ನೀಟ್‌: ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯ ತನಿಖೆಗೆ ಕಪಿಲ್‌ ಸಿಬಲ್‌ ಆಗ್ರಹ

ನೀಟ್‌: ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯ ತನಿಖೆಗೆ ಕಪಿಲ್‌ ಸಿಬಲ್‌ ಆಗ್ರಹ

ವದೆಹಲಿ: ‘ನೀಟ್‌-ಯುಜಿ’ ಅಕ್ರಮ ಆರೋಪಗಳ ಕುರಿತು ಸುಪ್ರೀಂ ಕೋರ್ಟ್‌ ನೇಮಿಸಿದ ಅಧಿಕಾರಿಗಳಿಂದ ತನಿಖೆ ಆಗಬೇಕು ಹಾಗೂ ಈ ಪರೀಕ್ಷೆಯನ್ನು ಭವಿಷ್ಯದಲ್ಲಿ ಹೇಗೆ ನಡೆಸಬೇಕು ಎಂಬುದರ ಕುರಿತು ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳ ಜತೆಗೆ ಸಮಗ್ರವಾಗಿ ಸಮಾಲೋಚನೆ ನಡೆಸಬೇಕು ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಆಗ್ರಹಿಸಿದರು.

ಯಾವುದೇ ಪರೀಕ್ಷಾ ವ್ಯವಸ್ಥೆ ಭ್ರಷ್ಟವಾಗಿದ್ದರೆ, ಪ್ರಧಾನಿ ಮೌನವಾಗಿರುವುದು ಸರಿಯಲ್ಲ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತರಾಟೆಗೆ ತೆಗೆದುಕೊಂಡರು.

ಈ ಹಿಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾಜಿ ಸಚಿವರೂ ಆಗಿರುವ ಸಿಬಲ್‌ ಅವರು, ಮುಂದಿನ ಸಂಸತ್‌ ಅಧಿವೇಶನದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಬೇಕು ಎಂದು ಕರೆ ನೀಡಿದರು. ಆದರೆ ಇದನ್ನು ಚರ್ಚೆಗೆ ತೆಗೆದುಕೊಳ್ಳುವುದರ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅವರು, ಈ ಕುರಿತ ವಿಷಯವು ನ್ಯಾಯಾಲಯದಲ್ಲಿ ಇರುವುದನ್ನು ಸರ್ಕಾರ ಉಲ್ಲೇಖಿಸಿ ಚರ್ಚೆಗೆ ಅನುಮತಿ ನೀಡದಿರಬಹುದು ಎಂದೂ ಭವಿಷ್ಯ ನುಡಿದರು.

ನೀಟ್‌ ಕುರಿತ ಭ್ರಷ್ಟಾಚಾರದ ಸುದ್ದಿಗಳು ಮಾಧ್ಯಮಗಳ ಮೂಲಕ ಬಯಲಾಗುತ್ತಿವೆ. ಗುಜರಾತಿನಲ್ಲಿ ನಡೆದ ಕೆಲ ಘಟನೆಗಳು ದಿಗ್ಭ್ರಮೆ ಮೂಡಿಸಿದ್ದು, ಅದು ರಾಷ್ಟ್ರೀಯ ಕಾಳಜಿಯ ವಿಷಯ ಎಂಬುದನ್ನು ಮನದಟ್ಟು ಮಾಡಿದೆ. ಈ ಕೆಲವು ಗಂಭೀರ ಪ್ರಶ್ನೆಗಳಿಗೆ ಎನ್‌ಟಿಎ ಉತ್ತರಿಸಬೇಕಿದೆ ಎಂದು ಅವರು ಹೇಳಿದರು.

