ನೀತಿ ಆಯೋಗದ ಸಭೆಯಲ್ಲಿ ಮಾತನಾಡಲು ಬಿಟ್ಟಿಲ್ಲ: ಮಮತಾ ಬ್ಯಾನರ್ಜಿ

ನೀತಿ ಆಯೋಗದ ಸಭೆಯಲ್ಲಿ ಮಾತನಾಡಲು ಬಿಟ್ಟಿಲ್ಲ: ಮಮತಾ ಬ್ಯಾನರ್ಜಿ

ನವದೆಹಲಿ, ಜು. 27: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ನೀತಿ ಆಯೋಗದ ಸಭೆಯಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅರ್ಧದಲ್ಲಿ ಹೊರ ಬಂದಿದ್ದಾರೆ. “ನನಗೆ ಮಾತನಾಡಲು ಅವಕಾಶ ನೀಡಿಲ್ಲ” ಎಂದು ಅವರು ಆರೋಪಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರಿಗೆ 20 ನಿಮಿಷ ಮಾತನಾಡಲು ಅವಕಾಶ ಕೊಟ್ಟಿದ್ದರು. ಅಸ್ಸಾಂ, ಗೋವಾ, ಛತ್ತೀಸ್ ಗಢ ಸಿಎಂಗಳು 10-12 ನಿಮಿಷ ಮಾತನಾಡಿದರು. ಆದರೆ, ನಾನು ಮಾತನಾಡುವಾಗ ಐದು ನಿಮಿಷಕ್ಕೆ ನಿಲ್ಲಿಸಿದರು. ಇದು ಅನ್ಯಾಯವಾಗಿದೆ. ವಿರೋಧ ಪಕ್ಷದಿಂದ, ನಾನು ಮಾತ್ರ ಸಭೆಯನ್ನು ಪ್ರತಿನಿಧಿಸಿದ್ದೆ. ಬಜೆಟ್‌ನಲ್ಲಿ ಪಕ್ಷಪಾತ, ತಾರತಮ್ಯ ಎಸಗಿದ್ದರೂ, ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬ ಕಾರಣಕ್ಕೆ ಹೆಚ್ಚಿನ ಆಸಕ್ತಿಯಿಂದ ನಾನು ಸಭೆಗೆ ತೆರಳಿದ್ದೆ ಎಂದು ಮಮತಾ ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ. ಬೇರೆ ರಾಜ್ಯಗಳ ಬಗ್ಗೆ ಏಕೆ ತಾರತಮ್ಯ ಮಾಡುತ್ತಿದ್ದೀರಿ ಎಂದು ಕೇಳಿದೆ. ನೀತಿ ಆಯೋಗಕ್ಕೆ ಯಾವುದೇ ಹಣಕಾಸಿನ ಅಧಿಕಾರವಿಲ್ಲ, ಅದು ಹೇಗೆ ಕೆಲಸ ಮಾಡುತ್ತದೆ? ಅದಕ್ಕೆ ಹಣಕಾಸಿನ ಅಧಿಕಾರ ನೀಡಿ ಅಥವಾ ಯೋಜನಾ ಆಯೋಗವನ್ನು ಮರಳಿ ತನ್ನಿ ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದರು. ಕೇಂದ್ರ ಬಜೆಟ್‌ನಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಇಂದಿನ ನೀತಿ ಆಯೋಗದ ಸಭೆಯನ್ನು ಕರ್ನಾಟಕ ಸಹಿತ ಏಳು ರಾಜ್ಯಗಳು ಬಹಿಷ್ಕರಿಸಿವೆ. ಕರ್ನಾಟಕದ ಮಖ್ಯಮಂತ್ರಿ ಸಿದ್ದರಾಮಯ್ಯ, ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಸುಖು, ತೆಲಂಗಾಣದ ಎ. ರೇವಂತ್ ರೆಡ್ಡಿ, ತಮಿಳುನಾಡಿನ ಎಂ.ಕೆ ಸ್ಟಾಲಿನ್, ಕೇರಳದ ಪಿಣರಾಯಿ ವಿಜಯನ್ ಮತ್ತು ಪಂಜಾಬ್‌ನ ಮುಖ್ಯಮಂತ್ರಿ ಭಗವಂತ್ ಮಾನ್ ಸಭೆಗೆ ಹಾಜರಾಗಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನದಲ್ಲಿರುವ ಕಾರಣ ಅವರು ಸಭೆಗೆ ಹಾಜರಾಗುವುದು ಅಸಾಧ್ಯವಾಗಿದೆ. ಆದರೆ, ದೆಹಲಿ ಸರ್ಕಾರ ಕೂಡ ಸಭೆಯನ್ನು ಬಹಿಷ್ಕರಿಸಿದೆ.

Previous Post
ಅಗ್ನಿವೀರ್ ಯೋಜನೆ ರದ್ದು ಮಾಡುವೆವು: ಅಖಿಲೇಶ್
Next Post
ಜೈಲಿನಿಂದ ಬಿಡುಗಡೆಯಾದ ಗ್ಯಾಂಗ್​​ಸ್ಟರ್​​ಗೆ ಸ್ವಾಗತಕೋರಿ ರ‍್ಯಾಲಿ

Recent News