ನೀಟ್-ಯುಜಿ ಮರು ಪರೀಕ್ಷೆಗೆ 750 ಮಂದಿ ಗೈರು: ಎನ್‌ಟಿಎ
ನವದೆಹಲಿ, ಜೂ. 24: ಛತ್ತೀಸ್‌ಗಢ, ಗುಜರಾತ್, ಹರಿಯಾಣ, ಮೇಘಾಲಯ ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಏಳು ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ನಡೆಸಲಾದ 2024ರ ನೀಟ್-ಯುಜಿ ಮರು ಪರೀಕ್ಷೆಗೆ ಅರ್ಧದಷ್ಟು ಅರ್ಹ ಅಭ್ಯರ್ಥಿಗಳು ಗೈರಾಗಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ. ಒಟ್ಟು 1,563 ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಿಗದಿಯಾಗಿತ್ತು. ಆದರೆ, 813 (52%) ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದ 750 (48%) ಮಂದಿ ಗೈರು ಹಾಜರಾಗಿದ್ದಾರೆ.
ಜೂನ್ 4ರಂದು ಪ್ರಕಟಗೊಂಡ 2024ರ ನೀಟ್-ಯುಜಿ ಫಲಿತಾಂಶದಲ್ಲಿ 1, 563 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲಾಗಿದೆ. ಕೃಪಾಂಕ ಮಾತ್ರವಲ್ಲದೆ, ನೀಟ್ ಪರೀಕ್ಷೆಯ ಸಂಬಂಧ ಕೇಳಿ ಬಂದಿರುವ ಇತರ ಅಕ್ರಮ ಆರೋಪಗಳ ಬಗ್ಗೆಯೂ ತನಿಖೆ ನಡೆಸಿ ಕಠಿಣ ಕ್ರಮಕ್ಕೆ ಕೇಂದ್ರ ಶಿಕ್ಷಣ ಸಚಿವಾಲಯ ಮುಂದಾಗಿದ್ದು, ಅಕ್ರಮದ ಆರೋಪದ ಮೇಲೆ ಮೇ 5ರಂದು ಪರೀಕ್ಷೆಗೆ ಹಾಜರಾಗಿದ್ದ ಬಿಹಾರದ 17 ಅಭ್ಯರ್ಥಿಗಳನ್ನು ಡಿಬಾರ್ ಮಾಡಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿದೆ ಎಂಬುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದೆ ಎಂದು ಶಿಕ್ಷಣ ಸಚಿವಾಲಯದ ಉನ್ನತ ಮೂಲಗಳು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮೇ 5 ರಂದು ನಡೆದ ನೀಟ್-ಯುಜಿ ಪರೀಕ್ಷೆಯ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ ದಿನದಂದು ಮರುಪರೀಕ್ಷೆ ನಡೆಸಲಾಗಿತ್ತು. ಗುಜರಾತ್ ಮತ್ತು ಬಿಹಾರದಲ್ಲಿ ಪೊಲೀಸರು ದಾಖಲಿಸಿರುವ ಪ್ರಕರಣಗಳ ತನಿಖೆಯನ್ನು ಸಿಬಿಐ ವಹಿಸಿಕೊಳ್ಳಲಿದೆ. ಎನ್‌ಟಿಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಗುಣಮಟ್ಟ ವೃದ್ದಿಸಲು ಶಿಕ್ಷಣ ಸಚಿವಾಲಯ ಇಸ್ರೋ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ 7 ಸದಸ್ಯರ ಸಮಿತಿ ರಚಿಸಿದೆ