ನಮ್ಮ ಪ್ರಣಾಳಿಕೆಗೆ ದೇಶ ಕಾಯುತ್ತಿದೆ – ಮೋದಿ

ನಮ್ಮ ಪ್ರಣಾಳಿಕೆಗೆ ದೇಶ ಕಾಯುತ್ತಿದೆ – ಮೋದಿ

ನವದೆಹಲಿ : ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಅತ್ಯಂತ ಪವಿತ್ರವಾದ ದಿನ, ದೇಶದ ಹಲವು ರಾಜ್ಯಗಳು ವಿವಿಧ ರೀತಿಯಲ್ಲಿ ಹೊಸವರ್ಷವನ್ನು ಆಚರಿಸುತ್ತಿವೆ. ಇಂದು ಅಂಬೇಡ್ಕರ್‌ ಅವರ ಜಯಂತಿಯ ದಿನವೂ ಆಗಿದೆ ಎಂದು ಸ್ಮರಿಸಿದರು.

ಇಡೀ ದೇಶ ಈ ಪ್ರಣಾಳಿಕೆಗಾಗಿ ಕಾಯುತ್ತಿದೆ. ಕಳೆದ 10 ವರ್ಷದಲ್ಲಿ ನೀಡಿದ ಎಲ್ಲ ಭರವಸೆ ಗ್ಯಾರಂಟಿ ರೂಪದಲ್ಲಿ ತಳಮಟ್ಟದಿಂದ ಜಾರಿ ಮಾಡಿದೆ. ಈ ಬಾರಿ ಯುವಶಕ್ತಿ, ನಾರಿಶಕ್ತಿ, ಬಡವರು ಮತ್ತು ರೈತರಿಗೆ ನಮ್ಮ ಪ್ರಣಾಳಿಕೆ ಶಕ್ತಿ ತುಂಬಲಿದೆ. ಗೌರವಯುತ ಜೀವನ, ಗುಣಮಟ್ಟದ ಜೀವನ, ಅವಕಾಶಗಳ ಸೃಷ್ಟಿ ಮಾಡುವ ಬಗ್ಗೆ ನನ್ನ `ಸಂಕಲ್ಪ’ ಇದೆ. ಮೂಲಸೌಕರ್ಯಗಳ ಅಭಿವೃದ್ಧಿ ಮೂಲಕ ಉದ್ಯೋಗ ಹೆಚ್ಚಿಸುವ ಗುರಿ ಹೊಂದಿದೆ. ಸ್ಟಾರ್ಟ್ಅಪ್‌ಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಯುವ ಜನರಿಗೆ ಹೆಚ್ಚು ಅವಕಾಶ ಸೃಷ್ಟಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಉಚಿತ ಪಡಿತರ ಯೋಜನೆ ಮುಂದಿನ 5 ವರ್ಷಗಳ ಕಾಲ ಮುಂದುವರಿಯುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ವೃದ್ಧರು ತಮ್ಮ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುವುದು ದೊಡ್ಡ ಚಿಂತೆಯಾಗಿದೆ. ಮಧ್ಯಮ ವರ್ಗದ ಜನರಿಗೆ ಇದು ಇನ್ನೂ ಗಂಭೀರ ಚಿಂತನೆಯಾಗಿದೆ. ಹಾಗಾಗಿ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರನ್ನೂ ಆಯುಷ್ಮಾನ್‌ ಭಾರತ್‌ ಯೋಜನೆಯ ವ್ಯಾಪ್ತಿಗೆ ತರಲಾಗುವುದು. ಈ ಮೂಲಕ 5 ಲಕ್ಷ ರೂ. ರೈ.ವೆರೆಗೂ ಉಚಿತ ಚಿಕಿತ್ಸೆ ನೀಡಲಾಗುವುದು. ಅಲ್ಲದೇ ತೃತೀಯ ಲಿಂಗಿಗಳನ್ನೂ ಆಯುಷ್ಮಾನ್‌ ಭಾರತ್‌ ಯೋಜನೆ ವ್ಯಾಪ್ತಿಯಲ್ಲಿ ತರಲು ನಿರ್ಧರಿಸಿದೆ. ಇದರೊಂದಿಗೆ ಜನೌಷಧಿ ಕೇಂದ್ರದಲ್ಲಿ ಮೆಡಿಸನ್‌ಗಳಿಗೆ 80% ರಿಯಾಯಿತಿ ಸಿಗಲಿದೆ ಎಂದಿದ್ದಾರೆ.

ನಾರಿ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ತರಬೇತಿ. `ನಮೋ ಡ್ರೋನ್’ ವಿಸ್ತರಣೆ, 3 ಕೋಟಿ ಮಹಿಳೆಯರನ್ನು `ಲಕ್ ಪತಿ’ ದೀದಿ ಮಾಡುವ ಗುರಿ. ಮಹಿಳಾ ಕ್ರೀಡಾಪಟುಗಳಿಗೆ ವಿಶೇಷ ಯೋಜನೆ, ಮಹಿಳೆಯರಲ್ಲಿ ಉಂಟಾಗುವ ರೋಗಗಳ ಬಗ್ಗೆ ವಿಶೇಷ ಅಭಿಯಾನ, ಕಿಸಾನ್ ಕಾರ್ಡ್ ಯೋಜನೆ ವಿಸ್ತರಣೆ, `ಪಿಎಂ ಶ್ರೀಅನ್ನ’ ಯೋಜನೆಗೆ ಹೆಚ್ಚಿನ ಒತ್ತು ನೀಡಕಾಗುವುದು ಎಂದರು.

