ಪೂಜಾ ಖೇಡ್ಕರ್ ಬಳಿಕ ಅಭಿಷೇಕ್ ಸಿಂಗ್ ಆಯ್ಕೆ ಕುರಿತು ವಿವಾದ

ಪೂಜಾ ಖೇಡ್ಕರ್ ಬಳಿಕ ಅಭಿಷೇಕ್ ಸಿಂಗ್ ಆಯ್ಕೆ ಕುರಿತು ವಿವಾದ

ನವದೆಹಲಿ, ಜು. 17: ತರಬೇತಿ ನಿರತ (ಪ್ರೊಬೇಷನರಿ) ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಉದ್ಯೋಗ ಪಡೆಯಲು ನಕಲಿ ಅಂಗವೈಕಲ್ಯ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ ಎಂಬ ಆರೋಪದ ನಡುವೆ, ಇದೀಗ ಮತ್ತೊಬ್ಬ ಮಾಜಿ ಅಧಿಕಾರಿಯನ್ನು ಅಂಗವಿಕಲತೆಯ ಮಾನದಂಡದ ಅಡಿಯಲ್ಲಿ ಆಯ್ಕೆ ಮಾಡಿರುವ ಕುರಿತು ಪ್ರಶ್ನೆಗಳು ಎದ್ದಿವೆ.

ನಟನಾಗಲು ಕಳೆದ ವರ್ಷ ರಾಜೀನಾಮೆ ನೀಡಿರುವ 2011 ರ ಬ್ಯಾಚ್ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಅವರ ನೃತ್ಯ ಮತ್ತು ಜಿಮ್ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಟೀಕೆಗೆ ಒಳಗಾಗಿದ್ದಾರೆ. ಹಲವಾರು ಬಳಕೆದಾರರು ಅಭಿಷೇಕ್ ಸಿಂಗ್ ಅವರು ಹಂಚಿಕೊಂಡಿರುವ ವಿಡಿಯೋಗಳಿಗೆ ಕಾಮೆಂಟ್ ಮಾಡಿದ್ದು, ಆಡಳಿತ ಹುದ್ದೆಗಳಲ್ಲಿನ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಕಾಪಾಡುವಂತೆ ಆಗ್ರಹಿಸಿದ್ದಾರೆ.

ಯುಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯಲ್ಲಿ ರಿಯಾಯಿತಿ ಲಾಭಗಳನ್ನು ಪಡೆದುಕೊಳ್ಳಲು ಸಿಂಗ್ ತನಗೆ ಚಲನಶೀಲತೆ ಅಂಗವೈಕಲ್ಯವಿದೆ ಎಂದು ಹೇಳಿಕೊಂಡಿದ್ದರು. ಆರೋಪಗಳಿಗೆ ಪ್ರತಿಕ್ರಿಯಿಸಿದ ಅಭಿಷೇಕ್ ಸಿಂಗ್, ಮೀಸಲಾತಿಯನ್ನು ಬೆಂಬಲಿಸುವುದಕ್ಕಾಗಿ ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ನಾನು ಯಾವುದೇ ಟೀಕೆಯಿಂದ ಪ್ರಭಾವಿತನಾಗಿರದಿದ್ದರೂ ನನ್ನ ಬೆಂಬಲಿಗರು ಕೇಳಿಕೊಂಡಿದ್ದರಿಂದ ಇದೇ ಮೊದಲ ಬಾರಿಗೆ ನನ್ನ ಟೀಕಾಕಾರರಿಗೆ ಉತ್ತರಿಸುತ್ತಿದ್ದೇನೆ. ನಾನು ಮೀಸಲಾತಿಗಳನ್ನು ಬೆಂಬಲಿಸಲು ಆರಂಭಿಸಿದಾಗಿನಿಂದ ಮೀಸಲಾತಿ ವಿರೋಧಿಗಳು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರು ನನ್ನ ಜಾತಿ ಮತ್ತು ಉದ್ಯೋಗವನ್ನು ಪ್ರಶ್ನಿಸುತ್ತಾರೆ. ನಾನು ಪ್ರತಿಯೊಂದನ್ನೂ ಕಠಿಣ ಶ್ರಮ ಮತ್ತು ಧೈರ್ಯದಿಂದ ಸಾಧಿಸಿದ್ದೇನೆ,ಮೀಸಲಾತಿಯಿಂದಲ್ಲ ಎಂದು ಸಿಂಗ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ನಾನು ಯುನೈಟೆಡ್ ಬೈ ಬ್ಲಡ್ ಮತ್ತು ನೋ ಶೇಮ್ ಮೂವ್‌ಮೆಂಟ್‌ನಂತಹ ನನ್ನ ಉಪಕ್ರಮಗಳ ಮೂಲಕ ಸರ್ಕಾರದ ನೆರವಿಲ್ಲದೆ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇನೆ. ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿರಬೇಕು ಎಂದು ನಾನು ನಂಬಿದ್ದೇನೆ ಮತ್ತು ಆ ನಿಟ್ಟಿನಲ್ಲಿ ನಾನು ಶ್ರಮಿಸುತ್ತೇನೆ. ನಿಮ್ಮಲ್ಲಿ ಪ್ರತಿಭೆ ಇದೆ ಎಂದು ನೀವು ಭಾವಿಸಿದ್ದರೆ ಸರ್ಕಾರಿ ಉದ್ಯೋಗಗಳಿಗೆ ಪ್ರಯತ್ನಿಸುವುದನ್ನು ನಿಲ್ಲಿಸಿ ಮತ್ತು ವ್ಯವಹಾರ, ಕ್ರೀಡೆ ಅಥವಾ ನಟನೆಯಲ್ಲಿ ಏಳಿಗೆಯನ್ನು ಸಾಧಿಸಿ. ಅಲ್ಲಿ ಯಾವುದೇ ಮಿಸಲಾತಿಯಿಲ್ಲ ಎಂದಿರುವ ಸಿಂಗ್, ನಾನು ನನ್ನ ಪ್ರತಿಭೆ, ಆತ್ಮವಿಶ್ವಾಸ ಮತ್ತು ಧೈರ್ಯದ ಬಲದಿಂದ ಮುಂದೆ ಸಾಗುತ್ತೇನೆ, ಯಾರದೇ ಕೃಪೆಯಿಂದಲ್ಲ ಎಂದು ಹೇಳಿದ್ದಾರೆ.

