ಬೆಂಗಳೂರು,ಆ.28- ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ರಸ್ಟಿಯಾಗಿರುವ ಸಂಸ್ಥೆಗೆ ದೇವನಹಳ್ಳಿ ಬಳಿ ಜಮೀನು ಮಂಜೂರು ಮಾಡಿರುವ ಪ್ರಕರಣದಲ್ಲಿ ರಾಜಕೀಯ ಪ್ರಭಾವಗಳಿದ್ದರೆ ಅದನ್ನು ರಾಜ್ಯಪಾಲರು ಪರಿಶೀಲನೆ ನಡೆಸಲಿ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸರ್ಕಾರಗಳಿದ್ದರೂ ಆರೋಪ ಬರುವುದು ಸಹಜ. ಬಿಜೆಪಿ ಸರ್ಕಾರಗಳ ಮೇಲೂ ಆರೋಪ ಬಂದಿವೆ, ಕೇಂದ್ರ ಸರ್ಕಾರದ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿವೆ. ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬಕ್ಕೆ ಸೇರಿದ ಟ್ರಸ್ಟ್ನ ಸಂಸ್ಥೆಗೆ ಜಮೀನು ನೀಡಿರುವ ಬಗ್ಗೆ ಚರ್ಚೆಗಳಾಗುತ್ತಿವೆ.ಆರೋಪಗಳು ನಿರಾಧಾರ ಎಂದು ಹೇಳಿದರು. ಆರೋಪಗಳು ಕೇಳಿಬರುವುದು ಸಾಮಾನ್ಯ. ಅದು ಸುಳ್ಳು ಎಂದು ಸಾಭೀತುಪಡಿಸುವುದು ನಮ ಜವಾಬ್ದಾರಿ.ನಾವು ಅದನ್ನು ಯಶಸ್ವಿಯಾಗಿ ಮಾಡುತ್ತೇವೆ. ರಾಜ್ಯಪಾಲರಿಗೆ ಈ ಕುರಿತು ದೂರು ನೀಡಿರುವುದನ್ನು ಪರಿಶೀಲನೆ ಮಾಡಲಿ, ಪ್ರಭಾವ ಬಳಕೆಯಾಗಿದ್ದರೆ ಅದನ್ನು ತನಿಖೆ ಮಾಡಲು ಯಾರ ಅಭ್ಯಂತರವೂ ಇಲ್ಲ ಎಂದರು.ಉದ್ಯಮ ಆರಂಭಿಸುತ್ತೇವೆ ಎಂದು ಯಾರೇ ಅರ್ಜಿ ಸಲ್ಲಿಸಿದರೂ ಅವರಿಗೆ ಜಮೀನು ಮಂಜೂರು ಮಾಡುವುದು ಸಾಮಾನ್ಯ ಪ್ರಕ್ರಿಯೆ. ಅದೇ ರೀತಿ ಶ್ರೀ ಸಿದ್ದಾರ್ಥ ಟ್ರಸ್ಟ್ಗೂ ಜಮೀನು ನೀಡಲಾಗಿದೆ. ಅದಕ್ಕೆ ಪ್ರತಿಯಾಗಿ ಮಾರ್ಗಸೂಚಿ ದರವನ್ನು ಪಡೆಯಲಾಗುವುದು ಎಂದು ಹೇಳಿದರು.
ನಾಯಕತ್ವ ಬದಲಾವಣೆ :-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದಲ್ಲಿ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಣಯದ ವಿಚಾರಣೆ ನಾಳೆ ಹೈಕೋರ್ಟ್ನಲ್ಲಿ ನಡೆಯಲಿದ್ದು, ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದರೆ ನಾಯಕತ್ವ ಬದಲಾವಣೆಯಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸದ್ಯಕ್ಕೆ ಆ ರೀತಿಯ ಚರ್ಚೆಗಳಿಲ್ಲ. ಮೊದಲು ನ್ಯಾಯಾಲಯದ ತೀರ್ಪು ಬರಲಿ ಎಂದು ಹೇಳಿದರು.ಇತ್ತೀಚೆಗೆ ತಾವು ದೆಹಲಿಗೆ ತೆರಳಿದಾಗ ಹೈಕಮಾಂಡ್ ನಾಯಕರು ತಮೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ರಾಹುಲ್ಗಾಂಧಿ ಕೂಡ ಸಮಾಲೋಚನೆ ನಡೆಸಿದ್ದಾರೆ. ಅವರು ಏನು ಹೇಳಬೇಕೋ, ಅದನ್ನು ಹೇಳಿದ್ದಾರೆ. ಅದನ್ನೆಲ್ಲಾ ಬಹಿರಂಗವಾಗಿ ತಿಳಿಸಲು ಸಾಧ್ಯವಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ ಈವರೆಗೂ ವಹಿಸಿದ ಎಲ್ಲಾ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಹಾಗೆಂದ ಮಾತ್ರಕ್ಕೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅಭಪ್ರಾಯ ತಿಳಿಸಲು ಬಯಸುವುದಿಲ್ಲ ಎಂದು ಹೇಳಿದರು.ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ಹಂತಹಂತವಾದ ಹೋರಾಟಗಳನ್ನು ನಡೆಸಲಿದೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಇದೇ 31 ರಂದು ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಜೊತೆಯಾಗಿ ರಾಜಭವನ ಚಲೋ ನಡೆಸಲಿದ್ದೇವೆ. ಅನಂತರ ರಾಷ್ಟ್ರಪತಿಯವರನ್ನೂ ಭೇಟಿ ಮಾಡಲಾಗುವುದು ಎಂದು ಹೇಳಿದರು. ಬಿಜೆಪಿಯವರು ರಾಷ್ಟ್ರಮಟ್ಟದಲ್ಲಿ ಈ ಕುರಿತು ಹೋರಾಟ ರೂಪಿಸಿದರೆ ಕಾಂಗ್ರೆಸ್ ಕೂಡ ಈ ರೀತಿ ಯೋಚಿಸಲಿದೆ. ನಮ ಪಕ್ಷ ಏಕಾಂಗಿಯಾಗಿ ಹೋರಾಟ ನಡೆಸಬೇಕೇ ಅಥವಾ ಇಂಡಿಯಾ ಮೈತ್ರಿಕೂಟದ ಜೊತೆಗೆ ಪ್ರತಿಭಟಿಸಬೇಕೆ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದರು.11 ಮಸೂದೆಗಳಿಗೆ ಸಹಮತ ವ್ಯಕ್ತಪಡಿಸದೆ ರಾಜ್ಯಪಾಲರು ವಾಪಸ್ ಕಳುಹಿಸಿರುವುದನ್ನು ಪುನರ್ ಪರಿಶೀಲಿಸಲಾಗುತ್ತದೆ. ಅಗತ್ಯ ಸ್ಪಷ್ಟನೆಗಳನ್ನು ನೀಡಿ ಮತ್ತೊಮೆ ರಾಜ್ಯಪಾಲರಿಗೆ ಕಳುಹಿಸಲಾಗುವುದು. ಆಗಲೂ ಒಪ್ಪದೇ ಇದ್ದರೆ ರಾಷ್ಟ್ರಪತಿ ಅಂಗಳಕ್ಕೆ ಕೊಂಡೊಯ್ಯುವುದಾಗಿ ತಿಳಿಸಿದರು.