ನಾಳೆಯಿಂದ ವಿಧಾನಮಂಡಲ ಅಧಿವೇಶನ

ನಾಳೆಯಿಂದ ವಿಧಾನಮಂಡಲ ಅಧಿವೇಶನ

ಬೆಂಗಳೂರು,ಜು.14- ಲೋಕಸಭೆ ಚುನಾವಣೆ ಬಳಿಕ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ನಡೆಯುವ ಮಾತಿನ ಸಮರಕ್ಕೆ ನಾಳೆಯಿಂದ ವಿಧಾನಮಂಡಲ ಅಧಿವೇಶನ ವೇದಿಕೆಯಾಗಲಿದೆ. ಲೋಕಸಭೆ ಚುನಾವಣೆ ಮತ್ತು ಅದಕ್ಕೂ ಮೊದಲು ಆಡಳಿತಾರೂಢ ಕಾಂಗ್ರೆಸ್‌‍ ಹಾಗೂ ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌‍ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿದ್ದವು.ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಒಂದರ ಮೇಲೊಂದರಂತೆ ಹಗರಣಗಳನ್ನು ಪ್ರಸ್ತಾಪಿಸಿ ವಿಪಕ್ಷಗಳು ಕಾಂಗ್ರೆಸ್‌‍ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಅದರಲ್ಲೂ ಪ್ರಮುಖವಾಗಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ಭಾರೀ ಸದ್ದು ಮಾಡಿವೆ.ಜೊತೆಗೆ ಅಭಿವೃದ್ಧಿಯಲ್ಲಿನ ಹಿನ್ನಡೆ, ಕಲುಷಿತ ನೀರಿನ ಪ್ರಕರಣಗಳು, ಹಾಲಿನ ದರ ಏರಿಕೆ, ಬರ ನಿರ್ವಹಣೆಯಲ್ಲಿನ ಲೋಪಗಳು ಮತ್ತು ಮಳೆಗಾಲದಲ್ಲಿ ಮುಂಗಾರು ಚಟುವಟಿಕೆಗಳಿಗೆ ಪೂರಕವಾದ ಸೌಲಭ್ಯಗಳ ಕೊರತೆ ಸೇರಿದಂತೆ ಹಲವಾರು ವಿಚಾರಗಳು ಪ್ರತಿಪಕ್ಷಗಳ ಬತ್ತಳಿಕೆಯಲ್ಲಿವೆ.ಇದರ ನಡುವೆ ರಾಜಕೀಯ ಪ್ರೇರಿತ ವಿವಾದಿತ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಆಡಳಿತಾರೂಢ ಕಾಂಗ್ರೆಸ್‌‍ನ ವಿರುದ್ಧ ಪ್ರತಿಪಕ್ಷಗಳು ಒಟ್ಟಾಗಿ ವಾಗ್ದಾಳಿ ನಡೆಸಲು ಸಜ್ಜುಗೊಂಡಿದ್ದರೆ, ಇತ್ತ ಈ ಹಿಂದಿನ ಸರ್ಕಾರದಲ್ಲಿ ಆಗಿರುವ ಹಗರಣಗಳು ಹಾಗೂ ಲೋಪಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಕಾಂಗ್ರೆಸ್‌‍ ಕೂಡ ತಯಾರಿ ನಡೆಸಿದೆ.ಬಹುತೇಕ ಈ ಅಧಿವೇಶನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಜುಗಲ್‌ಬಂಧಿಯೇ ಸದ್ದು ಮಾಡುವ ಸಾಧ್ಯತೆ ಇದೆ. ಡೆಂಘೀ ಪ್ರಕರಣಗಳು ತೀವ್ರವಾಗಿ ಸಾಕಷ್ಟು ಕಷ್ಟನಷ್ಟಕ್ಕೆ ಕಾರಣವಾಗಿದೆ. ಅದರೊಂದಿಗೆ ಬೇರೆ ರೀತಿಯ ಸಾಂಕ್ರಾಮಿಕ ಸಮಸ್ಯೆಗಳು, ಆರೋಗ್ಯ ಕೇಂದ್ರಗಳಲ್ಲಿನ ಸೌಲಭ್ಯ ಕೊರತೆ ಜನರನ್ನು ಬಧಿಸುತ್ತಿದೆ. ಇಂತಹ ಜನಪರವಾದ ವಿಚಾರಗಳನ್ನು ಕುರಿತು ಚರ್ಚೆಗೆ ಅವಕಾಶವಾಗಲಿದೆಯೇ ಎಂಬುದೇ ಕುತೂಹಲ ಕೆರಳಿಸಿದೆ.

Previous Post
ಎಚ್ ಡಿ ಕುಮಾರಸ್ವಾಮಿ ಅವರಿಗೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಅಭಿನಂದನ ಸಮಾರಂಭ
Next Post
ರಾಜ್ಯದ ಎಲ್ಲೆಡೆ ಡೆಂಗ್ಯೂ ಜ್ವರದ ಭೀತಿ ತೀವ್ರವಾಗಿ ಉಲ್ಬಣಗೊಂಡಿದ್ದು, ಜ್ವರಪೀಡಿತರ ಸಂಖ್ಯೆ 10 ಸಾವಿರ ಸನಿಹಕ್ಕೆ ತಲುಪುತ್ತಿದೆ

Recent News