ಪದಕ ವಿಜೇತೆ ಮಾದರಿಯಲ್ಲೇ ವಿನೇಶ್‌ ಫೋಗಟ್‌‌ಗೆ ಸ್ವಾಗತ

ಪದಕ ವಿಜೇತೆ ಮಾದರಿಯಲ್ಲೇ ವಿನೇಶ್‌ ಫೋಗಟ್‌‌ಗೆ ಸ್ವಾಗತ

ಚಂಡೀಗಢ: ಪ್ಯಾರಿಸ್‌ ಒಲಿಂಪಿಕ್ಸ್‌ ಫೈನಲ್‌ ಪಂದ್ಯಕ್ಕೂ ಮುನ್ನವೇ ಅನರ್ಹಗೊಂಡು ಕುಸ್ತಿಗೆ ವಿದಾಯ ಹೇಳಿದ ವಿನೇಶ್‌ ಫೋಗಟ್‌ ಅವರಿಗೆ ಹರಿಯಾಣ ಸರ್ಕಾರ 4 ಕೋಟಿ ರೂ. ಬಹುಮಾನ ಘೋಷಿಸಿದೆ. ಇದರೊಂದಿಗೆ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಮಾದರಿಯಲ್ಲೇ ಸ್ವಾಗತ ಕೋರಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ಕುರಿತು ಎಕ್ಸ್‌ ಖಾತೆಯಲ್ಲಿ ಹರಿಯಾಣ ಸಿಎಂ ನಯಾಬ್‌ ಸಿಂಗ್‌ ಸೈನಿ ಮಾಹಿತಿ ಹಂಚಿಕೊಂಡಿದ್ದಾರೆ. ಒಲಿಂಪಿಕ್ಸ್‌ ಫ್ರೀಸ್ಟೈಲ್‌ ಕುಸ್ತಿ ವಿಭಾಗದಲ್ಲಿ ಫೈನಲ್‌ ತಲುಪಿ ಇತಿಹಾಸ ನಿರ್ಮಿಸಿದ ವಿನೇಶ್‌ ಫೋಗಟ್‌ ಅವರನ್ನು ತವರಿನಲ್ಲಿ ಬೆಳ್ಳಿ ಪದಕ ವಿಜೇತರಾಗಿ ಗೌರವಿಸಲಾಗುವುದು ಎಂದು ಅವರು ಬರೆದುಕೊಂಡಿದ್ದಾರೆ.

ಹರಿಯಾಣದ ಧೈರ್ಯಶಾಲಿ ಮಗಳು ವಿನೇಶ್ ಫೋಗಟ್ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್‌ಗೆ ತಲುಪಿದ್ದರು. ಆದ್ರೆ ಕಾರಣಾಂತರದಿಂದ ಫೈನಲ್ ಪಂದ್ಯದಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ಅವರು ನಮಗೆಲ್ಲ ಚಾಂಪಿಯನ್ ಆಗಿದ್ದಾರೆ. ಹಾಗಾಗಿ ಪದಕ ವಿಜೇತರಂತೆಯೇ ವಿನೇಶ್‌ರನ್ನ ಗೌರವಿಸುವ ನಿರ್ಧಾರವನ್ನ ನಮ್ಮ ಸರ್ಕಾರ ತೆಗೆದುಕೊಂಡಿದೆ. ಬೆಳ್ಳಿ ಪದಕ ವಿಜೇತರಿಗೆ ಸಮಾನವಾಗಿ ಗೌರವಿಸುತ್ತದೆ, ಜೊತೆಗೆ ಬೆಳ್ಳಿ ಪದಕ ವಿಜೇತರಿಗೆ ಸರ್ಕಾರ ನೀಡುವ ಪ್ರಶಸ್ತಿ ಮತ್ತು ಸೌಲಭ್ಯಗಳನ್ನೂ ಫೋಗಟ್ ಅವರಿಗೆ ಕೃತಜ್ಞತೆಯಿಂದ ನೀಡಲಾಗುತ್ತದೆ. ವಿನೇಶ್, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕ್ರೀಡಾ ನೀತಿಯ ಪ್ರಕಾರ, ಹರಿಯಾಣ ಸರ್ಕಾರವು ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂ. ಮತ್ತು ಕಂಚಿನ ಪದಕ ವಿಜೇತರಿಗೆ 2.5 ಕೋಟಿ ರೂ. ನೀಡಲಾಗುತ್ತದೆ. ವಿನೇಶ್‌ ಅವರು ಫೈನಲ್‌ ತಲುಪಿದ್ದ ಕಾರಣ ಸೋತಿದ್ದರೂ ಬೆಳ್ಳಿ ಪದಕ ಖಚಿತವಾಗುತ್ತಿತ್ತು. ಈ ಕಾರಣಕ್ಕಾಗಿಯೇ ವಿನೇಶ್‌ ಅವರನ್ನು ಬೆಳ್ಳಿ ಪದಕ ವಿಜೇತೆ ಸ್ಥಾನಮಾನ ನೀಡಿ ಗೌರವಿಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ

Previous Post
ವಿನೇಶ್ ಫೋಗಟ್ ಅನರ್ಹತೆ ಗದ್ದಲ: ಪ್ರತಿಪಕ್ಷಗಳ ಸಭಾತ್ಯಾಗ
Next Post
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿಪಕ್ಷಗಳ ತೀವ್ರ ವಿರೋಧ, ಜೆಪಿಸಿಗೆ ಶಿಫಾರಸ್ಸು

Recent News