ಯುಪಿಎಗೂ ಇದಕ್ಕೂ ಸಂಬಂಧವಿಲ್ಲ:

ಇನ್ನೂ ಆಶ್ಚರ್ಯದ ಸಂಗತಿಯೆಂದರೆ, ಈಗಿನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಾಗ, ಅದರ ಕೆಲ ಅಂಧ ಭಕ್ತರು ಯುಪಿಎ ಸರ್ಕಾರದ ಅವಧಿಯನ್ನು ದೂಷಿಸುತ್ತಾರೆ. ವಿಷಯವೇ ಗೊತ್ತಿಲ್ಲದೇ ಹೀಗೆಲ್ಲ ಹೇಳುವುದು ಅತ್ಯಂತ ದುರದೃಷ್ಟಕರ. ನೀಟ್‌ ಕುರಿತ ಕಾನೂನನ್ನು ಪರಿಚಯಿಸಿರುವುದು ಮೋದಿ ನೇತೃತ್ವದ ಸರ್ಕಾರವೇ ಹೊರತು ಯುಪಿಎ ಅಲ್ಲ. ಹೀಗಾಗಿ ಅದಕ್ಕೂ ಯುಪಿಎಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಪ್ರತಿಪಾದಿಸಿದರು.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪಗಳನ್ನು ತಿರಸ್ಕರಿಸಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸಿಬಲ್‌, ‘ಸಚಿವರು, ಗುಜರಾತಿನಲ್ಲಿ ಹೇಗೆಲ್ಲ ನಡೆದಿದೆ ಎಂಬುದನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿದುಕೊಳ್ಳಲಿ’ ಎಂದರು. ಇದೇ ರೀತಿ ದೇಶದ ವಿವಿಧೆಡೆ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದೂ ಅವರು ಆರೋಪಿಸಿದರು.

ಅತ್ಯಂತ ಸ್ಪರ್ಧಾತ್ಮಕವಾಗಿರುವ ‘ನೀಟ್‌’ನಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡು ಬಂದಲ್ಲಿ ಕೂಡಲೇ ಸಮಗ್ರ ತನಿಖೆ ನಡೆಸಬೇಕು. ಸಿಬಿಐ ತನಿಖೆಯು ಆಡಳಿತವನ್ನು ರಕ್ಷಿಸುತ್ತದೆ. ಆದ್ದರಿಂದ ಸ್ವತಂತ್ರ ಸಂಸ್ಥೆ ಅಥವಾ ಸುಪ್ರೀಂ ಕೋರ್ಟ್‌ ಆಯ್ಕೆ ಮಾಡಿದ ಸ್ವತಂತ್ರ ಅಧಿಕಾರಿಗಳ ಮೂಲಕ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದರು.

ಸೌರಭ್‌ ಭಾರದ್ವಾಜ್‌, ದೆಹಲಿಯ ಆರೋಗ್ಯ ಸಚಿವನೀಟ್‌-ಯುಜಿಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಮತ್ತು ಮರು ಪರೀಕ್ಷೆಗೆ ಒತ್ತಾಯಿಸಿ ದೇಶದಾದ್ಯಂತ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳಿಗೆ ಸಾರ್ವಜನಿಕರು ಬೆಂಬಲ ನೀಡಬೇಕುಎನ್‌ಟಿಎ ವಿಶ್ವಾಸಾರ್ಹತೆ ಕುರಿತು ಗಂಭೀರ ಪ್ರಶ್ನೆಗಳಿವೆ: ಕಾಂಗ್ರೆಸ್‌

