ನನ್ನ ಸಿಲುಕಿಸುವುದೇ ಇಡಿಯ ಏಕೈಕ ಉದ್ದೇಶ ಎಂದ ಕೇಜ್ರಿವಾಲ್; ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದ ಇಡಿ

ನನ್ನ ಸಿಲುಕಿಸುವುದೇ ಇಡಿಯ ಏಕೈಕ ಉದ್ದೇಶ ಎಂದ ಕೇಜ್ರಿವಾಲ್; ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದ ಇಡಿ

ನವದೆಹಲಿ : ಹೊಸ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಪಟ್ಟಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಇಡಿ ಕಸ್ಟಡಿಯನ್ನು ನಾಲ್ಕು ದಿನಗಳಿಗೆ ವಿಸ್ತರಿಸಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶ ನೀಡಿದೆ. ಕೇಜ್ರಿವಾಲ್ ವಿಚಾರಣೆಗೆ ಸಹಕರಿಸುತ್ತಿಲ್ಲ, ಪ್ರಕರಣದ ನಾಲ್ಕು ಮಂದಿ ಇತರೆ ಆರೋಪಿಗಳೊಂದಿಗೆ ಕೇಜ್ರಿವಾಲ್ ಅವರ ತನಿಖೆ ನಡೆಸಲು ಸಮಯ ಕೋರಿದ ಇಡಿ ವಾದವನ್ನು ಕೋರ್ಟ್ ಪುರಷ್ಕರಿಸಿದೆ.

ಇದಕ್ಕೂ ಮುನ್ನ ಕಸ್ಟಡಿ ಅಂತ್ಯವಾದ ಹಿನ್ನಲೆ ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಯಿತು. ಕೋರ್ಟ್ ಪ್ರವೇಶ ಮಾಡುವ ವೇಳೆ “ಉದ್ದೇಶಪೂರ್ವಕವಾಗಿ ಸಿಕ್ಕಿಹಾಕಿಸುವ ಪ್ರಯತ್ನ ಮಾಡಲಾಗುತ್ತಿದೆ ಜನರು ಇದಕ್ಕೆ ಉತ್ತರಿಸಲಿದ್ದಾರೆ” ಎಂದು ಅಲ್ಲಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ವಿಚಾರಣೆ ಆರಂಭವಾಗುತ್ತಿದ್ದಂತೆ ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ಅರವಿಂದ್ ಕೇಜ್ರಿವಾಲ್, ನನ್ನನ್ನು ಸಿಕ್ಕಿ ಹಾಕಿಸುವುದು ಇಡಿಯ ಏಕೈಕ ಉದ್ದೇಶವಾಗಿದೆ ಎಂದು ಆರೋಪಿಸಿದರು. ನಾನು ರಿಮಾಂಡ್ ಅನ್ನು ವಿರೋಧಿಸುತ್ತಿಲ್ಲ ಇಡಿ ಅವರು ಎಲ್ಲಿಯವರೆಗೆ ನನ್ನನ್ನು ಕಸ್ಟಡಿಯಲ್ಲಿ ಇರಿಸಬಹುದು? ಆದರೆ, ಇಡಿ ತನಿಖೆಯ ಹೆಸರಿನಲ್ಲಿ ಸುಲಿಗೆ ದಂಧೆ ನಡೆಸುತ್ತಿರುವುದು ನಿಜವಾದ ಹಗರಣ ಎಂದು ವಾದಿಸಿದರು.

