ನಾಪತ್ತೆಯಾಗಿದ್ದ ಬಾಂಗ್ಲಾ ಸಂಸದನ ಮೃತದೇಹ ತುಂಡಾಗಿ ಪತ್ತೆ
ಕೋಲ್ಕತ್ತಾ, ಮೇ 22: ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅನಾರ್ ಭಾರತದಲ್ಲಿ ನಾಪತ್ತೆಯಾದ ಎಂಟು ದಿನಗಳ ನಂತರ ಕೋಲ್ಕತ್ತಾ ಪೊಲೀಸರು ಅವರ ತುಂಡರಿಸಿದ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಕೋಲ್ಕತ್ತಾ ಪೊಲೀಸರು ಹತ್ಯೆಯು ಪೂರ್ವ ನಿಯೋಜಿತ ಎಂದು ಹೇಳಿಕೊಂಡಿದ್ದಾರೆ. ಅನಾರ್ ಅವರ ದೇಹವನ್ನು ತುಂಡುಗಳಾಗಿ ಕತ್ತರಿಸಲಾಗಿದೆ, ಅವುಗಳಲ್ಲಿ ಕೆಲವನ್ನು ಕೋಲ್ಕತ್ತಾದ ನ್ಯೂ ಟೌನ್‌ನಲ್ಲಿರುವ ಸಂಜೀವ ಗಾರ್ಡನ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಮೃತದೇಹ ಸಿಕ್ಕ ಅಪಾರ್ಟ್‌ಮೆಂಟ್ ಅಬಕಾರಿ ಅಧಿಕಾರಿಗೆ ಸೇರಿದೆ ಎಂದು ಹೇಳಲಾಗಿದೆ.
ಬಾಂಗ್ಲಾದೇಶದ ಗೃಹ ಸಚಿವ ಅಸಾದುಝಮಾನ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಝೀಂ ಅವರ ಮೃತದೇಹವನ್ನು ಕೋಲ್ಕತ್ತಾದಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ವಿಷಯದ ಬಗ್ಗೆ ನಮಗೆ ಇನ್ನೂ ಸಂಪೂರ್ಣವಾಗಿ ಮಾಹಿತಿ ಇಲ್ಲ. ನಮ್ಮ ಇನ್ಸ್‌ಪೆಕ್ಟರ್ ಜನರಲ್ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಎಲ್ಲವನ್ನೂ ದೃಢಪಡಿಸಿದ ನಂತರ ನಾನು ಮಾದ್ಯಮಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಮೃತ ಸಂಸದರ ಆಪ್ತ ಕಾರ್ಯದರ್ಶಿ ಅಬ್ದುರ್ ರೌಫ್, ಸಂಸದರ ಸಾವಿನ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ, ಆದರೆ ಅವರ ಕುಟುಂಬವು ಭಾರತೀಯ ವೀಸಾ ಅನುಮೋದನೆಗಾಗಿ ಢಾಕಾದಲ್ಲಿ ಕಾಯುತ್ತಿದೆ. ಬಾಂಗ್ಲಾದೇಶ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅವರು ಕೊಲ್ಕತ್ತಾ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ. ಕೊಲೆಯ ಬಗ್ಗೆ ಇನ್ನೂ ನಿರ್ದಿಷ್ಟ ಮಾಹಿತಿ ಇಲ್ಲ, ಕೊಲೆಯು ಚಿನ್ನ ಕಳ್ಳಸಾಗಣೆಯ ಭಾಗಿಯಾಗಿದೆಯೇ ಅಥವಾ ಇಲ್ಲವೇ ಎಂಬುವುದನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಇನ್ಸ್‌ಪೆಕ್ಟರ್ ಜನರಲ್ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿರುವ ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನ್‌ನ ಹಿರಿಯ ಅಧಿಕಾರಿಯೊಬ್ಬರು ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತ್ತಾಕ್ಕೆ ಬಂದ ನಂತರ ಸಂಸದ ಅನಾರ್ ಮೇ 13ರಿಂದ ಕಾಣೆಯಾಗಿದ್ದಾರೆ ಎಂದು ಈ ಮೊದಲು ಹೇಳಿಕೆ ಬಿಡುಗಡೆ ಮಾಡಿದ್ದರು. ಅನ್ವರುಲ್ ಅಝೀಂ ಅನಾರ್ ಮೇ 12ರಂದು ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ತೆರಳಿದ್ದು ಬಾರಾನಗರದಲ್ಲಿರುವ ತನ್ನ ಸ್ನೇಹಿತನ ಸ್ಥಳದಲ್ಲಿ ತಂಗಿದ್ದರು. ಮೇ 13ರಂದು ಅವರು ಯಾರನ್ನೋ ಭೇಟಿಯಾಗಲು ಹೋಗಿದ್ದರು, ಆದರೆ ಹಿಂತಿರುಗಲಿಲ್ಲ. ಈ ಬಗ್ಗೆ ಅವರ ಸ್ನೇಹಿತ ಕೊಲ್ಕತ್ತಾದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹೇಳಿದ್ದರು.
ಅನಾರ್ ಸಂಪರ್ಕಕ್ಕೆ ಸಿಗದ ಬಗ್ಗೆ ಅವರ ಕುಟುಂಬವು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮಾಹಿತಿ ನೀಡಿತ್ತು, ಅನಾರ್ ಪುತ್ರಿ ಮುಮ್ತಾರಿನ್ ಫಿರ್ದೌಸ್ ಢಾಕಾ ಮೆಟ್ರೋಪಾಲಿಟನ್ ಪೊಲೀಸರಿಗೆ ನಾಪತ್ತೆ ಬಗ್ಗೆ ದೂರು ನೀಡಿದ್ದರು.