ಪೂಜಾ ಖೇಡ್ಕರ್ ಅವರು ತಮ್ಮ ಖಾಸಗಿ ಆಡಿ ಕಾರಿಗೆ ಸೈರನ್ ಬಳಸಿ ವಿವಾದಕ್ಕೆ ಸಿಲುಕಿದ್ದಾರೆ. ಅಲ್ಲದೆ, ಕಿರಿಯ ಅಧಿಕಾರಿಗಳಿಗೆ ಲಭ್ಯವಿಲ್ಲದ ಪ್ರತ್ಯೇಕ ಮನೆ ಮತ್ತು ಕಾರು ಸವಲತ್ತುಗಳ ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ. 2023ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಪೂಜಾ ಖೇಡ್ಕರ್ ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಯಪಿಎಸ್‌ಸಿಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಖೇಡ್ಕರ್ ಅವರು ದೃಷ್ಟಿ ಮತ್ತು ಮಾನಸಿಕವಾಗಿ ದುರ್ಬಲರಾಗಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಅದನ್ನು ಖಚಿತಪಡಿಸಲು ಕಡ್ಡಾಯ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ನಿರಾಕರಿಸಿದ್ದರು.

ಪೂಜಾ ಖೇಡ್ಕರ್ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಏಕಸದಸ್ಯ ಸಮಿತಿಯನ್ನು ರಚಿಸಿದೆ. ಪೂಜಾ ಖೇಡ್ಕರ್ ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ವಜಾಗೊಳಿಸಬಹುದು ಎಂದು ಮೂಲಗಳು ತಿಳಿಸಿವೆ. ಸತ್ಯ ಮರೆಮಾಚಿ ಸುಳ್ಳು ಹೇಳಿರುವ ಆರೋಪಗಳು ಸಾಬೀತಾದರೆ, ಅವರು ಕ್ರಿಮಿನಲ್ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ವರದಿಯಾಗಿದೆ.

Previous Post
ಗರಿಷ್ಠ ಮಟ್ಟಕ್ಕೆ ತಲುಪಿದ ಹಣದುಬ್ಬರ
Next Post
ಇಮ್ರಾನ್ ಖಾನ್ ಪಕ್ಷ ನಿಷೇಧಿಸಲು ಪಾಕ್ ಸರ್ಕಾರ ನಿರ್ಧಾರ

Recent News