ಬಗ್ಗೆ ಅಂತಹ ಪದ ಬಳಕೆ ಸರಿಯಲ್ಲ. ಇದು ಸಚಿವರ ಸಂಕುಚಿತ ಮನೋಭಾವ ತೋರಿಸುತ್ತದೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಕೇಂದ್ರದ ಬಳಿ ಅನುದಾನ ಪಡೆಯಬೇಕಾದರೆ ಅಂಕಿ ಅಂಶಗಳ ಸಮೇತ ಕರಾರುವಾಕ್ಕಾಗಿ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು. ಗೊಂದಲ ಇಲ್ಲದಂತೆ ಸರಿಯಾದ ಮಾಹಿತಿ ಸಲ್ಲಿಸಬೇಕು. ಅದನ್ನು ಹೊರತುಪಡಿಸಿ ಅಸಂದೀಯ ಪದ ಬಳಕೆ ಮಾಡಿ ಟೀಕೆ ಮಾಡಿದರೆ ಉಪಯೋಗ ಏನು? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಇವರಿಗೆ ರಾಜ್ಯದ ಅಭಿವೃದ್ದಿ ಬೇಕಿಲ್ಲ, ಕೇಂದ್ರದೊಂದಿಗೆ ಸಂಘರ್ಷ ಬೇಕು. ಅವರು ತಮ್ಮ ಕೊರತೆಯನ್ನು ಮೊದಲು ಸರಿ ಮಾಡಿಕೊಳ್ಳಬೇಕು. ಆಗ ನಾವೇ ನಿಮ್ಮನ್ನು ಕರೆದುಕೊಂಡು ಹೋಗಿ ಕೆಲಸ ಮಾಡಿಸಿ ಕೊಡುತ್ತೇವೆ. ಒಳ್ಳೆಯ ಬಾಂಧವ್ಯ ಇಟ್ಟುಕೊಂಡು ಕೇಂದ್ರ ಜತೆ ಕೆಲಸ ಮಾಡದಿದ್ದರೆ ನಾವೇನು ಮಾಡಲು ಸಾಧ್ಯ? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.

ಸಿಎಂ ಹುದ್ದೆ ವಿಷಯ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ವಿಚಾರ

ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ಅವರು ಸಿಎಂ ಹುದ್ದೆಯ ವಿಷಯದ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಯಾರನ್ನು ಸಿಎಂ ಮಾಡಬೇಕು ಎನ್ನುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅವರ ಪಕ್ಷದ 136 ಶಾಸಕರು, ಅವರ ಹೈಕಮಾಂಡ್ ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ನಾನು ಏನು ಹೇಳಲು ಸಾಧ್ಯ? ಎಂದರು

Previous Post
ಸಂಸತ್ತಿನಲ್ಲಿ ನೀಟ್ ಚರ್ಚೆ ಆಗಬೇಕು: ವಿಪಕ್ಷ ನಾಯಕ ರಾಹುಲ್ ಗಾಂಧಿ
Next Post
ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪ್ರಮುಖ ಹೆದ್ದಾರಿ ಯೋಜನೆಗಳ ಕುರಿತು ಚರ್ಚೆ

Recent News