ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ನೂರಾರು ಸಂಘಟನೆಗಳು ಬಂದ್ಗೆ ಸಂಪೂರ್ಣ ಬೆಂಬಲ ನೀಡಿದ್ದು, ನಾಳೆ ಇಡೀ ರಾಜ್ಯವೇ ಸ್ತಬ್ಧವಾಗುವ ಸಾಧ್ಯತೆ ಇದೆ. ಬಂದ್ ಯಶಸ್ವಿ ಮಾಡಲು ಕನ್ನಡಪರ ಹಾಗೂ ರೈತ ಪರ ಸಂಘಟನೆಗಳಿಂದ ಭಾರೀ ತಯಾರಿ ನಡೆದಿದೆ.ನಾಳೆ ಇಡೀ ಕರುನಾಡೇ ಲಾಕ್ ಆಗುವ ಸಾಧ್ಯತೆ ಇದೆ. ನಾಳೆ ರಸ್ತೆಗಿಳಿಯೋ ಪ್ಲಾನ್ ಮಾಡಿದ್ರೆ ಇಂದೇ ಕೈ ಬಿಡಿ. ಒಂದು ವೇಳೆ ರಸ್ತೆಗಿಳಿದ್ರೆ ಬಿಸಿಲಲ್ಲೇ ನೀವು ಲಾಕ್ ಆಗೋದು ಗ್ಯಾರೆಂಟಿ! ಕರ್ನಾಟಕ ಬಂದ್ ದಿನ ಮಹಾದಿಗ್ಬಂಧನಕ್ಕೆ ಕನ್ನಡ ಸಂಘಟನೆಗಳ ಪ್ಲಾನ್ ಮಾಡಿವೆ. ರಸ್ತೆ ರಸ್ತೆಯಲ್ಲೂ ಕಾವೇರಿ ಕಿಚ್ಚು ಕಾವೇರಲಿದೆ. ಬಂದ್ ದಿನ ಟೋಲ್ ಗೇಟ್, ರಾಷ್ಟ್ರೀಯ ಹೆದ್ದಾರಿಗಳನ್ನು ತಡೆಯಲು ಹೋರಾಟಗಾರರು ಪ್ಲಾನ್ ಮಾಡಿದ್ದಾರೆ.ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲೇ ಪ್ರತಿಭಟನೆ ನಡೆಸುವುದಕ್ಕೆ ಕನ್ನಡ ಸಂಘಟನೆಗಳ ತಯಾರಿ ನಡೆಸುತ್ತಿವೆ. ನಗರಗಳ ವ್ಯಾಪ್ತಿ ಮಾತ್ರವಲ್ಲದೆ, ತಾಲೂಕು ಕೇಂದ್ರಗಳಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲೂ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದೆ.
ರಾಜ್ಯದ ಯಾವೆಲ್ಲ ಪ್ರಮುಖ ಹೆದ್ದಾರಿ ತಡೆಯುವ ಪ್ಲಾನ್ ಇದೆ?
- ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇ.
- ಹುಣಸನಹಳ್ಳಿ – ರಾಮನಗರ.
- ಮಂಡ್ಯ – ಹಾಸನ.
- ಬಂಗಾರಪೇಟೆ – ಕೋಲಾರ.
- ಜೇವರ್ಗಿ ಶ್ರೀರಂಗಪಟ್ಟಣ.
- ಚಿಕ್ಕಮಗಳೂರು – ಚಿತ್ರದುರ್ಗ.
- ದಾವಣಗೆರೆ – ಚಿಕ್ಕಮಗಳೂರು.
- ಕೊಡಗು – ಶಿವಮೊಗ್ಗ.
- ತುಮಕೂರು – ಮೈಸೂರು.
- ಚಾಮರಾಜನಗರ – ಈರೋಡು.
