ನೂತನ ಚುನಾವಣಾ ಆಯುಕ್ತರನ್ನು ನೇಮಿಸದಂತೆ ಕೇಂದ್ರ ಸರ್ಕಾರವನ್ನು ನಿರ್ಬಂಧಿಸಿ: ಸುಪ್ರೀಂಗೆ ಕಾಂಗ್ರೆಸ್‌ ಅರ್ಜಿ

ನೂತನ ಚುನಾವಣಾ ಆಯುಕ್ತರನ್ನು ನೇಮಿಸದಂತೆ ಕೇಂದ್ರ ಸರ್ಕಾರವನ್ನು ನಿರ್ಬಂಧಿಸಿ: ಸುಪ್ರೀಂಗೆ ಕಾಂಗ್ರೆಸ್‌ ಅರ್ಜಿ

ನವದೆಹಲಿ: ನೂತನ ಚುನಾವಣಾ ಆಯುಕ್ತರನ್ನು 2023ರ ಕಾನೂನಿನ ಪ್ರಕಾರ ನೇಮಕ ಮಾಡದಂತೆ ಕೇಂದ್ರ ಸರ್ಕಾರವನ್ನು ನಿರ್ಬಂಧಿಸುವಂತೆ ಕೋರಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ಮತ್ತು ಅನುಪ್ ಚಂದ್ರ ಪಾಂಡೆ ಅವರ ನಿವೃತ್ತಿಯ ನಂತರ ಎರಡು ಚುನಾವಣಾ ಆಯುಕ್ತರ ಹುದ್ದೆಗಳು ಖಾಲಿಯಾಗಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚುನಾವಣಾ ಆಯುಕ್ತರ ನೇಮಕಕ್ಕೆ ಮುಂದಾಗುತ್ತಿದ್ದಂತೆ ಸುಪ್ರೀಂನಲ್ಲಿ ಕಾಂಗ್ರೆಸ್‌ ನಾಯಕಿ ಜಯಾ ಠಾಕೂರ್‌ ಅರ್ಜಿ ಸಲ್ಲಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಸಿಗ್ ಮತ್ತು ವಕೀಲ ವರುಣ್ ಠಾಕೂರ್ ಅವರು ತುರ್ತು ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಇಮೇಲ್‌ ಮಾಡಿ ಎಂದು ಸೂಚಿಸಿತು. ಪ್ರಧಾನಿ ಮೋದಿ ನೇತೃತ್ವದ ಸಮಿತಿ ಮಾರ್ಚ್‌ 15 ರಂದು ಚುನಾವಣಾ ಆಯೋಗದ ಆಯುಕ್ತರ ನೇಮಕ ಸಂಬಂಧ ಸಭೆ ನಡೆಸಲಿದೆ.

ಕಳೆದ ಡಿಸೆಂಬರ್‌ನಲ್ಲಿ ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಕಾನೂನನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಇದರ ಅನ್ವಯ ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಮೊದಲು ಶೋಧ ಸಮಿತಿಯನ್ನು ರಚಿಸಲಾಗುತ್ತದೆ. ಕೇಂದ್ರ ಕಾನೂನು ಸಚಿವ, ಕೇಂದ್ರ ಸರ್ಕಾರದ ಕಾರ್ಯದರ್ಶಿ ರ‍್ಯಾಂಕ್‌ನ ಇಬ್ಬರು ಅಧಿಕಾರಿಗಳು ಈ ಸಮಿತಿಯ ಸದ್ಯಸರಾಗಿರುತ್ತಾರೆ. ಇವರು ಐವರು ಹೆಸರುಗಳನ್ನು ಸೂಚಿಸಬೇಕು. ನಂತರ ಈ ಪಟ್ಟಿಯ ಆಯ್ಕೆ ಸಮಿತಿ ಮುಂದೆ ಹೋಗುತ್ತದೆ.

ಈ ಸಮಿತಿಯಲ್ಲಿ ಪ್ರಧಾನಿ, ವಿರೋಧ ಪಕ್ಷದ ನಾಯಕ (ಅಧಿಕೃತ ವಿರೋಧ ಪಕ್ಷ ಇಲ್ಲದೇ ಇದ್ದರೆ, ಲೋಕಸಭೆಯ ಅತ್ಯಂತ ದೊಡ್ಡ ಪ್ರತಿ ಪಕ್ಷದ ನಾಯಕ) ಹಾಗೂ ಪ್ರಧಾನಿ ನೇಮಿಸಿದ ಸಂಪುಟ ದರ್ಜೆಯ ಸಚಿವ ಸದಸ್ಯರಾಗಿರುತ್ತಾರೆ.
ಈ ಐವರ ಬಗ್ಗೆ ಆಯ್ಕೆ ಸಮಿತಿ ಚರ್ಚಿಸಿ ನೇಮಕ ಮಾಡಬೇಕು. ಶೋಧ ಸಮಿತಿ ಸೂಚಿಸಿದ ಹೆಸರುಗಳನ್ನೇ ಆಯ್ಕೆ ಸಮಿತಿಯು ಗಣನೆಗೆ ತೆಗೆದುಕೊಳ್ಳಬೇಕಿಲ್ಲ. ಆ ಪಟ್ಟಿಯಲ್ಲಿ ಇಲ್ಲದೇ ಇದ್ದವರನ್ನೂ ನೇಮಕ ಮಾಡಬಹುದು

Previous Post
ಜಿ.ಎಂ ಸಿದ್ದೇಶ್ವರ್ ಗೆ ಟಿಕೆಟ್ ಕೊಡಬೇಡಿ – ದೆಹಲಿಯಲ್ಲಿ ಬಂಡಾಯದ ಬಾವುಟ ಹಾರಿಸಿದ ರೆಬಲ್ ನಾಯಕರು
Next Post
ಜನರು ರಾಮನ ಆದರ್ಶ ಪಾಲಿಸಿದರೆ ಭಾರತ ರಾಮರಾಜ್ಯವಾಗಲಿದೆ – ಪೇಜಾವರ್ ಶ್ರೀ

Recent News