ನೀಟ್-ಪಿಜಿ ಪರೀಕ್ಷಾ ದಿನಾಂಕ ನಿಗದಿ
ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ ವಿವಾದದ ಕಾರಣ ಮುಂದೂಡಲ್ಪಟ್ಟಿದ್ದ ನೀಟ್-ಪಿಜಿ ಪರೀಕ್ಷೆಗೆ ಕೊನೆಗೂ ದಿನಾಂಕ ನಿಗದಿಪಡಿಸಲಾಗಿದೆ. ಮುಂದಿನ ತಿಂಗಳು ಆಗಸ್ಟ್ 11 ರಂದು ಪರೀಕ್ಷೆ ನಡೆಯಲಿದೆ. ಎರಡು ಹಂತದಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಈ ಮೊದಲು ಜೂ.23 ರಂದು ಪರೀಕ್ಷೆ ನಡೆಯಬೇಕಿತ್ತು. ಅಕ್ರಮದ ಮುನ್ಸೂಚನೆ ಸಿಕ್ಕ ಹಿನ್ನೆಲೆ ಮುಂದೂಡಲಾಗಿತ್ತು.
ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ (NBE) ಶುಕ್ರವಾರ ಹೊಸ ದಿನಾಂಕವನ್ನು ಪ್ರಕಟಿಸಿದೆ. NBE ಕಳೆದ ಏಳು ವರ್ಷಗಳಿಂದ NEET-PG ಅನ್ನು ನಡೆಸುತ್ತಿದೆ. ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು, ಸರ್ಕಾರದ ಸೈಬರ್ ಅಪರಾಧ ವಿರೋಧಿ ಸಂಸ್ಥೆಯನ್ನು ಭೇಟಿ ಮಾಡಿದ ಕೆಲವು ದಿನಗಳ ನಂತರ ಹೊಸ ದಿನಾಂಕದ ಘೋಷಣೆ ಬಂದಿದೆ.
ನೀಟ್-ಪಿಜಿ ಪ್ರಕ್ರಿಯೆಯ ದೃಢತೆಯ ಸಂಪೂರ್ಣ ಮೌಲ್ಯಮಾಪನವನ್ನು ಕೈಗೊಳ್ಳುವುದಾಗಿ ಸರ್ಕಾರ ಹೇಳಿತ್ತು. ಪರೀಕ್ಷೆಗೆ ಎರಡು ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಎಂದು ಸಭೆ ನಡೆಸಿ ಸೂಚಿಸಲಾಗಿತ್ತು. ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ಎಂಬಿಬಿಎಸ್ ಪದವಿ ಹೊಂದಿರುವವರ ಅರ್ಹತೆಯನ್ನು ನಿರ್ಣಯಿಸಲು NEET-PG ಅನ್ನು ನಡೆಸಲಾಗುತ್ತದೆ.