ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳ ಸಾವು

ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳ ಸಾವು

ಭೋಪಾಲ್: ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಶಹಪುರ್ ನಗರದ ಹರ್ದುಲ್ ಬಾಬಾ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ಗೋಡೆ ಕುಸಿದ ಪರಿಣಾಮ 9 ಮಕ್ಕಳು ಸಾವನ್ನಪ್ಪಿದ್ದು, ಹಲವು ಮಕ್ಕಳು ಗಾಯಗೊಂಡಿದ್ದಾರೆ.  ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರೊಂದಿಗೆ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನೂ ನಡೆಸಿ ಕೆಲ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಗಾಯಾಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತಪಟ್ಟ ಮಕ್ಕಳು 10-15 ವರ್ಷದೊಳಗಿನವರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇನ್ನೂ ಘಟನೆ ಕುರಿತು ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ ಚಿಕಿತ್ಸಾ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಒಂದು ದಿನದ ಹಿಂದೆ ಇದೇ ರೀತಿಯ ಘಟನೆ ರಾಜ್ಯದ ರೇವಾ ಜಿಲ್ಲೆಯಲ್ಲಿ ಸಂಭವಿಸಿತ್ತು. ಮನೆಯ ಗೋಡೆ ಕುಸಿದು 5 ರಿಂದ 7ನೇ ವಯಸ್ಸಿನ ನಾಲ್ಕು ಮಕ್ಕಳು ಸಾವನ್ನಪ್ಪಿದ್ದರು. ಗೋಡೆ ಕುಸಿದ ಮನೆ ಮಾಲೀಕನನ್ನು ಬಂಧಿಸಲಾಗಿತ್ತು. ಮಧ್ಯಪ್ರದೇಶದಲ್ಲಿ ಮತ್ತೊಂದೆಡೆ ಮಳೆಯ ಆರ್ಭಟ ಜೋರಾಗಿದ್ದು, ವಿವಿಧೆಡೆ ಉಂಟಾದ ಪ್ರವಾಹ ಪರಿಸ್ಥಿತಿಗೆ ಈವರೆಗೆ 200 ಮಂದಿ ಸಾವಪ್ಪಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ 206 ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ, 2,403 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

Previous Post
‘ಚಕ್ರವ್ಯೂಹ’ಭಾಷಣದ ಮೇಲೆ ಇಡಿ ದಾಳಿ ಸಾಧ್ಯತೆ: ರಾಹುಲ್ ಗಾಂಧಿ
Next Post
ವಯನಾಡು ದುರಂತಕ್ಕೆ ಕೇರಳದಲ್ಲಿನ ಗೋ ಹತ್ಯೆ ಕಾರಣ ಬಿಜೆಪಿ ಮಾಜಿ ಸಂಸದ ಜ್ಞಾನದೇವ್ ಅಹುಜಾ ಹೇಳಿಕೆ

Recent News