ಕೆಲವು ಆರೋಪಿಗಳು ತಮ್ಮನ್ನು ಬಂಧಿಸಿದ ನಂತರ ಭಾರತೀಯ ಜನತಾ ಪಕ್ಷಕ್ಕೆ ಎಲೆಕ್ಟ್ರೋಲ್ ಬಾಂಡ್ ಮೂಲಕ ಹಣವನ್ನು ದೇಣಿಗೆ ನೀಡಿದ್ದಾರೆ ನಂತರ ಅವರು ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಓರ್ವ ಆರೋಪಿ ಶರತ್ ಚಂದ್ರ ರೆಡ್ಡಿ ಬಿಜೆಪಿಗೆ 55 ಕೋಟಿ ದೇಣಿಗೆ ನೀಡಿದ್ದಾರೆ. ದಂಧೆ ನಡೆಯುತ್ತಿದೆ ಎಂಬುದಕ್ಕೆ ನನ್ನ ಬಳಿ ಸಾಕ್ಷ್ಯವಿದೆ. ಹಣದ ಜಾಡು ಪತ್ತೆಯಾಗಿದೆ. ಬಂಧನದ ನಂತರ ಬಿಜೆಪಿಗೆ 50 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಸಿಎಂ ಕೋರ್ಟ್ ಗಮನ ಸೆಳೆದರು.

ಪ್ರಕರಣದಲ್ಲಿ ನಾಲ್ಕು ಬಾರಿ ಹೆಸರು ಕಾಣಿಸಿಕೊಂಡಿದೆ, ಸಾಕ್ಷಿಯೊಬ್ಬರು ಅಂದಿನ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಸಮ್ಮುಖದಲ್ಲಿ ನನಗೆ ದಾಖಲೆಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಶಾಸಕರು ಪ್ರತಿದಿನ ನನ್ನ ಮನೆಗೆ ಬರುತ್ತಾರೆ. ನನ್ನನ್ನು ಆರೋಪಿಸಲು ಇಂತಹ ಹೇಳಿಕೆ ಸಾಕೇ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಏಳು ಸಾಕ್ಷಿಗಳ ಪೈಕಿ ಆರು ಸಾಕ್ಷಿಗಳು ನನ್ನ ಹೆಸರು ಉಲ್ಲೇಖಿಸಿಲ್ಲ, ಏಳನೇ ಸಾಕ್ಷಿ ನನ್ನ ಹೆಸರು ಉಲ್ಲೇಖಿಸಿದ ತಕ್ಷಣ ಬಾಕಿ ಆರು ಸಾಕ್ಷಿಗಳ ಹೇಳಿಕೆಯನ್ನು ಬದಿಗೆ ಸರಿಸಿದೆ. ಅಲ್ಲದೇ ನನ್ನ ಹೆಸರು ಉಲ್ಲೇಖಿಸಿದ ಸಾಕ್ಷಿಗೆ ಜಾಮೀನು ಮಂಜೂರಾಗಿದೆ ಎಂದು ಹೇಳಿದರು.

ಕೇಜ್ರಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಇನ್ನೂ ಕೆಲವು ವ್ಯಕ್ತಿಗಳ ಹೇಳಿಕೆಗಳೊಂದಿಗೆ ಸಂಸ್ಥೆಯು ಸಿಎಂ ಅವರನ್ನು ವಿಚಾರಣೆ ನಡೆಸಬೇಕಿದೆ. ಹೀಗಾಗಿ ಇನ್ನೂ ಏಳು ದಿನ ಹೆಚ್ಚುವರಿ ಕಸ್ಟಡಿಗೆ ನೀಡಬೇಕಾಗುತ್ತದೆ ಎಂದರು. ಅವರ ಹೇಳಿಕೆಗಳನ್ನು ದಾಖಲಿಸಲಾಗಿದೆ, ಅವರು ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡಿದರು. ನಾವು ಅವರನ್ನು ಇತರ ಕೆಲವು ಜನರೊಂದಿಗೆ ಎದುರಿಸಬೇಕಾಗಿದೆ. ಎಎಪಿ ಗೋವಾ ಅಭ್ಯರ್ಥಿಗಳ ಇನ್ನೂ ನಾಲ್ಕು ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ನಾವು ಅವರೊಂದಿಗೆ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಎಎಸ್‌ಜಿ ವಾದಿಸಿದರು.

