ಪತಂಜಲಿ ಆಯುರ್ವೇದ ಸಂಸ್ಥೆಗೆ ಸುಪ್ರೀಂಕೋರ್ಟ್ ತರಾಟೆ

ಪತಂಜಲಿ ಆಯುರ್ವೇದ ಸಂಸ್ಥೆಗೆ ಸುಪ್ರೀಂಕೋರ್ಟ್ ತರಾಟೆ

ನವದೆಹಲಿ : ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿಚಾರಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ ಸಂಸ್ಥೆಯನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ರೋಗಗಳು ಅಥವಾ ಇತರ ವೈದ್ಯಕೀಯ ಪರಿಸ್ಥಿತಿಗಳಿಗೆ ಸಂಬಂಧಿಸಿದ ಯಾವುದೇ ಉತ್ಪನ್ನದ ಕುರಿತು ಜಾಹೀರಾತು ಮಾಡದಂತೆ ಕಂಪನಿಗೆ ನಿರ್ಬಂಧ ವಿಧಿಸಿದೆ.‌ ಪತಂಜಲಿ ಆಯುರ್ವೇದದ ತಪ್ಪುದಾರಿಗೆಳೆಯುವ ಜಾಹೀರಾತುಗಳ ಪ್ರಸಾರದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ ಅರ್ಜಿಯ ಬಳಿಕ ಕೋರ್ಟ್ ಈ ತೀರ್ಪು ನೀಡಿದೆ.

ಇಷ್ಟು ಮಾತ್ರವಲ್ಲದೇ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಹರಡುವಲ್ಲಿ ತೊಡಗಿರುವ ಪತಂಜಲಿ ಆಯುರ್ವೇದ ಸಂಸ್ಥೆ ಮತ್ತು ಅದರ ಮಾಲೀಕ ಆಚಾರ್ಯ ಬಾಲಕೃಷ್ಣನ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಜಾರಿಗೊಳಿಸಿದೆ. ನೋಟಿಸ್‌ಗೆ ಉತ್ತರಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ.

ನವೆಂಬರ್ 2023 ರಲ್ಲಿ ಪತಂಜಲಿಗೆ ತನ್ನ ಉತ್ಪನ್ನಗಳು ಕೆಲವು ಕಾಯಿಲೆಗಳನ್ನು “ಗುಣಪಡಿಸಬಹುದು” ಎಂದು ಸುಳ್ಳು ಹೇಳಿಕೆ ನೀಡಿದರೆ 1 ಕೋಟಿ ರೂಪಾಯಿ ದಂಡ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿತ್ತು, ಅದಾಗ್ಯೂ ಜಾಹೀರಾತು ಪ್ರಸಾರ ಮಾಡಿದ ಹಿನ್ನೆಲೆ ವಿಚಾರಣೆಯ ಸಂದರ್ಭದಲ್ಲಿ, ನ್ಯಾ. ಹಿಮಾ ಕೊಹ್ಲಿ ಮತ್ತು ಎ.ಅಮಾನುಲ್ಲಾ ಪೀಢ ಪತಂಜಲಿ ಸಂಸ್ಥೆಯನ್ನು ಟೀಕಿಸಿದರು.

ನಮ್ಮ ಎಚ್ಚರಿಕೆಯ ಹೊರತಾಗಿಯೂ ನಿಮ್ಮ ಉತ್ಪನ್ನಗಳು ರಾಸಾಯನಿಕ ಆಧಾರಿತ ಔಷಧಿಗಳಿಗಿಂತ ಉತ್ತಮವೆಂದು ನೀವು ಹೇಳುತ್ತಿದ್ದೀರಿ, ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಇಬ್ಬರು ವ್ಯಕ್ತಿಗಳಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣನ್ ಅವರಿಗೆ ನ್ಯಾಯಾಂಗ ನಿಂದನೆಗಾಗಿ ನೋಟಿಸ್ ನೀಡಲು ಪೀಠವು ನಿರ್ಧರಿಸಿದೆ. ಈ ವ್ಯಕ್ತಿಗಳು ಉತ್ತರವನ್ನು ಸಲ್ಲಿಸಬೇಕು ಮತ್ತು ಅವರು ನ್ಯಾಯಾಲಯದ ಆದೇಶಗಳನ್ನು ಹೇಗೆ ನಿರ್ಲಕ್ಷಿಸಿದ್ದಾರೆ ಎಂಬುದನ್ನು ವಿವರಿಸಬೇಕು ಎಂದು ನ್ಯಾಯಮೂರ್ತಿ ಅಮಾನುಲ್ಲಾ ಹೇಳಿದರು.

ಪತಂಜಲಿ ಆಯುರ್ವೇದ್ ಕಾನೂನು ಉಲ್ಲಂಘಿಸಿ, ಮಧುಮೇಹ, ಅಸ್ತಮಾ ಸೇರಿದಂತೆ ವಿವಿಧ ಕಾಯಿಲೆಗಳನ್ನು ಗುಣಪಡಿಸುವುದಾಗಿ ಹೇಳಿಕೊಂಡು ಜಾಹೀರಾತು ಪ್ರಕಟಿಸಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿಕೊಂಡಿದೆ. ಇದು ಜನರ ದಾರಿ ತಪ್ಪಿಸುವ ತಂತ್ರವಾಗಿದ್ದು ಇದಕ್ಕೆ ಕೋರ್ಟ್ ಕಳೆದ ಬಾರಿಯೇ ನಿರ್ಬಂಧ ಹೇರಿದೆ. ಅದಾಗ್ಯೂ ಸಂಸ್ಥೆಯೂ ಜಾಹೀರಾತು ನೀಡುವುದು ಮುಂದುವರಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿಲಾಗಿತ್ತು.

Previous Post
ತೇಜಸ್ವಿ ಯಾದವ್ ಬೆಂಗಾವಲು ಪಡೆಯ ವಾಹನ ಅಪಘಾತ, ಚಾಲಕ ದುರ್ಮರಣ
Next Post
ಸೀಟು ಹಂಚಿಕೆ ಬೆನ್ನಲೆ ದೆಹಲಿಯಲ್ಲಿ ಅಭ್ಯರ್ಥಿಗಳ ಹೆಸರು ಘೋಷಿಸಿದ ಆಪ್ ಗೆಲುವಿನ ಮಾನದಂಡ ಹಾಲಿ ಶಾಸಕರಿಗೆ ಮಣೆ

Recent News