ದೇಶಾದ್ಯಂತ ಸಂಚರಿಸುತ್ತಿರುವ ಒಂದೇ ಭಾರತ್ ಇನ್ಮುಂದೆ ಸ್ಲೀಪರ್, ಚೇರ ಕಾರ್ ಮತ್ತು ಮೆಟ್ರೋ ಮೂರು ಆಯಾಮದಲ್ಲಿ ಸಂಚಾರ ಮಾಡಲಿದೆ. ಬುಲೆಟ್ ಟ್ರೈನ್ ಕೆಲಸ ಅಂತ್ಯಕ್ಕೆ ಬಂದಿದೆ. ದಕ್ಷಿಣ ಭಾರತಕ್ಕೆ ಬುಲೆಟ್ ಟ್ರೈನ್‌ ಸಮೀಕ್ಷೆ ಶೀಘ್ರದಲ್ಲೇ ಶುರುವಾಗಲಿದ್ದು, ಉತ್ತರ, ದಕ್ಷಿಣ ಮತ್ತು ಈಶಾನ್ಯ ಭಾಗದಲ್ಲಿ ಬುಲೆಟ್ ಟ್ರೈನ್ ಗೆ ಯೋಜನಾ ಕಾರ್ಯ ಆರಂಭಿಸಲಾಗುವುದು. ಒಂದೇ ಭಾರತ್ ಮೆಟ್ರೋ ಸಹ ಶುರುವಾಗಲಿದೆ.

ಇನ್ನೂ ಗ್ರೀನ್ ಎನರ್ಜಿಗೆ ಆದ್ಯತೆ ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿಸಲಿದೆ. ಕಳೆದ ವರ್ಷ 17 ಲಕ್ಷ ವಾಹನ ಮಾರಾಟವಾಗಿದೆ. ಪ್ರತಿ ವರ್ಷ 5 ಸಾವಿರ ಕಿಮೀ ರೈಲ್ವೇ ಹಳಿ ಸಂಪರ್ಕ ವಿಸ್ತರಣೆ ಮಾಡಲಾಗಿದೆ. ರೈಲು ಅಪಘಾತ ತಪ್ಪಿಸಲು `ಕವಚ’ ಸಿಸ್ಟಮ್ ವಿಸ್ತರಣೆ ಮಾಡಿದ್ದು, ವಿಶ್ವ ದರ್ಜೆಯ ರೈಲು ನಿಲ್ದಾಣಗಳನ್ನ ನಿರ್ಮಾಣ ಮಾಡಲಾಗಿದೆ. ನಮ್ಮ ಸರ್ಕಾರ ದೇಶಾದ್ಯಂತ 25 ಕೋಟಿ ಜನರನ್ನು ಬಡತನದಿಂದ ಹೊರ ತಂದಿದೆ. ಇಲ್ಲಿಗೆ ಕೆಲಸ ಮುಗಿದಿಲ್ಲ, ಬಡತನದಿಂದ ಹೊರ ಬಂದ ಜನರನ್ನ ಇನ್ನೂ ಮುಂದೆತರುವ ಅನಿವಾರ್ಯತೆ ಇದೆ. ಅದಕ್ಕಾಗಿ `ಗರೀಬ್ ಕಲ್ಯಾಣ್’ ಯೋಜನೆಗಳನ್ನು ಮುಂದಿನ ಐದು ವರ್ಷಕ್ಕೆ ವಿಸ್ತರಿಸಲಿದೆ.

ದೇಶಾದ್ಯಂತ 4 ಕೋಟಿ ಮನೆ ಬಡವರಿಗೆ ಕಟ್ಟಿಕೊಡಲಾಗಿದೆ. ಇನ್ನೂ 3 ಕೋಟಿ ಮನೆಗಳನ್ನು ಕಟ್ಟಿ ಕೊಡಲಾಗುವುದು. ಅಂಗವಿಕಲರಿಗೂ ವಿಶೇಷ ಮನೆ ವ್ಯವಸ್ಥೆ ಮಾಡಲಾಗುವುದು. ಕಡಿಮೆ ಬೆಲೆಯಲ್ಲಿ ಸಿಲಿಂಡರ್ ನೀಡಲಾಗಿತ್ತು. ಇನ್ಮುಂದೆ ಪೈಪ್‌ಲೈನ್ ಮೂಲಕ ಗ್ಯಾಸ್ ನೀಡುವ ಯೋಜನೆ ಜಾರಿಗೆ ತರಲಾಗುವುದು. ಮುದ್ರಾ ಯೋಜನೆಯಡಿ ಲಕ್ಷಾಂತರ ಜನರಿಗೆ ಉದ್ಯೋಗ ಸಿಕ್ಕಿದೆ. ಅಲ್ಲದೇ ಈ ಯೋಜನೆಯಡಿ 10 ಲಕ್ಷ ರೂ.ವರೆಗೆ ಪಡೆಯುತ್ತಿದ್ದ ಸಾಲದ ಪ್ರಮಾಣವನ್ನು 20 ಲಕ್ಷ ರೂ. ವರೆಗೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.

Previous Post
ಬಿಜೆಪಿ ಪ್ರಣಾಳಿಕೆ ಪ್ರಮುಖ ಅಂಶಗಳು
Next Post
ಸುಳ್ಳಿನ ಕಂತೆ ವಿಶ್ವಾಸಾರ್ಹವಲ್ಲ ಬಿಜೆಪಿ ಪ್ರಣಾಳಿಕೆಗೆ ಕಾಂಗ್ರೇಸ್ ಆಕ್ಷೇಪ

Recent News