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ವಿಶ್ವಾಸಾರ್ಹತೆ ಮತ್ತು ಅದು ‘ನೀಟ್‌’ ಅನ್ನು ರೂಪಿಸಿ ನಿರ್ವಹಿಸಿದ ವಿಧಾನದ ಬಗ್ಗೆ ಗಂಭೀರ ಪ್ರಶ್ನೆಗಳು ಕಾಡುತ್ತಿವೆ ಎಂದು ಕಾಂಗ್ರೆಸ್‌ ಭಾನುವಾರ ಆರೋಪಿಸಿದೆ. ಸಂಸತ್ತಿನ ಹೊಸ ಸ್ಥಾಯಿ ಸಮಿತಿಗಳು ರಚನೆಯಾದಾಗ ಅದು ‘ನೀಟ್‌’ ಎನ್‌ಟಿಎ ಮತ್ತು ಎನ್‌ಸಿಇಆರ್‌ಟಿ ಕುರಿತು ಆಳವಾದ ಪರಿಶೀಲನೆ ನಡೆಸಲಿವೆ ಎಂಬ ವಿಶ್ವಾಸ ಇದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ. ‘ನಾನು 2014ರಿಂದ 2019ರ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ಸದಸ್ಯನಾಗಿದ್ದೆ. ಆಗ ನೀಟ್‌ಗೆ ವ್ಯಾಪಕವಾಗಿ ದೊರೆತ ಬೆಂಬಲವನ್ನೂ ಸ್ಮರಿಸುತ್ತೇನೆ. ಆದರೆ ನೀಟ್‌ ಪರೀಕ್ಷೆಯು ಸಿಬಿಎಸ್‌ಇ ಪಠ್ಯಕ್ರಮದ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲಕರವಾಗಿದ್ದು ಇತರ ಪಠ್ಯಕ್ರಮಗಳ ಶಾಲಾ ವಿದ್ಯಾರ್ಥಿಗಳಿಗೆ ಅನಾನುಕೂಲವನ್ನು ಉಂಟು ಮಾಡುತ್ತದೆ ಎಂದು ತಮಿಳುನಾಡಿನ ಸದಸ್ಯರು ಕಳವಳ ವ್ಯಕ್ತಪಡಿಸಿದ್ದರು’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಸಿಬಿಎಸ್‌ಇ ಈ ಕುರಿತ ವಿಚಾರವನ್ನು ಸರಿಯಾಗಿ ವಿಶ್ಲೇಷಣೆಗೆ ಒಳಪಡಿಸಬೇಕಿದೆ. ನೀಟ್‌ನಲ್ಲಿ ತಾರತಮ್ಯ ಆಗಿದೆಯೇ? ಬಡ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆಯೇ?’ ಎಂದು ಪ್ರಶ್ನಿಸಿರುವ ಅವರು ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳು ನೀಟ್‌ ಮೇಲೆ ಕೆಲ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿವೆ ಎಂದಿದ್ದಾರೆ. ದಶಕದಿಂದ ಎನ್‌ಸಿಇಆರ್‌ಟಿ ತನ್ನ ವೃತ್ತಿಪರತೆಯನ್ನು ಕಳೆದುಕೊಂಡಿದೆ ಎಂದೂ ಅವರು ಆರೋಪಿಸಿದ್ದಾರೆ.

‘ನೀಟ್‌’ ಸಾಮಾಜಿಕ ನ್ಯಾಯಕ್ಕೆ ವಿರುದ್ಧ: ಸ್ಟಾಲಿನ್‌

ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ‘ನೀಟ್‌’ ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ. ಅಲ್ಲದೆ ಅದು ಸಾಮಾಜಿಕ ನ್ಯಾಯ ಮತ್ತು ಬಡತನದ ವಿರುದ್ಧವೂ ಇದೆ. ಹೀಗಾಗಿ ಕೇಂದ್ರ ಸರ್ಕಾರವು ನೀಟ್‌ ಅನ್ನು ಸಮರ್ಥಿಸುವುದನ್ನು ಮೊದಲು ನಿಲ್ಲಿಸಬೇಕು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಆಗ್ರಹಿಸಿದ್ದಾರೆ. ‘ನೀಟ್‌ ಸುತ್ತ ನಡೆಯುತ್ತಿರುವ ವಿವಾದಗಳನ್ನು ಗಮನಿಸಿದರೇ ಅದು ಮೂಲಭೂತವಾಗಿ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ. ಸಹಸ್ರಾರು ವರ್ಷಗಳಿಂದ ಶಿಕ್ಷಣವನ್ನು ನಿರಾಕರಿಸಿದ ಸಮಾಜದ ಪ್ರಗತಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕಾಗಿದೆ. ಆದರೆ ನೀಟ್‌ ಅದಕ್ಕೆ ವಿರುದ್ಧವಾಗಿದ್ದು ಅಂತಹ ವಿದ್ಯಾರ್ಥಿಗಳ ಅವಕಾಶಗಳಿಗೆ ಅಡ್ಡಿಯಾಗಿದೆ’ ಎಂದು ಅವರು ಭಾನುವಾರ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Previous Post
ಜಮ್ಮು ಮತ್ತು ಕಾಶ್ಮೀರ: ಭಯೋತ್ಪಾದನೆ ನಿಗ್ರಹಕ್ಕೆ ಅಮಿತ್ ಶಾ ಸೂಚನೆ
Next Post
NDA ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು: ಮಲ್ಲಿಕಾರ್ಜುನ ಖರ್ಗೆ

Recent News