- ನಂಜನಗೂಡು – ಊಟಿ ರಸ್ತೆ
- ಚಿತ್ರದುರ್ಗ – ಬೆಂಗಳೂರು ಗ್ರಾಮಾಂತರ
ಈಗಾಗಲೇ ಇಡೀ ರಾಜ್ಯಕ್ಕೆ
- ಬೆಂಗಳೂರು – ನೆಲಮಂಗಲ ಬಳಿಯ ನವಯುಗ ಟೋಲ್
- ಬೆಂಗಳೂರು – ದೇವನಹಳ್ಳಿ ಏರ್ಪೋಟ್ ಬಳಿಯ ಟೋಲ್
- ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇ ಬಳಿಯ ಕಣಮಿಣಕಿ ಟೋಲ್, ರಾಮನಗರ ಟೋಲ್, ಶ್ರೀರಂಗಪಟ್ಟಣ ಟೋಲ್
- ಮೈಸೂರು -ಊಟಿ ರಸ್ತೆ ಟೋಲ್
- ತಿ ನರಸೀಪುರ ಟೋಲ್
- ಹಾಸನ – ಬೆಂಗಳೂರು ಹೆದ್ದಾರಿ ಟೋಲ್
- ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಟೋಲ್
ಈಗಾಗಲೇ ಇಡೀ ರಾಜ್ಯಕ್ಕೆ ಕನ್ನಡಪರ ಸಂಘಟನೆಗಳು ಸಂದೇಶ ಕೊಟ್ಟಿವೆ. ಕಳೆದ ಮಂಗಳವಾರವಷ್ಟೇ ಬೆಂಗಳೂರು ಬಂದ್ ಆಚರಿಸಲಾಯಿತು. ಇದೀಗ ಅಖಂಡ ಕರ್ನಾಟಕ ಬಂದ್ ಆಚರಣೆಗೆ ಸಕಲ ತಯಾರಿ ನಡೆಯುತ್ತಿದೆ. ಬೆಂಗಳೂರು ಬಂದ್ ದಿನವೇ ಕನ್ನಡಿಗರಿಗೆ ಮತ್ತೊಂದು ಆಘಾತ ಉಂಟಾಯಿತು. ತಮಿಳುನಾಡಿಗೆ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರನ್ನು ಹರಿಸಲು ಅಂದು ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸು ಮಾಡಿತು. ಇದರಿಂದ ರೈತರ ಆಕ್ರೋಶದ ಕಟ್ಟೆ ಹೊಡೆದಿದ್ದು, ನಾಳಿನ ಬಂದ್ ಪರಿಣಾಮ ಹೆಚ್ಚಾಗಿರಲಿದೆ ಎಂದು ಊಹಿಸಲಾಗಿದೆ.ಇಂದು ಸಹ ಪ್ರಚಾರ
ನಾಳಿನ ಕರ್ನಾಟಕ ಬಂದ್ಗೆ ಇಂದು ಸಹ ಅಬ್ಬರದ ಪ್ರಚಾರ ನಡೆಯುತ್ತಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದ್ಗೆ ಬೆಂಬಲ ನೀಡುವಂತೆ ವಿವಿಧ ಸಂಘಟನೆಗಳು ಮನವಿ ಮಾಡುತ್ತಿವೆ. ನಗರ ಹಲವು ಕಡೆ ತೆರದ ವಾಹನದ ಮುಖಾಂತರ ವಾಟಳ್ ನಾಗರಾಜ್ ಮನವಿ ಮಾಡುತ್ತಿದ್ದಾರೆ. ನಿನ್ನೆ ಮಾಲ್, ಮಾರುಕಟ್ಟೆ ಸೇರಿ ಹಲವು ಕಡೆ ಹೋಗಿ ಪ್ರಚಾರ ಮಾಡಿದರು.ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ಹರಿಸಬೇಕೆಂದು ಸೆ.12ರಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಪಾಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೆ.18ರಂದು ಆದೇಶ ಹೊರಡಿಸಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್ಗೆ ಕರ್ನಾಟಕ ಮೇಲ್ಮನವಿ ಸಲ್ಲಿಸಿತ್ತು. ಸೆ.21ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ CWMA ಆದೇಶವನ್ನು ಎತ್ತಿಹಿಡಿದಿತ್ತು. ಅದರಂತೆ ರಾಜ್ಯ ಸರ್ಕಾರ ನೀರು ಬಿಡುಗಡೆ ಸಹ ಮಾಡಿತು. ಅತ್ತ ಸಂಘಟನೆಗಳು ಬಂದ್ ಸಹ ಆಚರಿಸಿದವು. ಇದರ ನಡುವೆ ಮತ್ತೆ 3000 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನದಿ ನೀರು ಸಮಿತಿ ಶಿಫಾರಸು ಮಾಡಿರುವುದರಿಂದ ನಾಳಿನ ಕರ್ನಾಟಕ ಬಂದ್ ತೀವ್ರತೆ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.