ಪಾಲ್ಘರ್ ನಕಲಿ ಎನ್‌ಕೌಂಟರ್‌ ಪ್ರಕರಣ: ಇಬ್ಬರು ಪೊಲೀಸರು ಬಂಧನ

ಪಾಲ್ಘರ್ ನಕಲಿ ಎನ್‌ಕೌಂಟರ್‌ ಪ್ರಕರಣ: ಇಬ್ಬರು ಪೊಲೀಸರು ಬಂಧನ

ಮುಂಬೈ, ಮಾ. 4: ಪಾಲ್ಘರ್ ಜಿಲ್ಲೆಯ ನಲಸೋಪಾರಾ ಪ್ರದೇಶದಲ್ಲಿ 2018ರಲ್ಲಿ ಕಳ್ಳತನ ಪ್ರಕರಣದ ಆರೋಪಿಯ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿ ಇಬ್ಬರು ಪೊಲೀಸರನ್ನು ವಿಶೇಷ ತನಿಖಾ ತಂಡವು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೀರಾ ಭಯಾಂಡರ್ ವಸಾಯಿ ಪೊಲೀಸ್ ಠಾಣೆಯ ಪೊಲೀಸ್‌ ಮಂಗೇಶ್ ಚವಾಣ್ ಮತ್ತು ಮನೋಜ್ ಸಕ್ಪಾಲ್ ಬಂಧಿತರು ಎಂದು ಗುರುತಿಸಲಾಗಿದೆ. ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಜೋಗಿಂದರ್ ರಾಣಾ ನಕಲಿ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಲು ಬಾಂಬೆ ಹೈಕೋರ್ಟ್ ಎಸ್‌ಐಟಿಯನ್ನು ಸ್ಥಾಪಿಸಲು ಆದೇಶಿಸಿತ್ತು.
ರಾಣಾ ಅವರ ಸಹೋದರ ಸುರೇಂದ್ರ ರಾಣಾ ಅವರು ನಕಲಿ ಎನ್‌ಕೌಂಟರ್‌ನ್ನು ನಲಸೋಪಾರಾದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸ್ಥಳೀಯ ಅಪರಾಧ ವಿಭಾಗದ ಪೊಲೀಸರಾದ ಮನೋಜ್ ಸಕ್ಪಾಲ್ ಮತ್ತು ಹೆಡ್ ಪೊಲೀಸ್ ಕಾನ್‌ಸ್ಟೆಬಲ್ ಮಂಗೇಶ್ ಚವಾಣ್ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಪೊಲೀಸರು 2023ರಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ ಶಿಕ್ಷೆ) ಮತ್ತು 201 (ಸಾಕ್ಷ್ಯ ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಆರೋಪಿ ಪೊಲೀಸರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಮಾರ್ಚ್ 11 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಮಂಜುಷಾ ದೇಶಪಾಂಡೆ ಅವರ ಪೀಠವು ತನಿಖೆಯ ಪ್ರಗತಿಯ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿತ್ತು. 2018ರಲ್ಲಿ ಥಾಣೆ ಪೊಲೀಸ್ ಕಮಿಷನರ್ ಜೈಜೀತ್ ಸಿಂಗ್ ನೇತೃತ್ವದ ಎಸ್‌ಐಟಿ ರಚನೆಯಾದ ನಂತರ ಯಾವುದೇ ಮಹತ್ವದ ಬೆಳವಣಿಗೆ ಪ್ರಕರಣದಲ್ಲಿ ಆಗಿಲ್ಲ ಎಂದು ಗಮನಿಸಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಾದ ನಂತರ ಅತ್ಯಗತ್ಯವಾದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಪೊಲೀಸರನ್ನು ನ್ಯಾಯಾಲಯ ಟೀಕಿಸಿದೆ. 2023ರ ನವೆಂಬರ್‌ನಲ್ಲಿ 12 ವಾರಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ ಎಂದು ಉಲ್ಲಾಸ್‌ನಗರದ ಉಪ ಪೊಲೀಸ್ ಆಯುಕ್ತರು ನೀಡಿದ ಭರವಸೆಗಳ ಸಿಂಧುತ್ವವನ್ನು ಸಹ ಕೂಡ ಪ್ರಶ್ನಿಸಿತ್ತು. ತನಿಖೆಯ ಪ್ರತಿಯೊಂದು ಸಣ್ಣ ಅಂಶವನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ ಮತ್ತು ಪೊಲೀಸ್ ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಜಿಲ್ಲಾಧಿಕಾರಿಯವರೊಂದಿಗೆ ವಿಚಾರಣೆ ನಡೆಸಿ ಮುಂದಿನ ವಿಚಾರಣೆಯಲ್ಲಿ ಪ್ರಕರಣದ ಬೆಳವಣಿಗೆಗಳ ಬಗ್ಗೆ ವಿವರವಾದ ಹೇಳಿಕೆ ನೀಡುವಂತೆ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಪಿಪಿ ಶಿಂಧೆ ಅವರನ್ನು ಕೋರಿದ್ದು, ಸೋಮವಾರಕ್ಕೆ ಪ್ರಕರಣವನ್ನು ಮುಂದೂಡಲಾಗಿತ್ತು.
ಜೋಗಿಂದರ್ ರಾಣಾ ಅವರ ಸಹೋದರ ಸುರೇಂದ್ರ ರಾಣಾ ಅವರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ತನಿಖೆ ಅಥವಾ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಯನ್ನು ಕೋರಿ 2018ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು, ನಂತರ ಪ್ರಕರಣವು ಭಾರೀ ಸುದ್ದು ಮಾಡಿದೆ. ಎನ್‌ಕೌಂಟರ್‌ಗೆ ಸಂಬಂಧಿಸಿದ ವೀಡಿಯೊಗಳು ಮತ್ತು ಫೋಟೋಗಳು ಸೇರಿದಂತೆ ಸಾಕಷ್ಟು ಪುರಾವೆಗಳ ಹೊರತಾಗಿಯೂ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದರು ಮತ್ತು ಬದಲಿಗೆ ಆಕಸ್ಮಿಕ ಸಾವು ಎಂದು ವರದಿಯನ್ನು ದಾಖಲಿಸಿದ್ದಾರೆ ಎಂದು ರಾಣಾ ಅವರು ದೂರಿನಲ್ಲಿ ಆರೋಪಿಸಿದ್ದರು.

Previous Post
ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ತಮ್ಮ ಇಲಾಖೆಯ ಅನುದಾನದಿಂದ 10 ಕೋಟಿ ನೀಡಿದ ಡಿ ಕೆ ಶಿವಕುಮಾರ್‌
Next Post
18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ದೆಹಲಿ ಸರ್ಕಾರದಿಂದ ತಿಂಗಳಿಗೆ 1 ಸಾವಿರ ರೂ.

Recent News