ಪ್ರತಿಭಟನೆಯಲ್ಲಿ ಯುವ ರೈತನ ಸಾವು ನ್ಯಾಯಂಗ ತನಿಖೆಗೆ ಆದೇಶಿಸಿದ ಹೈಕೋರ್ಟ್

ಪ್ರತಿಭಟನೆಯಲ್ಲಿ ಯುವ ರೈತನ ಸಾವು ನ್ಯಾಯಂಗ ತನಿಖೆಗೆ ಆದೇಶಿಸಿದ ಹೈಕೋರ್ಟ್

ನವದೆಹಲಿ : ಕಳೆದ ತಿಂಗಳಿನಿಂದ ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಆಂದೋಲನದ ವೇಳೆ ಸಾವನ್ನಪ್ಪಿದ ಯುವಕನ ಪ್ರಕರಣವನ್ನ ನ್ಯಾಯಾಂಗ ತನಿಖೆ ನಡೆಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗುರುವಾರ ಆದೇಶಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗುರ್ಮೀತ್ ಸಿಂಗ್ ಸಂಧವಾಲಿಯಾ ನೇತೃತ್ವದ ವಿಭಾಗೀಯ ಪೀಠವು ರೈತನ ಸಾವಿನ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಮತ್ತು ಇಬ್ಬರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಸಮಿತಿಯನ್ನು ರಚಿಸಲು ಆದೇಶಿಸಿದೆ.

ರೈತರ ಪ್ರತಿಭಟನೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಸಿಂಗ್ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಇಂದು ನಿರ್ದೇಶನ ನೀಡಿದೆ. ಈ ಮೊದಲು ಫೆಬ್ರವರಿ 29 ರಂದು, ರೈತರ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಕೋರಿ ಸಲ್ಲಿಸಲಾದ ಅರ್ಜಿಯ ಮೇಲೆ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

ಇಂದು ವಿಚಾರಣೆ ಬಳಿಕ ಈ ಸಂಜೆಯೊಳಗೆ ಎಡಿಜಿಪಿ ಶ್ರೇಣಿಯ ಅಧಿಕಾರಿಗಳ ಹೆಸರನ್ನು ಸಲ್ಲಿಸುವಂತೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಆದೇಶಿಸಲಾಯಿತು. ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯು ಘಟನೆಯ ಕುರಿತು ಒಂದು ತಿಂಗಳೊಳಗೆ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿತು. ಪ್ರಕರಣದಲ್ಲಿ ರೈತರ ಸಾವು ಮತ್ತು ಹರಿಯಾಣ ಪೊಲೀಸರು ಬಳಸಿದ ಬಲವು ರೈತರ ಪ್ರದರ್ಶನಕ್ಕೆ ಅನುಗುಣವಾಗಿದೆಯೇ ಎಂದು ಪರಿಶೀಲಿಸಲು ಮೂವರು ಸದಸ್ಯರ ಸಮಿತಿಗೆ ನಿರ್ದೇಶಿಸಿದೆ.

ಕಳೆದ ತಿಂಗಳು ಖಾನೌರಿ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ರೈತರ ನಡುವಿನ ಘರ್ಷಣೆಯಲ್ಲಿ ಪಂಜಾಬ್‌ನ ಬಟಿಂಡಾದ ರೈತ ಶುಭಕರನ್ ಸಿಂಗ್ ಸಾವನ್ನಪ್ಪಿದ್ದರು.
ಪಂಜಾಬ್ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿ ನಂತರ ಈ ಪ್ರಕರಣವನ್ನು ಹರಿಯಾಣ ಪೊಲೀಸರಿಗೆ ವರ್ಗಾಯಿಸಿದ್ದರು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಫೆ.12 ರಿಂದ ರೈತರು ಪ್ರತಿಭಟನೆ ಆರಂಭಿಸಿದ್ದಾರೆ.

Previous Post
ನಿಮ್ಮ ಹೃದಯ ಗೆಲ್ಲಲು ನಾನು ಇಲ್ಲಿಗೆ ಬಂದಿದ್ದೇನೆ ಜಮ್ಮು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
Next Post
ಲೋಕಸಭೆ ಚುನಾವಣೆ: ಶೇ.50 ರಷ್ಟು ಅಭ್ಯರ್ಥಿಗಳ ಬಗ್ಗೆ ನಿರ್ಣಯ: ಡಿಸಿಎಂ ಡಿ.ಕೆ. ಶಿವಕುಮಾರ್

Recent News