ಕೇಜ್ರಿವಾಲ್ ತಮ್ಮ ಖಾತೆಗಳ ಪಾಸ್‌ವರ್ಡ್‌ಗಳನ್ನು ಏಜೆನ್ಸಿಯೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಿದ್ದಾರೆ ಇದರಿಂದ ನಮಗೆ ಡಿಜಿಟಲ್ ಡೇಟಾಗೆ ಪ್ರವೇಶ ಸಿಕ್ಕಿಲ್ಲ, ಅವರು ಉದ್ದೇಶಪೂರ್ವಕವಾಗಿ ಸಹಕರಿಸುತ್ತಿಲ್ಲ ಮತ್ತು ನಮಗೆ ಐಟಿಆರ್‌ಗಳನ್ನು ನೀಡುತ್ತಿಲ್ಲ‌ ಎಂದರು. ಇನ್ನು ಕೇಜ್ರಿವಾಲ್ ಆರೋಪಗಳಿಗೆ ಪ್ರತಿಕ್ರಿಯಿಸಿ ರಿಮಾಂಡ್ ಹಂತದಲ್ಲಿ ಅವು ಪ್ರಸ್ತುತವಲ್ಲ, ಮಾಹಿತಿಯೂ ಉತ್ಪಾದನೆಯ ಹಂತದಲ್ಲಿದೆ, ಈ ಎಲ್ಲಾ ವಿಷಯಗಳು ಹೇಗೆ ಸಂಬಂಧಿತವಾಗಿವೆ? ಯಾರಾದರೂ ಹೇಳಿಕೆ ನೀಡಲು ಒತ್ತಾಯಿಸಲಾಗಿದೆಯೇ ಎಂಬುದು ವಿಚಾರಣೆಯ ವಿಷಯವಾಗಿದೆ ಎಂದರು.

ಆರು ಸಾಕ್ಷಿಗಳು ಕೇಜ್ರಿವಾಲ್ ಹೆಸರು ಉಲ್ಲೇಖಿಸದಿರಲು ಕಾರಣ ಏನು ಎಂದು ಹೇಳಿದ್ದಾರೆ, ಗೋವಾ ಚುನಾವಣೆಯಲ್ಲಿ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ. ಹವಾಲಾ ಮೂಲಕ ಹಣ ಬಂದಿದೆ ಇದನ್ನು ಗೋವಾ ಪ್ರಚಾರಕ್ಕೆ ಹಣವನ್ನು ಬಳಸಲಾಗಿದೆ ಎಂದು ತೋರಿಸಲು ನಮ್ಮ ಬಳಿ ಹೇಳಿಕೆಗಳು ಮತ್ತು ದಾಖಲೆಗಳಿವೆ. ಕೇಜ್ರಿವಾಲ್ ₹ 100 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎಂಬುದನ್ನು ತೋರಿಸಲು ಇಡಿ ಬಳಿಯೂ ಸಾಕ್ಷಿಗಳಿದೆ ಎಂದು ಎಎಸ್‌ಜಿ ವಾದಿಸಿದರು. ವಾದ ಪ್ರತಿ ವಾದ ಆಲಿಸಿದ ಬಳಿಕ ನಾಲ್ಕು ದಿನಗಳ‌ ಕಸ್ಟಡಿಯನ್ನು ಕೋರ್ಟ್ ವಿಸ್ತರಿಸಿತು‌.

Previous Post
ರಾಯ್ ಬರೇಲಿ, ಅಮೇಥಿಯಿಂದ ಸ್ಪರ್ಧಿಸಲು ಗಾಂಧಿ ಕುಟುಂಬದ ನಿರಾಸಕ್ತಿ?
Next Post
ಮನೆ ಮಗನಾಗಿ ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ನಾನು ಬದ್ಧ ಪಿಲಿಭಿತ್‌ನ ಜನರಿಗೆ ಭಾವನತ್ಮಾಕ ಪತ್ರ ಬರೆದ ವರುಣ್ ಗಾಂಧಿ

Recent News