ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಶನಿವಾರ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಿಡಿಪಿ ಅಧಿಕಾರಕ್ಕೆ ಬಂದರೆ ಉಚಿತ 200 ಯೂನಿಟ್ ವಿದ್ಯುತ್ ನೀಡುವುದಾಗಿ ಮತ್ತು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಫ್ತಿ, ದೇವಸ್ಥಾನಗಳು, ಮಸೀದಿಗಳು ಮತ್ತು ಗುರುದ್ವಾರಗಳಿಗೆ ತಮ್ಮ ಪಕ್ಷವು ಉಚಿತ ವಿದ್ಯುತ್ ಅನ್ನು ಖಚಿತಪಡಿಸುತ್ತದೆ ಎಂದು ಅವರು ಭರವಸೆ ನೀಡಿದರು. ತಮ್ಮ ಪಕ್ಷವು ಗುತ್ತಿಗೆ ಶಿಕ್ಷಕರ ಗೌರವಧನವನ್ನು ಹೆಚ್ಚಿಸಲಿದೆ. ಇನ್ನು ಕಂಬಿಗಳ ಹಿಂದೆ ಇರುವವರಿಗೆ ಉಚಿತ ಕಾನೂನು ಸೌಲಭ್ಯ ಒದಗಿಸಲಾಗುವುದು ಎಂದು ಅವರು ಹೇಳಿದರು.
ಮೈತ್ರಿ ಬಗ್ಗೆ ಮುಫ್ತಿ ಏನಂದ್ರು?: ಮುಂಬರುವ ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಮುಫ್ತಿ, ಆ ಎರಡೂ ಪಕ್ಷಗಳು ಯಾವುದೇ ಅಜೆಂಡಾ ಹೊಂದಿಲ್ಲ ಮತ್ತು ಕೇವಲ ಸೀಟು ಹಂಚಿಕೊಂಡು ಅಧಿಕಾರಕ್ಕೆ ಬರುವುದಷ್ಟೇ ಅವರ ಮೈತ್ರಿ ಉದ್ದೇಶ. ತಮ್ಮ ಪಕ್ಷವು ಯಾವುದೇ ಅಜೆಂಡಾ ಇಲ್ಲದೇ ಕೇವಲ ಸೀಟು ಹಂಚಿಕೆಯ ಮಾತುಕತೆಯಿಂದಾಗಿ ಯಾವುದೇ ಮೈತ್ರಿ ಅಡಿಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದರು. ನಮ್ಮ ಅಜೆಂಡಾವನ್ನು ಎನ್ಸಿ ಮತ್ತು ಕಾಂಗ್ರೆಸ್ ಒಪ್ಪಿದರೆ ಅವರು ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲಿ. ನಾವೂ ಅವರನ್ನು ಬೆಂಬಲಿಸುತ್ತೇವೆ. ನನಗೆ ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸುವುದು ಎಲ್ಲಕ್ಕಿಂತ ಮುಖ್ಯವಾಗಿದೆ. 2014 ರಿಂದ 2018 ರವರೆಗೆ ಬಿಜೆಪಿಯೊಂದಿಗೆ ತಮ್ಮ ಪಕ್ಷದ ಮೈತ್ರಿ ಕುರಿತು ಮಾತನಾಡಿದ ಮುಫ್ತಿ, ‘ನಾವು ಈ ಹಿಂದೆ ಮೈತ್ರಿ ಮಾಡಿಕೊಂಡಾಗ ನಮಗೆ ಒಂದು ಅಜೆಂಡಾ ಇತ್ತು, ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ, ಅವರು ನಮ್ಮ ಅಜೆಂಡಾವನ್ನು ಒಪ್ಪಿದ ಬಳಿಕವಷ್ಟೇ ಮೈತ್ರಿ ಮಾಡಿಕೊಂಡಿದ್ದೆವು.
ಶಾರದಾ ಪೀಠಕ್ಕೆ ಮಾರ್ಗ ಓಪನ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಹಿಂದೂ ಯಾತ್ರಾಸ್ಥಳ ಶಾರದಾ ಪೀಠಕ್ಕೆ ಮಾರ್ಗವನ್ನು ತೆರೆಯಲು ಮತ್ತು ಪಾಕಿಸ್ತಾನದೊಂದಿಗೆ ರಾಜಿ ಮತ್ತು ಸಂವಾದವನ್ನು ತಮ್ಮ ಪಕ್ಷವು ಬಯಸುತ್ತದೆ ಎಂದು ಅವರು ಹೇಳಿದರು. ನಾಗರಿಕರಿಗಾಗಿ ನಿಯಂತ್ರಣ ರೇಖೆ (ಎಲ್ಒಸಿ) ತೆರೆಯುವ ಮೂಲಕ ಜನರ-ಜನರ ನಡುವಿನ ಸಂಬಂಧವನ್ನು ಸುಧಾರಿಸಲು ಅವರು ಕರೆ ನೀಡಿದರು.