ದೇಶದ 2ನೇ ಖಾಸಗಿ ಬಾಹ್ಯಾಕಾಶ ನೌಕೆ ‘ಅಗ್ನಿಬಾನ್’ ಯಶಸ್ವಿ ಉಡ್ಡಯನ

ದೇಶದ 2ನೇ ಖಾಸಗಿ ಬಾಹ್ಯಾಕಾಶ ನೌಕೆಅಗ್ನಿಬಾನ್ಯಶಸ್ವಿ ಉಡ್ಡಯನ


ನವದೆಹಲಿ:
ಚೆನ್ನೈ ಮೂಲದ ಅಗ್ನಿಕುಲ್ ಕಾಸ್ಮಾಸ್ ಎಂಬ ಖಾಸಗಿ ಬಾಹ್ಯಾಕಾಶ ಸಂಶೋಧನಾ ಸ್ಟಾರ್ಟಪ್ ಕಂಪನಿಯು ಮೂರು ಆಯಾಮಗಳ ಮುದ್ರಣಾ ತಂತ್ರಜ್ಞಾನ ಬಳಸಿ ತಯಾರಿಸಿದ ಸಿಂಗಲ್ ಪೀಸ್ ರಾಕೆಟ್ ಎಂಜಿನ್‌ ಹೊಂದಿರುವ ಸಬ್‌ ಆರ್ಬಿಟಲ್ ಟೆಸ್ಟ್ ಬಾಹ್ಯಾಕಾಶ ನೌಕೆ ‘ಅಗ್ನಿಬಾನ್’ನ ಯಶಸ್ವಿ ಉಡ್ಡಯನವನ್ನು ಗುರುವಾರ ನಡೆಸಿದೆ.ಶ್ರೀಹರಿಕೋಟಾದ ತನ್ನದೇ ಉಡ್ಡಯನ ಕೇಂದ್ರದಿಂದ ಸಂಸ್ಥೆ ಈ ಯಶಸ್ವಿ ಪ್ರಯೋಗ ನಡೆಸಿದೆ. ದೇಶದಲ್ಲಿ ಈ ಸಾಹಸ ಮಾಡಿದ ಎರಡನೇ ಸಂಸ್ಥೆ ಅಗ್ನಿಕುಲ್ ಕಾಸ್ಮಾಸ್ ಆಗಿದೆ.4 ಅಸಫಲ ಯತ್ನದ ಬಳಿಕ ಅಗ್ನಿಬಾನ್ ಸಬ್ ಆರ್ಬಿಟಲ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್(ಎಸ್‌ಒಆರ್‌ಟಿಇಡಿ) ಪರೀಕ್ಷಾ ನೌಕೆಯು ಗುರುವಾರ ಬೆಳಿಗ್ಗೆ 7.15ಕ್ಕೆ ಯಾವುದೇ ನೇರ ಪ್ರಸಾರವಿಲ್ಲದೆ ನಭಕ್ಕೆ ಚಿಮ್ಮಿತು. ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಆವರಣದಲ್ಲಿರುವ ಉಡ್ಡಯನ ಕೇಂದ್ಯದಲ್ಲಿ ನಡೆದ ಉಡ್ಡಯನದ ವೇಳೆ ಕೆಲ ಗಣ್ಯರು ಮಾತ್ರ ಉಪಸ್ಥಿತರಿದ್ದರು ಎಂದು ಸಂಸ್ಥೆ ತಿಳಿಸಿದೆ.ನಮ್ಮ ಮೊದಲ ರಾಕೆಟ್‌ ‘ಅಗ್ನಿಬಾನ್-ಎಸ್‌ಒಆರ್‌ಟಿಇಡಿ’ಯ ಯಶಸ್ವಿ ಉಡ್ಡಯನವನ್ನು ಅತ್ಯಂತ ವಿನಮ್ರವಾಗಿ ಘೋಷಿಸುತ್ತಿದ್ದೇವೆ. ನಮ್ಮದೇ ಆದ, ಭಾರತದ ಮೊದಲ ಮತ್ತು ಏಕೈಕ ಖಾಸಗಿ ಉಡ್ಡಯನ ಕೇಂದ್ರ ಶ್ರೀಹರಿಕೋಟಾದ ಎಸ್‌ಎಸ್‌ಸಿ-ಎಸ್‌ಎಚ್‌ಎಆರ್‌ನಲ್ಲಿ ಈ ಉಡ್ಡಯನ ನಡೆದಿದೆ’ ಎಂದು ಸಂಸ್ಥೆ ತಿಳಿಸಿದೆ.2025ರ ಹಣಕಾಸು ವರ್ಷದ ಅಂತ್ಯಕ್ಕೆ ಬಾಹ್ಯಾಕಾಶ ಯಾನ ಕೈಗೊಳ್ಳಲು ಅಗ್ನಿಕುಲ್ ಸಂಸ್ಥೆ ಯೋಜಿಸಿದೆ.2022ರ ನವೆಂಬರ್‌ನಲ್ಲಿ ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ಸಂಸ್ಥೆ ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್, ಭಾರತದ ಮೊದಲ ಸಬ್ ಆರ್ಬಿಟಲ್ ರಾಕೆಟ್ ವಿಕ್ರಮ್-5 ಅನ್ನು ಉಡ್ಡಯನ ಮಾಡಿತ್ತು.ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ‘ಇದೊಂದು ಗಮನಾರ್ಹ ಸಾಧನೆಯಾಗಿದ್ದು, ಇಡೀ ದೇಶ ಹೆಮ್ಮೆಪಡುತ್ತದೆ!’ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.ವಿಶ್ವದ ಮೊದಲ ಸಿಂಗಲ್ ಪೀಸ್ ತ್ರೀಡಿ ಪ್ರಿಂಟೇಡ್ ಸೆಮಿ ಕ್ರಯೋಜನಿಕ್ ಎಂಜಿನ್ ಬಲ ಹೊಂದಿರುವ ಅಗ್ನಿಬಾನ್ ರಾಕೆಟ್ ಉಡ್ಡಯನವು ಬಾಹ್ಯಾಕಾಶ ಕ್ಷೇತ್ರದ ಸಾಧನೆಯ ಹಾದಿಯಲ್ಲೇ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ನಮ್ಮ ಯುವಶಕ್ತಿಯ ಗಮನಾರ್ಹ ಜಾಣ್ಮೆಗೆ ಸಾಕ್ಷಿ. ಅಗ್ನಿಕುಲ್ ಕಾಸ್ಮಾಸ್ ತಂಡಕ್ಕೆ ಅವರ ಭವಿಷ್ಯದ ಯೋಜನೆಗಳಿಗೆ ನನ್ನ ಶುಭಾಶಯಗಳು’ಎಂದು ಮೋದಿ ತಿಳಿಸಿದ್ದಾರೆ.

Previous Post
ವಾಲ್ಮೀಕಿ ನಿಗಮದ ಹಗರಣದಲ್ಲಿ ಪೂರ್ಣ ಸರಕಾರವೇ ಭಾಗಿ: ಆರ್.ಅಶೋಕ್
Next Post
ಹೆಚ್ಚಿನ ನೀರು ಕೋರಿ ಸುಪ್ರೀಂ ಮೆಟ್ಟಿಲೇರಿದ ದೆಹಲಿ ಸರ್ಕಾರ

Recent News