ನಾಪತ್ತೆಯಾಗಿದ್ದ ಮಹಿಳೆ 3 ದಿನಗಳ ಬಳಿಕ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆ!

ನಾಪತ್ತೆಯಾಗಿದ್ದ ಮಹಿಳೆ 3 ದಿನಗಳ ಬಳಿಕ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆ!

ಜಕಾರ್ತ: 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಹೆಬ್ಬಾವಿನ (ಪೈಥಾನ್) ಹೊಟ್ಟೆಯೊಳಗೆ ಪತ್ತೆಯಾಗಿರುವ ಆಘಾತಕಾರಿ ಘಟನೆ ಇಂಡೋನೇಷ್ಯಾದಲ್ಲಿ ವರದಿಯಾಗಿದೆ.

ಮಧ್ಯ ಇಂಡೋನೇಷ್ಯಾ ಮಕಾಸ್ಸರ್ ನಲ್ಲಿ ಈ ಘಟನೆ ವರದಿಯಾಗಿದ್ದು, ಹೆಬ್ಬಾವೊಂದು ಮಹಿಳೆಯನ್ನು ನುಂಗಿಹಾಕಿದೆ.

3 ದಿನಗಳ ಬಳಿಕ ಮಹಿಳೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ 45 ವರ್ಷದ ಫರೀದಾ ಮೃತ ಮಹಿಳೆಯಾಗಿದ್ದು, ಫರೀದಾ ಅವರ ಪತಿ ಮತ್ತು ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿಗಳು ಶುಕ್ರವಾರ ಐದು ಮೀಟರ್ (16 ಅಡಿ) ಅಳತೆಯ ರೆಟಿಕ್ಯುಲೇಟೆಡ್ ಹೆಬ್ಬಾವಿನೊಳಗೆ ಆಕೆಯ ಶವವನ್ನು ಪತ್ತೆ ಮಾಡಿದ್ದಾರೆ.

ನಾಲ್ಕು ಮಕ್ಕಳ ತಾಯಿ 45 ವರ್ಷದ ಫರೀದಾ ಗುರುವಾರ ರಾತ್ರಿ ನಾಪತ್ತೆಯಾಗಿದ್ದರು. ಈ ವೇಳೆ ಫರೀದಾ ಅವರ ಪತಿ ಗ್ರಾಮದಲ್ಲಿ ವ್ಯಾಪಕ ಶೋಧ ನಡೆಸಿದ್ದರು. ಆದರೆ ಫರೀದಾ ಪತ್ತೆಯಾಗಿರಲಿಲ್ಲ. ಬಳಿಕ ಗ್ರಾಮದ ಕಾಲುವೆಯಲ್ಲಿ ಹೆಬ್ಬಾವು ಭಾರಿ ಗಾತ್ರದ ಹೊಟ್ಟೆಯೊಂದಿಗೆ ಪತ್ತೆಯಾಗಿತ್ತು.

ಇದನ್ನು ಗಮನಿಸಿದ ಗ್ರಾಮಸ್ಥರು ಅನುಮಾನಗೊಂಡು ಫರೀದಾ ಅವರ ಪತಿ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ತಜ್ಞರೊಂದಿಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅರಣ್ಯ ಇಲಾಖೆ ಒಪ್ಪಿಗೆ ಬಳಿಕ ಹಾವಿನ ಹೊಟ್ಟೆಯನ್ನು ಬಗೆಯಲು ಮುಂದಾದರು.

ಈ ವೇಳೆ ಹಾವಿನ ಹೊಟ್ಟೆಯಲ್ಲಿ ಫರೀದಾ ಅವರ ಬಟ್ಟೆ ಪತ್ತೆಯಾಗಿದೆ. ಈ ವೇಳೆ ಫರೀದಾ ಸಾವು ಖಚಿತವಾಗಿದ್ದು, ಸಂಪೂರ್ಣ ಹೊಟ್ಟೆಯನ್ನು ಕತ್ತರಿಸಿದಾಗ ಮಹಿಳೆಯ ಶವ ಪತ್ತೆಯಾಗಿದೆ.

ಅಪರೂಪದ ಘಟನೆ

ಇಂಡೋನೇಷ್ಯಾದಲ್ಲಿ ಇಂತಹ ಘಟನೆಗಳನ್ನು ಅತ್ಯಂತ ಅಪರೂಪವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಡೋನೇಷ್ಯಾದಲ್ಲಿ ಹೆಬ್ಬಾವುಗಳು ಮನುಷ್ಯರನ್ನು ಸಂಪೂರ್ಣ ನುಂಗಿದ ಹಲವು ಘಟನೆಗಳು ವರದಿಯಾಗಿವೆ. ಕಳೆದ ವರ್ಷ, ಆಗ್ನೇಯ ಸುಲವೆಸಿಯ ಟಿನಾಂಗ್ಜಿಯಾ ಜಿಲ್ಲೆಯ ನಿವಾಸಿಗಳು ಎಂಟು ಮೀಟರ್ ಹೆಬ್ಬಾವನ್ನು ಇದೇ ಕಾರಣಕ್ಕೆ ಕೊಂದು ಹಾಕಿದ್ದರು.

ಈ ಹೆಬ್ಬಾವು ಹಳ್ಳಿಯೊಂದರಲ್ಲಿ ರೈತರೊಬ್ಬರನ್ನು ಕತ್ತು ಹಿಸುಕಿ ಕೊಂದು ತಿನ್ನುವುದು ರೈತರು ನೋಡಿ ಅದನ್ನು ಹೊಡೆದು ಕೊಂದು ಹಾಕಿದ್ದರು. 2018 ರಲ್ಲಿ, ಆಗ್ನೇಯ ಸುಲವೆಸಿಯ ಮುನಾ ಪಟ್ಟಣದಲ್ಲಿ 54 ವರ್ಷದ ಮಹಿಳೆಯನ್ನು ಏಳು ಮೀಟರ್ ಉದ್ದದ ಹೆಬ್ಬಾವು ನುಂಗಿ ಹಾಕಿತ್ತು. ಇದರ ಹಿಂದಿನ ವರ್ಷ ಇದೇ ಪಶ್ಚಿಮ ಸುಲವೆಸಿಯ ರೈತರೊಬ್ಬರನ್ನು ತಾಳೆ ಎಣ್ಣೆ ತೋಟದಲ್ಲಿ ನಾಲ್ಕು ಮೀಟರ್ ಹೆಬ್ಬಾವು ಜೀವಂತವಾಗಿ ನುಂಗಿಹಾಕಿತ್ತು.

Previous Post
4 ಇಸ್ರೇಲ್ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆ ವೇಳೆ ವೈಮಾನಿಕ ದಾಳಿ: 274 ಪ್ಯಾಲೆಸ್ತೀನಿಯರು ಸಾವು!
Next Post
ರಷ್ಯಾ ವಿರುದ್ಧ ಫ್ರಾನ್ಸ್ & ಅಮೆರಿಕ ಒಗ್ಗಟ್ಟಿನ ಮಂತ್ರ!

Recent News