ನಿಮ್ಮದು ಸರ್ಕಾರಿ ನಕ್ಸಲಿಸಂ; ಪಿಎಂ ಮೋದಿ, ಸಿಎಂ ಶಿಂಧೆ ವಿರುದ್ಧ ಉದ್ಧವ್ ಠಾಕ್ರೆ ಆಕ್ರೋಶ

ನಿಮ್ಮದು ಸರ್ಕಾರಿ ನಕ್ಸಲಿಸಂ; ಪಿಎಂ ಮೋದಿ, ಸಿಎಂ ಶಿಂಧೆ ವಿರುದ್ಧ ಉದ್ಧವ್ ಠಾಕ್ರೆ ಆಕ್ರೋಶ

ಮುಂಬೈ, ಜೂ. 20: ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನವನ್ನು ಉಳಿಸುವುದು ಭಯೋತ್ಪಾದನೆಯಾಗಿದ್ದರೆ ‘ಹೌದು, ನಾನು ಭಯೋತ್ಪಾದಕ’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಅರ್ಬನ್ ನಕ್ಸಲಿಸಂ ಬಗ್ಗೆ ಮಾತನಾಡುತ್ತಾರೆ. ಪ್ರಜಾಪ್ರಭುತ್ವವನ್ನು ಉಳಿಸುವುದು ಭಯೋತ್ಪಾದನೆಯಾಗಿದ್ದರೆ, ನಾನು ಭಯೋತ್ಪಾದಕನೇ. ಸಂವಿಧಾನ ಮತ್ತು ದೇಶವನ್ನು ಉಳಿಸುವುದು ಭಯೋತ್ಪಾದನೆಯಾಗಿದ್ದರೆ ನಾನೊಬ್ಬ ಭಯೋತ್ಪಾದಕ ಎಂದುಕೊಳ್ಳಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ಶಿವಸೇನೆಯ 58ನೇ ಸಂಸ್ಥಾಪನಾ ದಿನದ ಅಂಗವಾಗಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬುಧವಾರ ಸಂಜೆ ಉದ್ಧವ್ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ. ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದು “ಸರ್ಕಾರಿ ನಕ್ಸಲಿಸಂ” ಎಂದು ಹೇಳಿರುವ ಉದ್ಧವ್ ಠಾಕ್ರೆ, “ಇದು ನಿಜಕ್ಕೂ ನಕ್ಸಲಿಸಂ. ಇದು ಅರ್ಬನ್ ನಕ್ಸಲಿಸಂಗಿಂತಲೂ ಅಪಾಯಕಾರಿ. ಇದು ವಿರೋಧ ಪಕ್ಷಗಳನ್ನು ಒಡೆಯಲು, ಉತ್ತಮ ಸರ್ಕಾರವನ್ನು ಉರುಳಿಸಲು ನಿಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಕ್ರಮವಾಗಿದೆ. ಇದು ನಕ್ಸಲಿಸಂ, ಇದು ಪ್ರಜಾಪ್ರಭುತ್ವವನ್ನು ಕೊಲ್ಲುತ್ತದೆ” ಎಂದು ಆರೋಪಿಸಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಶಿವಸೇನೆ (ಏಕನಾಥ್ ಶಿಂಧೆ) ಅವರು ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಫೋಟೋ ಮತ್ತು ಪಕ್ಷದ ಚಿಹ್ನೆಯಾದ ‘ಬಿಲ್ಲು ಮತ್ತು ಬಾಣ’ವನ್ನು ಬಳಸದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ಧವ್ ಠಾಕ್ರೆ ಸವಾಲು ಹಾಕಿದ್ದಾರೆ.
ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಈಗಲೇ ಪ್ರಾರಂಭಿಸುವಂತೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಭತ್ತ, ರಾಗಿ, ಜೋಳ ಸೇರಿ 14 ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಮೋದಿ ಸರ್ಕಾರ ನಿರ್ಧಾರ
“ಪ್ರಜಾಪ್ರಭುತ್ವ”ವನ್ನು ಉಳಿಸಿದ್ದಕ್ಕಾಗಿ ಇಂಡಿಯಾ ಬ್ಲಾಕ್ ಮತ್ತು ಮಹಾ ವಿಕಾಸ್ ಅಘಾಡಿ (MVA) ಅನ್ನು ಬೆಂಬಲಿಸಿದ ಸ್ವತಂತ್ರ ಪತ್ರಕರ್ತರು ಮತ್ತು ಯೂಟ್ಯೂಬರ್ ಧ್ರುವ ರಥೀ ಅವರಿಗೆ ಉದ್ಧವ್ ಠಾಕ್ರೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ 48 ಸ್ಥಾನಗಳ ಪೈಕಿ ಕಾಂಗ್ರೆಸ್ 13 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಬಿಜೆಪಿ 9 ಸ್ಥಾನಗಳನ್ನು ಪಡೆದುಕೊಂಡಿದೆ. ಶಿವಸೇನೆ (ಯುಬಿಟಿ) 9 ಸ್ಥಾನಗಳನ್ನು ಗೆದ್ದರೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎಸ್‌ಪಿ) 8 ಸ್ಥಾನಗಳನ್ನು ಗೆದ್ದಿದೆ. ಮತ್ತೊಂದೆಡೆ, ಶಿವಸೇನೆ 7 ಸ್ಥಾನಗಳನ್ನು ಪಡೆದುಕೊಂಡರೆ, ಎನ್‌ಸಿಪಿ 1 ಸ್ಥಾನವನ್ನು ಪಡೆದುಕೊಂಡಿದೆ.

Previous Post
ಸ್ಪೀಕರ್ ಆಯ್ಕೆ ಕಸರತ್ತು, ಮೋದಿ ನಿರ್ಧಾರಕ್ಕೆ ಎನ್‌ಡಿಎ ನಾಯಕರ ಬೆಂಬಲ?
Next Post
NEET ವಿವಾದ: ಸಮಿತಿ ರಚನೆ

Recent News